ನವದೆಹಲಿ,ಆ9: ರಾಹುಲ್ ಗಾಂಧಿ ಚುನಾವಣಾ ಆಯೋಗದಂತಹ ಸಾಂಸ್ಥಿಕ ಸಂಸ್ಥೆಗಳ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.
ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುವ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಂದ ಮಾಹಿತಿ ಪಡೆದುಕೊಳ್ಳಲು ಆಯೋಗ ಕರೆದರೂ ತೆರಳಿಲ್ಲ. ಇದರಿಂದಲೇ ಗೊತ್ತಾಗುತ್ತದೆ ಇವರ ಆರೋಪಗಳೆಲ್ಲ ನಿರಾಧಾರವೆಂದು ಎಂದು ಹೇಳಿದರು.
ರಾಹುಲ್ ಗಾಂಧಿ ಅವರನ್ನು ಮಧ್ಯಾಹ್ನ 1 ಗಂಟೆಯಿಂದ 3 ಗಂಟೆವರೆಗೆ ಕರೆದರೂ ಹೋಗಿಲ್ಲ. ಬೆಂಗಳೂರಲ್ಲೇ ಇದ್ದರೂ ಭೇಟಿ ನೀಡಿಲ್ಲ. ತಮ್ಮ ಪರವಾಗಿ ಬೇರೊಬ್ಬರನ್ನು ಕಳಿಸಿಕೊಡುವುದಾಗಿ ಹೇಳಿದ್ದೇಕೆ? ಎಂದು ಅವರು ಪ್ರಶ್ನಿಸಿದರು.
ಬೆಂಗಳೂರು ಫ್ರೀಡಂ ಪಾರ್ಕ್‍ಗೂ ಚುನಾವಣಾ ಆಯೋಗದ ಕಚೇರಿಗೆ ಐದೇ ನಿಮಿಷದ ಹಾದಿ. ನಡೆದೇ ಹೋಗಬಹುದು. ಹಾಗಿದ್ದರೂ ರಾಹುಲ್ ಗಾಂಧಿ ಹೋಗಿ ದಾಖಲೆಗಳನ್ನು ಒದಗಿಸಿಲ್ಲ. ಬೇರೊಬ್ಬರನ್ನು ಕಳಿಸುವುದಾಗಿ ಹೇಳಿದ್ದಾರೆ. ಆರೋಪ ಮಾಡುವ ತಾವು ಬೇರೆಯವರನ್ನು ಕಳಿಸುವುದೆಂದರೆ ಏನರ್ಥ? ಎಂದು ಅವರು ಪ್ರಶ್ನಿಸಿದರು.
ಕರ್ನಾಟಕ, ಮಹಾರಾಷ್ಟ್ರ, ಹರ್ಯಾಣ ಚುನಾವಣೆ ಸಂಬಂಧಿತ ಎಲ್ಲಾ ಆರೋಪಗಳಿಗೆ ಅಫಿಡವಿಟ್ ಸಲ್ಲಿಸುವಂತೆ ಚುನಾವಣಾ ಆಯೋಗ ಹೇಳಿದೆ. ಆದರೆ ಈವರೆಗೂ ಸಲ್ಲಿಸಿಲ್ಲ. ಎಲ್ಲಾ ಬೋಗಸ್ ಆರೋಪಗಳಾಗಿದ್ದಕ್ಕಾಗಿ ಬೆಂಗಳೂರಲ್ಲಿ ಖುದ್ದು ಆಹ್ವಾನಿಸಿದರೂ ಹಾಜರಾಗಿಲ್ಲ ಎಂದು ಜೋಶಿ ಟೀಕಿಸಿದರು.























