ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಬಜೆಟ್ ಮಹತ್ವಪೂರ್ಣ: ಪ್ರಕಾಶ್ ಗಾದಗಿ

ಬೀದರ:ಫೆ.೨:ಕೇಂದ್ರ ಸರ್ಕಾರ ಮಂಡಿಸಿರುವ ೨೦೨೬-೨೭ರ ಬಜೆಟ್ ದೇಶದ ಕೃಷಿ, ಕೈಗಾರಿಕೆ, ರೈಲ್ವೆ, ಆರೋಗ್ಯ, ಕ್ರೀಡೆ, ಶಿಕ್ಷಣ, ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಮಹತ್ವ ನೀಡಿರುವ ಸರ್ವಾಂಗೀಣ ಬಜೆಟ್ ಆಗಿದೆ ಎಂದು ಗಾದಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಗಾದಗಿ ಹೇಳಿದ್ದಾರೆ.

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಗುರಿಯನ್ನು ಆಧಾರವಾಗಿ ಹೊಂದಿರುವ ಈ ಬಜೆಟ್, ಆತ್ಮನಿರ್ಭರ ಭಾರತ ಯೋಜನೆಗೆ ೨೦೦೦ ಕೋಟಿ ರೂಪಾಯಿ, ಭವಿಷ್ಯದ ಚಾಂಪಿಯನ್‌ಗಳಿಗಾಗಿ ೧೦,೦೦೦ ಕೋಟಿ ರೂಪಾಯಿ ಅನುದಾನ, ಮಧ್ಯಮ ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಸಹಾಯ, ಆರೋಗ್ಯ ಕ್ಷೇತ್ರದಲ್ಲಿ ಹೊಸ ಆಸ್ಪತ್ರೆಗಳ ಆರಂಭ ಸೇರಿದಂತೆ ಹಲವು ಮಹತ್ವದ ಘೋಷಣೆಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದರು.

ರೈತರಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಪಶುಸಂಗೋಪನೆ ಹಾಗೂ ತೆಂಗು, ಗೋಡಂಬಿ, ಶ್ರೀಗಂಧ, ಕೋಕೋ ಬೆಳೆಗಳಿಗೆ ಉತ್ತೇಜನ ನೀಡಲಾಗಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ದಿನಸಿ ಅಂಗಡಿ ಆರಂಭಿಸುವವರಿಗೆ ಸಹಾಯಧನ ನೀಡುವ ಯೋಜನೆ, ಪ್ರತಿ ಜಿಲ್ಲೆಯಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆ ಘೋಷಣೆ ಸಹ ಗಮನಾರ್ಹವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಕರಾವಳಿ ???????ಕಿಂಗ್ ಅಭಿವೃದ್ಧಿ ಹಾಗೂ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಹೈ ಸ್ಪೀಡ್ ರೈಲು ಕಾರಿಡಾರ್ ಯೋಜನೆಗಳು ರಾಜ್ಯದ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿವೆ. ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆಯಡಿ ಖಾದಿ ಗ್ರಾಮ ಉದ್ಯೋಗ ಯೋಜನೆ ಆರಂಭಿಸಿರುವುದು ಗ್ರಾಮೀಣ ಕುಟುಂಬಗಳ ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಈ ಬಜೆಟ್ ಬಡವರು, ಮಹಿಳೆಯರು, ರೈತರು, ಯುವಕರು ಮತ್ತು ಮಧ್ಯಮ ವರ್ಗ ಸೇರಿದಂತೆ ಎಲ್ಲ ವರ್ಗಗಳನ್ನೂ ಒಳಗೊಂಡ ಸಮಗ್ರ ಬಜೆಟ್ ಆಗಿದ್ದು, ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಪ್ರಕಾಶ್ ಗಾದಗಿ ಅಭಿಪ್ರಾಯ ವ್ಯಕ್ತಪಡಿಸಿದರು.