
ಕೋಲಾರ, ಮೇ ೨೧-ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಪ್ರಾರಂಭವಾಗಿದ್ದು, ರೈತರು ಬಿತ್ತನೆಗೂ ಮುನ್ನ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ ಬೆಳೆವಾರು ಶಿಫಾರಸ್ಸಿನಂತೆ ಓ,P,ಏ ಮತ್ತು ಲಘುಪೋಷಕಾಂಶಗಳಾದ ಜಿಂಕ್, ಬೋರಾನ್, ಜಿಪ್ಸಂ ಗೊಬ್ಬರಗಳನ್ನು ಬೆಳೆಗಳಿಗೆ ನೀಡುವುದು ಹಾಗೂ ಕಡ್ಡಾಯವಾಗಿ ಜೈವಿಕ ಗೊಬ್ಬರಗಳಾದ ರೈಜೋಬಿಯಂ, ಅಜೋಸ್ಪೈರುಲಮಂ, ಪಾಸ್ಸ್‌ಪೋ ಬ್ಯಾಕ್ಟೀರಿಯಾಗಳನ್ನು ನಾಟಿಗೂ ಮುನ್ನ ಬೀಜೋಪಚಾರವಾಗಿ ಉಪಯೋಗಿಸಿಕೊಳ್ಳಲು ತಿಳಿಸಿದೆ.
ಸೆಣಬು ಅಥವಾ ಡಯಂಚ ಹಸಿರೆಲೆ ಗೊಬ್ಬರದ ಬೆಳೆಗಳನ್ನು ಮೇ, ಜೂನ್ ತಿಂಗಳಿನಲ್ಲಿ ಬಿತ್ತಿ, ನಾಟಿ ಮಾಡುವ ಎರಡು ವಾರಗಳ ಮುಂಚಿತವಾಗಿ ಕಟಾವು ಮಾಡಿ ಮಣ್ಣಿನಲ್ಲಿ ಸೇರಿಸುವುದರಿಂದ ಮಣ್ಣಿನ ಸಾವಯವ ಇಂಗಾಲದ ಪ್ರಮಾಣವು ಹೆಚ್ಚಾಗಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ ಹಾಗೂ ಬೆಳೆಗಳಿಗೆ ಅವಶ್ಯವಿರುವ ಎಲ್ಲಾ ಪೋಷಕಾಂಶಗಳು ದೊರೆಯುವುದಲ್ಲದೆ ಮಣ್ಣಿನ ಗುಣಮಟ್ಟ ಸಹ ಕಾಪಾಡುತ್ತದೆ.
ರೈತರು ಬಿತ್ತನೆಗಾಗಿ ರಸಗೊಬ್ಬರಗಳನ್ನು ಖರೀದಿಸುವ ಮುನ್ನಕೆಲವೇ ನೇರ ರಸಗೊಬ್ಬರಗಳಾದ ಡಿ.ಎ.ಪಿ ಮತ್ತು ಯೂರಿಯಾ ರಸಗೊಬ್ಬರದ ಮೇಲೆ ಅವಲಂಬಿತರಾಗದೆ ಮಾರುಕಟ್ಟೆಯಲ್ಲಿ ದೊರೆಯುವ ಸಂಯುಕ್ತ ರಸಗೊಬ್ಬರಗಳಾದ ಎಂ.ಒ.ಪಿ, ಎಸ್.ಎಸ್.ಪಿ ಹಾಗೂ ಕಾಂಪ್ಲೆಕ್ಸ್ ಗೊಬ್ಬರಗಳಾದ ೧೦:೨೬:೨೬, ೨೦:೨೦:೦:೧೩, ೧೯:೧೯:೧೯, ೧೫:೧೫:೧೫ ರಸಗೊಬ್ಬರಗಳನ್ನು ಸಂಯೋಜಿಸಿ ಬೆಳೆವಾರು ನಿಗದಿಪಡಿಸಿರುವ ಶಿಫಾರಸ್ಸಿನಂತೆ ಬಿತ್ತನೆ ಸಮಯದಲ್ಲಿ ಹಾಗೂ ಮೇಲ್ ಗೊಬ್ಬರವಾಗಿ ಬೆಳೆಗಳಿಗೆ ನೀಡುವುದು.
ಮಣ್ಣು ಪರೀಕ್ಷೆ ಮತ್ತು ರಸಗೊಬ್ಬರಗಳ ಸಂಯೋಜನೆ ಕುರಿತು ಮಾಹಿತಿಗಾಗಿ ಹಾಗೂ ಲಘು ಪೋಷಕಾಂಶಗಳು ಮತ್ತು ಜೈವಿಕ ಗೊಬ್ಬರಗಳನ್ನು ಸರ್ಕಾರದ ಸಹಾಯಧನದಲ್ಲಿ ಪಡೆಯಲು ಹತ್ತಿರದ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿಯಾಗಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.