
ಬೀದರ:ಜ.೩೧: ವಚನ ಸಾಹಿತ್ಯ ಜನ ಪರ ಸಾಹಿತ್ಯವಾಗಿದೆ ಎಂದು ತೆಲಂಗಾಣದ ವಾರಂಗಲ್‌ನ ಪಾಲ್ಕುರಿಕೆ ಸೋಮನಾಥ ಕಲಾ ಪೀಠದ ಅಧ್ಯಕ್ಷ ಡಾ. ರಾಪುಲು ಸತ್ಯನಾರಾಯಣ ಹೇಳಿದರು.
ಬಸವ ಸೇವಾ ಪ್ರತಿಷ್ಠಾನ ವತಿಯಿಂದ ಇಲ್ಲಿಯ ಬಸವಗಿರಿಯಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ೨೪ನೇ ವಚನ ವಿಜಯೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪಾಲ್ಕುರಿಕೆ ಸೋಮನಾಥ ಅವರು ೧೨ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಅನುಯಾಯಿ ಆಗಿದ್ದು, ವಚನ ಸಾಹಿತ್ಯದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಬಸವಣ್ಣ ಹಾಗೂ ಶಿವ ಭಕ್ತರ ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ಪಾಲ್ಕುರಿಕೆ ಸೋಮನಾಥ ಶರಣ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ರಚಿಸಿದ ಬಸವ ಪುರಾಣ ಕೃತಿ ಶರಣ ಸಾಹಿತ್ಯದ ಮಹತ್ವದ ಕೃತಿ ಎನಿಸಿದೆ ಎಂದು ಹೇಳಿದರು.
ಪಾಲ್ಕುರಿಕೆ ಅವರ ವಂಶಸ್ಥರು ಮಹಾರಾಷ್ಟ್ರದಲ್ಲಿ ಈಗಲೂ ಬಸವ ಜಯಂತಿ ಆಚರಿಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.
ಶರಣರು ಕೊಟ್ಟು ಹೋದ ವಚನ ಸಾಹಿತ್ಯದ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸುವುದು ವಚನ ವಿಜಯೋತ್ಸವ ಆಚರಣೆಯ ಉದ್ದೇಶವಾಗಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಗಂಗಾAಬಿಕೆ ಅಕ್ಕ ಹೇಳಿದರು.
ಶರಣರು ತ್ಯಾಗ, ಬಲಿದಾನ ಮಾಡಿ ವಚನ ಸಾಹಿತ್ಯ ರಕ್ಷಿಸಿದ್ದಾರೆ. ವಚನ ಸಾಹಿತ್ಯ ಸದ್ಗುಣ ಹಾಗೂ ಮಾನವೀಯ ಮೌಲ್ಯಗಳ ಕಣಜವಾಗಿದೆ ಎಂದು ತಿಳಿಸಿದರು.
ಕಾಯಕ, ದಾಸೋಹ, ಸಮಾನತೆಯ ಸಿದ್ಧಾಂತ ವಚನಗಳಲ್ಲಿ ಕಾಣಬಹುದು. ೧೨ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಎಲ್ಲ ಜಾತಿ, ಜನಾಂಗದವರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು ಎಂದು ಸ್ಮರಿಸಿದರು.
ಸಮಾನತೆ ಲಿಂಗಾಯತ ಧರ್ಮದ ಜೀವಾಳ ಹಾಗೂ ಸೌಹಾರ್ದ ಗುರಿಯಾಗಿದೆ ಎಂದು ಖ್ಯಾತ ಸಾಹಿತಿ ಡಾ. ಬಸವರಾಜ ಸಬರದ ಹೇಳಿದರು.
ಧರ್ಮ ಮತ್ತು ಕ್ರಾಂತಿ ಎರಡೂ ಬೇರೆ ಬೇರೆ. ಎರಡನ್ನೂ ಕೂಡಿಸಿದವರು ಬಸವಣ್ಣ. ಅವರು ಧರ್ಮವೇ ಕ್ರಾಂತಿ, ಕ್ರಾಂತಿಯೇ ಧರ್ಮ ಎಂದಿದ್ದರು ಎಂದು ತಿಳಿಸಿದರು.
ಫ್ರಾನ್ಸ್ ಹಾಗೂ ಜಾಗತಿಕ ಕ್ರಾಂತಿಗಳಿಗಿAತ ಬಸವಣ್ಣನವರು ಮಾಡಿದ ಕ್ರಾಂತಿ ವಿಶಿಷ್ಟವಾಗಿದೆ. ಶರಣರು ಮರಣಕ್ಕೆ ಹೆದರುತ್ತಿರಲಿಲ್ಲ. ಅವರಿಗೆ ಮರಣವೇ ಮಹಾನವಮಿಯಾಗಿತ್ತು ಎಂದು ಹೇಳಿದರು.
ವಚನ ಸಾಹಿತ್ಯ ನಿತ್ಯ ಸತ್ಯವಾಗಿದೆ. ಅದು ಎಂದೆAದೂ ಶಾಶ್ವತವಾಗಿರುತ್ತದೆ. ಎಲ್ಲರೂ ವಚನದ ದಾರಿಗೆ ಬರುತ್ತಾರೆ. ವಚನ ವಿಜಯೋತ್ಸವ ಎಲ್ಲರದ್ದಾಗಿದೆ ಎಂದು ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ತಿಳಿಸಿದರು.
ವಚನ ಸಾಹಿತ್ಯವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿದರೆ ಕೋಟಿ ಕೋಟಿ ಜನರನ್ನು ತಲುಪುತ್ತದೆ ಎಂದು ಹೇಳಿದರು.
ಲಿಂಗಾಯತ ಧರ್ಮ ಸ್ವತಂತ್ರ ಧರ್ಮ. ನಾವು ಯಾವುದೇ ಧರ್ಮದ ವಿರೋಧಿಗಳಲ್ಲ. ಬಸವಣ್ಣನವರ ತತ್ವಗಳ ಪ್ರಸಾರಕರು ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ತಿಳಿಸಿದರು.
ವಚನ ವಿಜಯೋತ್ಸವ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಚಂದ್ರಕಾAತ ಮಿರ್ಚೆ ಆಶಯ ನುಡಿ ಆಡಿದರು. ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ, ಆಂಧ್ರಪ್ರದೇಶದ ಬಪತಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕುರುಪತಿ ನೀಲಕಂಠೇಶ್ವರ ಪ್ರಸಾದ, ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬು ವಾಲಿ, ಜಗನ್ನಾಥ ಹೆಬ್ಬಾಳೆ, ಕುಶಾಲ ಪಾಟೀಲ ಖಾಜಾಪುರ, ಶರಣಪ್ಪ ಮಿಠಾರೆ, ಸೋಮಶೇಖರ ಪಾಟೀಲ ಗಾದಗಿ, ಬಿ.ಜಿ.ಶೆಟಕಾರ್, ಸಿದ್ದಯ್ಯ ಕಾವಡಿಮಠ, ಶ್ರೀಕಾಂತ ಸ್ವಾಮಿ, ಪ್ರಕಾಶ ಟೊಣ್ಣೆ, ರಮೇಶ ಪಾಟೀಲ ಸೋಲಪುರ, ಭಾಲ್ಕಿ ತಹಸೀಲ್ದಾರ್ ಮಹೇಶ ಪಾಟೀಲ, ಮಹಾನಗರ ಪಾಲಿಕೆ ಸದಸ್ಯ ರಾಜು ಚಿಂತಾಮಣಿ, ಡಾ.ವಿಜಯಶ್ರೀ ಸಬರದ, ಸುಭಾಷ ಹಮೀಲಪುರೆ, ರಾಜಕುಮಾರ ನಾಗೇಶ್ವರ, ಸೋಮನಾಥ ಅಮಲಾಪುರೆ, ಸುಭಾಷ ಮಡಿವಾಳ, ವಿಠ್ಠಲ ಕುಂಬಾರ, ಜಗನ್ನಾಥ ಜಮಾದಾರ್, ರಮೇಶ ಕಟ್ಟಿಮನಿ ಮತ್ತಿತರರು ಇದ್ದರು.
ವನಿತಾ ಗುಂಡಪ್ಪ ಬಳತೆ, ಡಾ. ದೇವಕಿ ಡಾ. ಅಶೋಕ ನಾಗೂರೆ ಗುರುಪೂಜೆ ನೇರವೇರಿಸಿದರು. ನೀಲಮ್ಮನ ಬಳಗದ ಶರಣೆಯರಿಂದ ವಚನ ವಿಜಯೋತ್ಸವದ ಸಮೂಹ ಗಾಯನ ನಡೆಯಿತು. ನೃತ್ಯಾಂಗನ ನಾಟ್ಯ ಮತ್ತು ಕಲಾ ಕೇಂದ್ರದ ಕಲಾವಿದರು ಆಕರ್ಷಕ ವಚನ ನೃತ್ಯ ನಡೆಸಿಕೊಟ್ಟರು. ರಾಜಮತಿ ಗಂಗು ನಿರೂಪಿಸಿದರು. ಕರಣ ಪಾಟೀಲ ವಂದಿಸಿದರು.

























