
ಕಲಬುರಗಿ: :ಫೆ.೪: ಕೇಂದ್ರ ಸರ್ಕಾರ ಮಂಡಿಸಿರುವ ೨೦೨೬-೨೭ನೇ ಸಾಲಿನ ಬಜೆಟ್ ಕರ್ನಾಟಕದ ಪಾಲಿಗೆ ಮತ್ತೊಮ್ಮೆ ನಿರಾಶಾದಾಯಕವಾಗಿದೆ. “ಸಬ್ ಕಾ ಸಾತ್, ಸಬ್ ಕಾ ವಿಕಾಸ್” ಎಂಬ ಘೋಷಣೆ ಕೇವಲ ಮಾತಿಗೆ ಸೀಮಿತವಾಗಿದ್ದು, ಕೃಷಿ ಪ್ರಧಾನವಾದ ನಮ್ಮ ರಾಜ್ಯದ ಪಾಲಿಗೆ ಈ ಬಜೆಟ್ ‘ಶೂನ್ಯ’ ಕೊಡುಗೆ ನೀಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಲ್ಬುರ್ಗಿ ಜಿಲ್ಲಾ ಅಧ್ಯಕ್ಷರಾದ ಪ್ರಶಾಂತಗೌಡ ಮಾಲಿಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಮುಖವಾಗಿ ಕೇಂದ್ರ ಸರ್ಕಾರ ನೀರಾವರಿ ಯೋಜನೆಗಳ ನಿರ್ಲಕ್ಷ್ಯ ತೋರಿದ್ದು ಕರ್ನಾಟಕದ ರೈತರ ಜೀವನಾಡಿಗಳಾದ ಪ್ರಮುಖ ನೀರಾವರಿ ಯೋಜನೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ೫,೩೦೦ ಕೋಟಿ ರೂ. ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಅದರ ಬಗ್ಗೆ ಪ್ರಸ್ತಾಪವೇ ಇಲ್ಲ. ಮೇಕೆದಾಟು ಮತ್ತು ಮಹಾದಾಯಿ ಯೋಜನೆಗಳಿಗೆ ಅಂತಿಮ ಅನುಮೋದನೆ ನೀಡದೆ ಕೇಂದ್ರವು ಕರ್ನಾಟಕದ ಹಿತಾಸಕ್ತಿಯನ್ನು ಬಲಿಗೊಟ್ಟಿದೆ. ಗೊಬ್ಬರ ಮತ್ತು ಕೀಟನಾಶಕ ಬೆಲೆ ಏರಿಕೆ ರಸಗೊಬ್ಬರ ಸಬ್ಸಿಡಿ ಕಡಿತಗೊಳಿಸಿರುವುದು ರೈತರ ಬೆನ್ನಿಗೆ ಬರೆ ಎಳೆದಂತಿದೆ. ಪಿಎಂ-ಕಿಸಾನ್ ಮೊತ್ತದಲ್ಲಿ ಏರಿಕೆ ಇಲ್ಲ ಹಣದುಬ್ಬರ ಗಗನಕ್ಕೇರುತ್ತಿದ್ದರೂ, ವಾರ್ಷಿಕ ೬,೦೦೦ ರೂ.ಗಳ ಸಹಾಯಧನವನ್ನು ಹೆಚ್ಚಿಸದಿರುವುದು ಹಾಗೂ ರೈತರ ಸಾಲ ಮನ್ನಾ ಮಾಡದಿರುವುದು ರೈತರಿಗೆ ಮಾಡಿದ ಅವಮಾನ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























