ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ:ಜೂನ್ ಅಂತ್ಯದೊಳಗೆ ಕ್ರಿಯಾ ಯೋಜನೆ ಅನುಮೋದನೆ ಪಡೆದು ಕೆಲಸ ಪ್ರಾರಂಭಿಸಿ:ರಹೀಂ ಖಾನ್

ಕಲಬುರಗಿ:ಮೇ.28: ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಬಲಪಡಿಸುವ ಉದ್ದೇಶದಿಂದ ಪ್ರಸಕ್ತ 2025-26ನೇ ಸಾಲಿಗೆ ಕಲಬುರಗಿ ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಿಗೆ 15ನೇ ಹಣಕಾಸು, ಎಸ್.ಎಫ್.ಸಿ. ಅನಟೈಡ್ ಹಾಗೂ ಎಸ್.ಎಫ್.ಸಿ. ಕುಡಿಯುವ ನೀರು ಯೋಜನೆಗಳಡಿ 48.70 ಕೋಟಿ ರೂ. ಅನುದಾನ ನೀಡಿದ್ದು, ಜೂನ್ ಅಂತ್ಯದೊಳಗೆ ಕ್ರಿಯಾ ಯೋಜನೆ ಅನುಮೋದನೆ ಪಡೆದು ಕೆಲಸಗಳನ್ನು ಪ್ರಾರಂಭಿಸಬೇಕು ಎಂದು ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂ ಖಾನ್ ಹೇಳಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 15ನೇ ಹಣಕಾಸು ಯೋಜನೆಯಡಿ ಶಹಾಬಾದ ನಗರಸಭೆ, ಎಸ್.ಎಫ್.ಸಿ. ಅನಟೈಡ್ ಯೋಜನೆಯಡಿ ಶಹಾಬಾದ, ಕಾಳಗಿ ಸಂಸ್ಥೆಗಳು, ಎಸ್.ಎಫ್.ಸಿ. ಕುಡಿಯುವ ನೀರು ಯೋಜನೆಯಡಿ ಶಹಾಬಾದ, ಕಲಬುರಗಿ, ಕಾಳಗಿ ಪೌರ ಸಂಸ್ಥೆಗಳು ಮಾತ್ರ ಕ್ರಿಯಾ ಯೋಜನೆಗೆ ಅನುಮತಿ ಪಡೆದಿದ್ದು, ಉಳಿದ ಪೌರ ಸಂಸ್ಥೆಗಳು ಜೂನ್ ಅಂತ್ಯದೊಳಗೆ ಕ್ರಿಯಾ ಯೋಜನೆ ರೂಪಿಸಿ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳನ್ನು ಪ್ರಾರಂಭಿಸಬೇಕು ಎಂದರು.
ಪ್ರಸಕ್ತ ಸಾಲಿಗೆÉ 15ನೇ ಹಣಕಾಸು ಯೋಜನೆಯಡಿ 4,081 ಲಕ್ಷ ರೂ., ಎಸ್.ಎಫ್.ಸಿ. ಅನಟೈಡ್ ಯೋಜನೆಯಡಿ 713 ಲಕ್ಷ ರೂ. ಮತ್ತು ಎಸ್.ಎಫ್.ಸಿ. ಕುಡಿಯುವ ನೀರು ಯೋಜನೆ ಕೈಗೆತ್ತಿಕೊಳ್ಳಲು 76.32 ಲಕ್ಷ ರೂ. ಅನುದಾನ ಸೇರಿ ಒಟ್ಟಾರೆ 48.70 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಕುಡಿಯುವ ನೀರಿನ ಕಾಮಗಾರಿಗಳನ್ನು ಆದ್ಯತೆ ಮೇಲೆ ಪ್ರಾರಂಭಿಸಬೇಕು. ಶುಕ್ರವಾರ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯಲಿದೆ ಎಂದರು.
ಮಳೆಗಾಲ ಸಮೀಪಿಸುತ್ತಿರುವುದರಿಂದ ನಗರ ನಿವಾಸಿಗಳಿಗೆ ಕಲುಷಿತ ನೀರು ಪೂರೈಕೆಯಾಗದಂತೆ ಮುಖ್ಯಾಧಿಕಾರಿಗಳು ಎಚ್ಚರ ವಹಿಸಬೇಕು. ಕಲುಷಿತ ಕುಡಿಯುವ ನೀರು ಸೇವನೆಯಿಂದ ಯಾವುದೇ ಅವಘಡಗಳು ಸಂಭವಿಸಿದಲ್ಲಿ ಸಂಬಂಧಪಟ್ಟ ಮುಖ್ಯಾಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಸಚಿವರು, ಕುಡಿಯುವ ನೀರಿನ ಪೈಪಲೆನ್‍ಗಳ ನಿರ್ವಹಣೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಿ ಎಂದರು.
ನಗರ ನಿವಾಸಿಗಳಿಗೆ ಮೂಲಸೌಕರ್ಯ ಒದಗಿಸಲು ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸದೃಢ ಹೊಂದುವುದು ತುಂಬಾ ಅವಶ್ಯಕ. ಹೀಗಾಗಿ ಆಸ್ತಿ ಕರ, ನೀರಿನ ಕರ, ಗ್ರಂಥಾಲಯ ಕರ, ಜಾಹೀರಾತು ಕರ, ಟ್ರೇಡ್ ಲೈಸೆನ್ಸ್, ಮಳಿಗೆ ಕರವನ್ನು ಅಭಿಯಾನದ ರೂಪದಲ್ಲಿ ವಸೂಲು ಮಾಡಬೇಕು. ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟ್ರೇಡ್ ಲೈಸೆನ್ಸ್ ನೀಡಲು ಕ್ಯಾಂಪ್ ಆಯೋಜಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಮುಖ್ಯಮಂತ್ರಿಗಳ ನಗರೋತ್ಥಾನ ಹಂತ-4, 15ನೇ ಹಣಕಾಸು ಯೋಜನೆ, ಎಸ್.ಎಫ್.ಸಿ. ಯೋಜನೆ ವಿಶೇಷ ಅನುದಾನ, ಎಸ್.ಸಿ.ಪಿ-ಟಿ.ಎಸ್.ಪಿ, ಸ್ವಚ್ಛ ಭಾರತ್ ಮಿಷನ್ 2.0, ಕುಡಿಯುವ ನೀರು ಯೋಜನೆಗಳ ಕುರಿತು ಪರಾಮರ್ಶಿಸಿದ ಸಚಿವರು, ಕಳೆದ 3-4 ವರ್ಷದಿಂದ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ವೇಗ ನೀಡಿ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
9 ಇಂದಿರಾ ಕ್ಯಾಂಟೀನ್ ಮಂಜೂರು: ಕಲಬುರಗಿ ಜಿಲ್ಲೆಗೆ ಇಂದಿರಾ ಕ್ಯಾಂಟೀನ್ ಹಂತ-2 ರಲ್ಲಿ ಕಲಬುರಗಿ-2, ಶಹಾಬಾದ, ಅಳಂದ, ಅಫಜಲಪೂರ, ಜೇವರ್ಗಿ, ಸೇಡಂ, ವಾಡಿ, ಯಡ್ರಾಮಿಗೆ ತಲಾ 1 ಕ್ಯಾಂಟೀನ್ ಸೇರಿ ಒಟ್ಟು 9 ಇಂದಿರಾ ಕ್ಯಾಂಟೀನ್ ಮಂಜೂರು ಮಾಡಲಾಗಿದೆ. ಕೂಡಲೆ ಕಟ್ಟಡ ನಿರ್ಮಾಣ ಮಾಡಿ ಬಡವರಿಗೆ ಸಮರ್ಪಿಸಬೇಕು ಎಂದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ ದೌಲ ಮಾತನಾಡಿ, ಕಳೆದ 2024-25ನೇ ಸಾಲಿನಲ್ಲಿ 13 ಸ್ಥಳೀಯ ಸಂಸ್ಥೆಗಳಿಂದ 8,576.73 ಲಕ್ಷ ರೂ. ಬೇಡಿಕೆಗೆ ಎದುರಾಗಿ 5,222.15 ಲಕ್ಷ ರೂ. ಆಸ್ತಿ ತೆರಿಗೆ ವಸೂಲು ಮಾಡಿದೆ. ಅದೇ ರೀತಿಯಾಗಿ ಕಳೆದ ವರ್ಷದಲ್ಲಿ ನೀರಿನ ಕರ 9,478 ಲಕ್ಷ ರೂ. ಗಳ ಪೈಕಿ 1,534.89 ಲಕ್ಷ ರೂ., ಶಾಪ್ ಲೈಸೆನ್ಸ್‍ನಡಿ 1,048.48 ಲಕ್ಷ ರೂ. ಪೈಕಿ 165.33 ಲಕ್ಷ ರೂ. ಹಾಗೂ ಟ್ರೇಡ್ ಲೈಸೆನ್ಸ್‍ನಡಿ 330.88 ಲಕ್ಷ ರೂ. ಪೈಕಿ 156.03 ಲಕ್ಷ ರೂ. ವಸೂಲು ಮಾಡಿದೆ ಎಂದು ಸಭೆಗೆ ಮಾಹಿತಿ ನೀಡಿದಲ್ಲದೆ ಅನಧಿಕೃತ ಕಟ್ಟಡಗಳಿಗೆ ‘ಬಿ’ ಖಾತಾ ನೀಡಲು ಕಳೆದ ಫೆಬ್ರವರಿ 18 ರಿಂದ ಇದುವರೆಗೆ 10,386 ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ 6,177 ಆಸ್ತಿಗಳಿಗೆ ‘ಬಿ’ ಖಾತಾ ನೀಡಲಾಗಿದೆ. ಇದರಿಂದ ಯು.ಎಲ್.ಬಿ.ಗಳಿಗೆ 263.25 ಲಕ್ಷ ರೂ. ಕರ ಜಮೆಯಾಗಿದೆ ಎಂದರು.
ಮುಖ್ಯಮಂತ್ರಿಗಳ ನಗರೋತ್ಥಾನ ಹಂತ-4 ರಲ್ಲಿ ಜಿಲ್ಲೆಯ ವಿವಿಧ ಪೌರ ಸಂಸ್ಥೆಗಳಿಗೆ 19.16 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ತೆಗೆದುಕೊಂಡ 173 ಕಾಮಗಾರಿಗಳ ಪೈಕಿ 54 ಮಾತ್ರ ಪೂರ್ಣಗೊಂಡಿವೆ. 15ನೇ ಹಣಕಾಸು ಯೋಜನೆಯಡಿ ಜನರಲ್ ಬೇಸಿಕ್ ಗ್ರ್ಯಾಂಟ್, ಟೈಡ್ ಗ್ರ್ಯಾಂಟ್, ಅನಟೈಡ್ ಗ್ರ್ಯಾಂಟ್ ಯೋಜನೆಯಡಿ 2020-21 ರಿಂದ 2024-25ರ ವರೆಗೆ 207.19 ಕೋಟಿ ರೂ. ಬಿಡುಗಡೆಯಾಗಿದ್ದು, ಇದರಲ್ಲಿ 142.27 ಕೋಟಿ ರೂ. ಖರ್ಚು ಮಾಡಿ 1,837 ಕಾಮಗಾರಿಗಳ ಪೈಕಿ 1,413 ಕಾಮಗಾರಿ ಪೂರ್ಣಗೊಳಿಸಿದ್ದು, 424 ಕಾಮಗಾರಿ ಪ್ರಗತಿಯಲ್ಲಿವೆ. ಎಸ್.ಎಫ್.ಸಿ. ಮುಕ್ತ ನಿಧಿಯಡಿ ಕಳೆದ 4 ಆರ್ಥಿಕ ಸಾಲಿನಲ್ಲಿ ಬಿಡುಗಡೆಯಾದ 47.89 ಕೋಟಿ ರೂ. ಮೊತ್ತದಲ್ಲಿ 41.61 ಕೋಟಿ ರೂ. ಖರ್ಚು ಮಾಡಿ 408ರ ಪೈಕಿ 310 ಕಾಮಗಾರಿಗಳನ್ನು ಪೂರ್ಣಗೊಳಿಸಿದೆ ಎಂದು ವಿವಿಧ ಯೋಜನೆಗಳ ಅಂಕಿ-ಸಂಖ್ಯೆಯನ್ನು ಡಿ.ಯು.ಡಿ.ಸಿ ಕಚೇರಿಯ ಕಾರ್ಯನಿರ್ವಾಹಕ ಅಭಿಯಂತ ಸೋಮು ರಾಠೋಡ ಅವರು ಸಭೆಗೆ ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ಮಹಾನಗರ ಪಾಲಿಕೆಯ ಮಹಾಪವರರಾದ ಯಲ್ಲಪ್ಪ ನಾಯ್ಕೋಡಿ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಪೌರಾಡಳಿತ ನಿರ್ದೇಶನಾಲಯದ ಅಭಿಯಂತ ರಾಧಾಕೃಷ್ಣ, ಅಧೀಕ್ಷಕ ಅಭಿಯಂತ ಬಸವರಾಜ, ಸಚಿವರ ಆಪ್ತ ಕಾರ್ಯದರ್ಶಿ ಡಾ. ಕೆ.ಮುರಳಿಧರ ಸೇರಿದಂತೆ ಜಿಲ್ಲೆಯ ಪೌರ ಸಂಸ್ಥೆಗಳ ಮುಖ್ಯಸ್ಥರು ಇದ್ದರು.