ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಸ್ಮರಣಾರ್ಥ ಪುರಸ್ಕಾರ ನೀಡುತ್ತಿರುವ ವಚನ ಟಿ. ವಿ.

ಕಲಬುರಗಿ:ನ.27: ವಚನ ಟಿ. ವಿ.ಯ ಪರಿಶ್ರಮಕ್ಕೆ ಮೂರು ದಶಕಗಳ ಅನುಭವವಿದ್ದು ಈಗ ಒಂದು ವರ್ಷ ಪೂರೈಸಿದೆ. ತದ ನಿಮಿತ್ಯ ಸಪ್ತಸಾಧಕರ ರಾಷ್ಟ್ರೀಯ ಪುರಸ್ಕಾರಗಳನ್ನು ನೀಡುತ್ತಿರುವುದು ಅಭಿನಂದನಿಯ. ದುಬೈನಲ್ಲಿ 29ನೇ ನವೆಂಬರ್‍ನಂದು ವಚನ ಟಿ.ವಿ. ರಾಷ್ಟ್ರೀಯ ಪುರಸ್ಕಾರ ಸಮಾರಂಭ ಜರುಗಲಿದ್ದು, ಕಾಯಕ ದಾಸೋಹ ಹಾಗೂ ಅನುಭಾವ ತತ್ವಗಳನ್ನು ಪ್ರಚಾರ ಮಾಡಿದ ಒಟ್ಟು ಏಳು ಮಹನೀಯರ ಹೆಸರಿನಲ್ಲಿ ರಾಷ್ಟ್ರೀಯ ಪುರಸ್ಕಾರ ನೀಡುವ ನಿರ್ಣಯದಲ್ಲಿ ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಸ್ಮರಣಾರ್ಥ ಪುರಸ್ಕಾರ ಪ್ರಶಸ್ತಿ ಕೊಡುತ್ತಿರುವುದು ಇಡೀ ಕಲ್ಯಾಣ ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ.
ಪೂಜ್ಯ ಡಾ. ಅಪ್ಪಾಜಿಯವರು ಅನ್ನದಾಸೋಹ ಶಿಕ್ಷಣ ದಾಸೋಹ, ತ್ರಿಕಾಲ ಪೂಜೆ ಮಾಡುತ್ತಾ ಶಿಕ್ಷಣಕ್ಕೆ ಒತ್ತುಕೊಟ್ಟು ಇಂದು ವಿಶ್ವವಿದ್ಯಾಲಯದ ಮಟ್ಟಿಗೆ ಬೆಳೆಸಿದ ಕೀರ್ತಿ ಅವರದ್ದಾಗಿದೆ. ಕಾಯಕ, ದಾಸೋಹ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ಅವರ ಕೆಲಸವು ಅಸಂಖ್ಯಾತ ಜನರ ಜೀವನದ ಮೇಲೆ ಆಳವಾದ ಮತ್ತು ಶಾಶ್ವತವಾದ ಪರಿಣಾಮವನ್ನು ಬೀರಿದೆ. ಅಪ್ಪಾಜಿಯವರ ಸೇವೆ, ಸಾಮಾಜಿಕ ಸುಧಾರಣೆಯ ತತ್ವಗಳನ್ನು ಒಳಗೊಂಡಿರುವ ಅವರ ಜೀವಿತಾವಧಿಯ ಕೆಲಸವು ಇಂದು ಅನೇಕರಿಗೆ ಸ್ಫೂರ್ತಿಯಾಗಿದೆ. ಡಾ.ಅಪ್ಪಾಜಿಯವರ ಜೀವನ, ಸಾಮಾಜಿಕ ಕಲ್ಯಾಣದ ಬಗ್ಗೆ ಅವರಿಗಿದ್ದ ಆಳವಾದ ಬದ್ಧತೆ ಹೇಗೆ ಅರ್ಥಪೂರ್ಣ ಬದಲಾವಣೆಗೆ ಕಾರಣವಾಗಬಹುದು ಎಂಬುದಕ್ಕೆ ಪ್ರಬಲ ಉದಾಹರಣೆಯಾಗಿದೆ.
ಇದೆಲ್ಲವೂ ಮನಗಂಡು ವಚನ ಟಿ. ವಿ. ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಸ್ಮರಣಾರ್ಥ ಸಾಧನೆಗೈದ ಮಹನೀಯರಿಗೆ ಪುರಸ್ಕಾರ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯವೆಂದು, ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ವಚನ ಟಿ.ವಿ.ಯು ಕೈಗೊಂಡ ಈ ನಿರ್ಣಯಕ್ಕೆ ಸಂತಸ ವ್ಯಕ್ತಪಡಿಸಿ, ಶುಭವಾಗಲೆಂದು ಹಾರೈಸಿದ್ದಾರೆ. ಹಾಗೆಯೇ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಹರ್ಷವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.