
ಕಲಬುರಗಿ:ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣ ಚಳವಳಿ ಕನ್ನಡ ನಾಡಿನ ಸಾಮಾಜಿಕ ಮತ್ತು ಸಾಹಿತ್ಯಿಕ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ ಎಂದು ನ್ಯಾಯವಾದಿ ಹಣಮಂತರಾಯ ಅಟ್ಟೂರ ಹೇಳಿದರು. ನಗರದ ಗುಬ್ಬಿ ಕಾಲನಿಯಲ್ಲಿ ಶ್ರಾವಣ ಮಾಸದ ನಿಮಿತ್ಯ ಅಮರಕಲಾ ತಂಡದಿಂದ ನಿವೃತ್ತ ಪ್ರಾಂಶುಪಾಲರಾದ ನೀಲಕಂಠ ಹಳಕಟ್ಟಿ ಯವರ ಮನೆಯ ಅಂಗಳದಿ ಭಕ್ತಿ ಸಂಪದ ಎಂಬ ಕಾರ್ಯಕ್ರಮದಲ್ಲಿ ಶರಣರ ವಚನಗಳೆ ನಮಗೆ ದಾರಿದೀಪ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುತ್ತ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮ ಹಾಗೂ ಅನೇಕ ಶರಣರು ತಮ್ಮ ಅನುಭವ ಮತ್ತು ಚಿಂತನೆಗಳನ್ನು ಸರಳವಾದ ವಚನಗಳ ಮೂಲಕ ಜನರಿಗೆ ತಿಳಿಸಿದರು.ಶರಣರ ವಚನಗಳ ಮುಖ್ಯ ಉದ್ದೇಶ ಸತ್ಯ, ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಮತ್ತು ನೈತಿಕ ಜೀವನವನ್ನು ಸಾರುವುದಾಗಿತ್ತು. ಜಾತಿ, ಮೇಲು-ಕೀಳು, ಮೂಢನಂಬಿಕೆ ಹಾಗೂ ಅಸಮಾನತೆಯನ್ನು ಶರಣರು ವಿರೋಧಿಸಿದರು.ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಸಂದೇಶವು ದುಡಿಮೆಯ ಮಹತ್ವವನ್ನು ತಿಳಿಸುತ್ತದೆ.
ಇಂದಿನ ಸಮಾಜದಲ್ಲಿಯೂ ಶರಣರ ವಚನಗಳ ಅಗತ್ಯ ಬಹಳಷ್ಟಿದೆ. ಜಾತಿ-ಧರ್ಮದ ಹೆಸರಿನಲ್ಲಿ ನಡೆಯುವ ಭೇದಭಾವ, ಅಸಮಾನತೆ, ದ್ವೇಷ ಮತ್ತು ಸ್ವಾರ್ಥಗಳು ಸಮಾಜಕ್ಕೆ ಹಾನಿ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಶರಣರ ಸಮಾನತೆ ಮತ್ತು ಮಾನವೀಯತೆಯ ಸಂದೇಶ ನಮಗೆ ಉತ್ತಮ ದಾರಿಯನ್ನು ತೋರಿಸುತ್ತದೆ.
ವಚನಗಳು ಕೇವಲ ಹಳೆಯ ಸಾಹಿತ್ಯವಲ್ಲ. ಅವು ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡುವ ಜೀವನ ಮೌಲ್ಯಗಳ ನಿಧಿ. ವಿದ್ಯಾರ್ಥಿಗಳು ವಚನಗಳನ್ನು ಓದುವುದರಿಂದ ಉತ್ತಮ ಚಿಂತನೆ, ಸತ್ಯನಿಷ್ಠೆ, ಶ್ರಮದ ಗೌರವ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯ ಭಾವನೆ ಬೆಳೆಸಿಕೊಳ್ಳಬಹುದು.
ಆದ್ದರಿಂದ ಶರಣರ ವಚನಗಳನ್ನು ನಾವು ಓದಬೇಕು, ಅರ್ಥಮಾಡಿಕೊಳ್ಳಬೇಕು ಮತ್ತು ಅವುಗಳಲ್ಲಿರುವ ಉತ್ತಮ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ವಚನಗಳನ್ನು ಓದುವುದಷ್ಟೇ ಅಲ್ಲ, ವಚನಗಳ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಗೌರವ ಎಂದು ಮಾರ್ಮಿಕವಾಗಿ ನುಡಿದರು.ಇದೆ ಸಂಧರ್ಭದಲ್ಲಿ ಅಮರಪ್ರಿಯಾ ಹಿರೇಮಠ ತಂಡದಿಂದ ವಚನ ಗಾಯನ ಮಾಡಿ ನೆರೆದವರ ಮನದಲ್ಲಿ ಭಕ್ತಿಯ ಭಾವ ತುಂಬಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ಮಹಾದೇವಿ ಹಳಕಟ್ಟಿ, ಸೋಮು ಕುಂಬಾರ, ಗೀತಾ ಹಳಕಟ್ಟಿ, ಬಸವರಾಜ ಕೊರವಾರ,ನೀಲಕಂಠ ಹಲಕಟ್ಟಿ,ಸೂರ್ಯಕಾಂತ ಸಿರಗಾಪುರ, ರವಿಕುಮಾರ ಜಮಶೆಟ್ಟಿ, ರಾಹುಲ ಹಳಕಟ್ಟಿ, ಚಿದಾನಂದ ತೋಟೆಪ್ಪನವರ,ಭೀಮಾಶಂಕರ ಕರದಳ್ಳಿ, ವೀರಣ್ಣ ತೊರವಿ, ಮಹಾಂತ ಸ್ವಾಮಿ ಸೇರಿದಂತೆ ಅನೇಕ ಜನ ಭಾಗವಹಿಸಿದರು.





























