Home ಜಿಲ್ಲೆ ಕಲಬುರಗಿ ನೀತಿ ಸಂಹಿತೆ ಅರಿತು ಬಾಳಿದರೆ ನೆಮ್ಮದಿಯ ಫಲ : ರಂಭಾಪುರಿ ಜಗದ್ಗುರುಗಳು

ನೀತಿ ಸಂಹಿತೆ ಅರಿತು ಬಾಳಿದರೆ ನೆಮ್ಮದಿಯ ಫಲ : ರಂಭಾಪುರಿ ಜಗದ್ಗುರುಗಳು

ಕಮಲಾಪುರ ಫೆ.15:
ಸಮೃದ್ಧಿ ಮತ್ತು ಶಾಂತಿಗೆ ದೈವಿ ಗುಣಗಳ ಅವಶ್ಯಕತೆಯಿದೆ. ಮೌಲ್ಯಗಳ ಉಳಿವು ಅಳಿವು ಮಾನವನ ಆಚರಣೆಯಲ್ಲಿವೆ. ಧರ್ಮದ ನೀತಿ ಸಂಹಿತೆ ಅರಿತು ಬಾಳಿದರೆ ನೆಮ್ಮದಿಯ ಫಲ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ತಾಲೂಕಿನ ಭೂಸಣಗಿ ಗ್ರಾಮದಲ್ಲಿ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಮೂರ್ತಿ ಪ್ರತಿಷ್ಠಾಪನೆ-ಕಳಸಾರೋಹಣ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಗಳಿಕೆಯೊಂದೇ ಜೀವನದ ಗುರಿಯಲ್ಲ. ಬಾಳಿನಲ್ಲಿ ಒಂದಿಷ್ಟಾದರೂ ಶಿವಜ್ಞಾನ ಮತ್ತು ಗುರು ಕಾರುಣ್ಯ ಗಳಿಸಿ ಬಾಳುವುದು ಜೀವನದ ಉತ್ಕರ್ಷತೆಗೆ ಸಹಕಾರಿ. ಅಸಿ ಮಸಿ ಕೃಷಿ ಜಗತ್ತಿನ ಜೀವ ರಾಶಿಯನ್ನು ಸಲಹುವ ರಕ್ಷಾ ಕವಚಗಳು. ದೇಹವಿದು ದೇವನಿರುವ ದೇಗುಲ. ಸತ್ಯ ಮತ್ತು ಶಾಂತಿಗಳಂಥ ದೈವಿ ಗುಣಗಳ ಹಣ್ಣು ಹಂಪಲಗಳನ್ನು ಬೆಳೆಯಬೇಕು. ಅಸುರಿ ಗುಣಗಳ ಕಸ ಕಡ್ಡಿ ಕಿತ್ತು ಹಾಕಿ ಮುಳ್ಳು ಕಲ್ಲುಗಳನ್ನು ಸ್ವಚ್ಛಗೊಳಿಸಬೇಕು. ಶ್ರೀ ಜಗದ್ಗುರು ರೇವಣಸಿದ್ಧೇಶ್ವರರು ಧಾರ್ಮಿಕ ಮತ್ತು ಸಾಮಾಜಿಕ ಸತ್ಕ್ರಾಂತಿಗೆ ಕೊಟ್ಟ ಕೊಡುಗೆ ಅಮೂಲ್ಯವಾದುದೆಂದರು.
ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಧ್ಯೇಯ ಸಾಧನೆಗಾಗಿ ಆತ್ಮ ವಿಶ್ವಾಸ ಮತ್ತು ನಿರಂತರ ಪ್ರಯತ್ನ ಅವಶ್ಯಕ. ಮಾತು ಮನ ಮತ್ತು ಕೃತಿ ಒಂದಾಗಿ ಬಾಳಿದರೆ ಜೀವನ ಸಾರ್ಥಕಗೊಳ್ಳುವುದೆಂದರು. ನೇತೃತ್ವ ವಹಿಸಿದ ಭೂಸಣಗಿ ಶ್ರೀ ಜಗದ್ಗುರು ರೇವಣಸಿದ್ಧೇಶ್ವರರ ಆರಾಧಕರಾದ ಶರಣ ಪ್ರಕಾಶ ಮುತ್ಯಾ ಮಾತನಾಡಿ ಗುರು ಕಾರುಣ್ಯವಿಲ್ಲದೇ ಜೀವನ ಉಜ್ವಲಗೊಳ್ಳದು. ಗುರಿ ಮತ್ತು ಗುರು ಎಲ್ಲರಿಗೂ ಅವಶ್ಯಕ. ಅಜ್ಞಾನ ಕಳೆದು ಸುಜ್ಞಾನ ನೀಡುವಾತನೇ ನಿಜವಾದ ಗುರು. ಶ್ರೀ ಜಗದ್ಗುರು ರೇವಣಸಿದ್ಧೇಶ್ವರರ ಲೀಲೆ ಪವಾಡಗಳು ಹಲವಾರು. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದರು. ಮುತ್ಯಾನ ಬಬಲಾದ ಗುರುಪಾದಲಿಂಗ ಸ್ವಾಮಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಶ್ರೀ ಜಗದ್ಗುರು ರೇವಣಸಿದ್ಧೇಶ್ವರರು ಮಾಡಿದ ಜನಪರ ಕಾರ್ಯಗಳನ್ನು ಮರೆಯುವಂತಿಲ್ಲ. ಶ್ರೀ ರಂಭಾಪುರಿ ಜಗದ್ಗುರುಗಳ ಸಮಾರಂಭಕ್ಕೆ ಆಗಮಿಸಿ ನಮ್ಮೆಲ್ಲರನ್ನು ಆಶೀರ್ವದಿಸಿರುವುದು ಈ ಭಾಗದ ಜನತೆಯ ಪುಣ್ಯ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಸಚಿವ ಎಸ್.ಕೆ.ಕಾಂತಾ, ಮಾಜಿ ವಿ.ಪ.ಸದಸ್ಯ ಅಮರನಾಥ ಪಾಟೀಲ, ಕಲಬುರ್ಗಿಯ ಶಿವಪ್ರಭು ಪಾಟೀಲ, ನೀಲಕಂಠರಾವ್ ಎಸ್.ಮೂಲಗೆ, ಸಿ.ಎ.ವೀರಣ್ಣ ಮಾಂತಗೋಳ, ಶಿವಶರಣಪ್ಪ ಸೀರಿ, ಶಿವಕುಮಾರ ಪಸಾರ, ಬಸವರಾಜ ಕಿಣಗಿ, ಗುಂಡೂರಾವ ಕಡಣಿ, ಸಿದ್ಧನಗೌಡ ಕೆ.ಮಾಲಿ ಪಾಟೀಲ ಇವರೆಲ್ಲರಿಗೂ ಶ್ರೀ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆಯಿತ್ತು ಶುಭ ಹಾರೈಸಿದರು.
ಪ್ರಶಸ್ತಿ ಪ್ರದಾನ: ಮಹಾಗಾಂವನ ಅಮೃತಪ್ಪ ಮಲ್ಕಪ್ಪಗೋಳ, ಬೀದರನ ಸಿದ್ರಾಮಪ್ಪ ಚ.ಬೆಳಕೇರಿ, ಮುತ್ತಂಗಿಯ ಷಣ್ಮುಖಯ್ಯಸ್ವಾಮಿ ಮಠಪತಿ, ಜಹೀರಾಬಾದನ ದೂಳಪ್ಪ ಬೆಳಕೇರಿ, ನಿರ್ಣಾದ ಶ್ರೀನಿವಾಸ ರಾಮರೆಡ್ಡಿ, ಕುಮಸಿಯ ಬಸವರಾಜ ಈರದಿ, ಅಂಬಲಗಾದ ದಯಾನಂದ ಮರಗುತ್ತಿ ಇವರಿಗೆ ‘ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಭಕ್ತಿ ಭೂಷಣ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭೂಸಣಗಿ ಕಳ್ಳಿಮಠದ ವಿರುಪಾಕ್ಷ ದೇವರು, ಶ್ರೀನಿವಾಸ ಸರಡಗಿಯ ಗಿರೆಪ್ಪ ಮುತ್ಯಾ ಪಾಲ್ಗೊಂಡಿದ್ದರು. ಮಲ್ಲಿಕಾರ್ಜುನ ಸಿರಸಗಿ ಇವರು ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡು ದರ್ಶನಾಶೀರ್ವಾದ ಪಡೆದರು. ಸಮಾರಂಭದ ನಂತರ ಬಂದ ಎಲ್ಲ ಭಕ್ತರಿಗೂ ಪರಮೇಶ್ವರ ಮಲ್ಲೇಶಪ್ಪ ಮಾಲಿ ಬಿರಾದಾರ ಕೊರವಿ ಇವರಿಂದ ಅನ್ನ ದಾಸೋಹ ಜರುಗಿತು.