Home ಜಿಲ್ಲೆ ಅನಿಯಂತ್ರಿತ ಆಮಿಷಗಳೆ ಪ್ರಾಕೃತಿಕ ಅಪಾಯಕ್ಕೆ ಕಾರಣ : ಡಾ.ಬಿರಾದಾರ

ಅನಿಯಂತ್ರಿತ ಆಮಿಷಗಳೆ ಪ್ರಾಕೃತಿಕ ಅಪಾಯಕ್ಕೆ ಕಾರಣ : ಡಾ.ಬಿರಾದಾರ

ಬಸವಕಲ್ಯಾಣ:ಫೆ.12: ಮನುಷ್ಯನ ಅನಿಯಂತ್ರಿತ ಆಮಿಷಗಳಿಂದ ಪ್ರಾಕೃತಿಕ ಸಂಪತ್ತಿಗೆ ಅಪಾಯ ಒದಗಿದೆ. ನಿಸರ್ಗದೊಂದಿಗೆ ಸಹಜವಾಗಿ ಬದುಕುವುದು ಈ ಕಾಲದ ಅನಿವಾರ್ಯ ಎಂದು ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಹೇಳಿದರು .

ಶ್ರೀ ಬಸವೇಶ್ವರ ಪದವಿ ಕಾಲೇಜಿನಿಂದ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸಹಯೋಗದಲ್ಲಿ ಬುಧವಾರ ತಾಲೂಕಿನ ಹಳ್ಳಿ ಗ್ರಾಮದಲ್ಲಿರುವ ತೋಟಗಾರಿಕೆ ಕೇಂದ್ರದಲ್ಲಿ ಕಾಲೇಜಿನ ಜೀವವಿಜ್ಞಾನ ವಿಭಾಗದಿಂದ ಹಮ್ಮಿಕೊಂಡಿದ್ದ ಜೀವ ಜಾಲ ಅಧ್ಯಯನ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ನಗರ ಕೇಂದ್ರಿತ ಜೀವನದ ಹಂಬಲದಿಂದ ನಿಸರ್ಗಕ್ಕೆ ನಿರ್ಲಕ್ಷಿಸಲಾಗುತ್ತಿದೆ ಎಂದರು.

ಗುಡ್ಡ, ಬೆಟ್ಟ, ನೀರು, ನೆಲ ಇವು ನಿಸರ್ಗದ ಬಹುದೊಡ್ಡ ಜೀವಜಗತ್ತು ಕಾಪಿಟ್ಟುಕೊಂಡು ಬಂದಿವೆ. ಮನುಷ್ಯನ ಹಪಾಹಪಿತನದಿಂದ ಪ್ರಕೃತಿ ಹಲ್ಲೆಗೊಳಗಾಗುತ್ತಿದೆ. ಆಧುನಿಕತೆ, ಅಭಿವೃದ್ಧಿ ಎಂಬುದು ಜೀವ ಸಂಕುಲಕ್ಕೆ ಅನುಕೂಲವೋ; ಅಪಾಯವೋ ಯೋಚಿಸಬೇಕಿದೆ. ಗಣಿಗಾರಿಕೆಯಿಂದ ಮಣ್ಣಿನ ಸಂಪತ್ತು, ರಿಯಲ್ ಎಸ್ಟೇಟ್ ಗಳಿಂದ ಅನ್ನ ಕೊಡುವ ಫಲವತ್ತಾದ ನೆಲದ ಸಂಪತ್ತು, ಗಿಡಮರಗಳ ನಾಶದಿಂದ ಕಾಡಿನ ಸಂಪತ್ತು ಬಂಡವಾಳಶಾಹಿಗಳ ವಶವಾಗುತ್ತಿದೆ
ಎಂದರು.

 ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ವೈಜಯಂತಾ ತ್ರಿಮುಖೆ  ಅವರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ,  

ಸಸ್ಯ ಸಂಪತ್ತಿನಿಂದಲೆ ಮನುಷ್ಯನ ಬದುಕು ನೆಮ್ಮದಿಯಿಂದ ಇರಲು ಸಾಧ್ಯ. ಗಿಡ ಮರಗಳ ನೆಲೆಯಲ್ಲಿ ದೊಡ್ಡ ಜೀವಜಾಲ ಅಡಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ನೆಲ, ನೀರು, ಸಸ್ಯ ಸಂಸ್ಕøತಿಯ ಗಂಭೀರ ಅಧ್ಯಯನ ಅಗತ್ಯ. ಸಸ್ಯ ಕಸೀಕರಣ, ತೋಟಗಾರಿಕೆ ತರಬೇತಿ ಮೂಲಕ ಆಸಕ್ತ ರೈತರಿಗೆ ಅನುಕೂಲವಾಗುವ ಹಾಗೂ ಲಾಭದಾಯಕ ಬೆಳೆ ಬೆಳೆಯಲು ಇಲಾಖೆಯಿಂದ ಹಲವು ಯೋಜನೆಗಳು ಅನುಷ್ಠಾನಕ್ಕೆ ತರಲಾಗಿದೆ ಎಂದರು.

ಹಳ್ಳಿ ತೋಟಗಾರಿಕೆ ಕೇಂದ್ರದ ಅಧಿಕಾರಿ ಶ್ರೀಧರ್ ಪೂಜಾರಿ ಮಾತನಾಡಿ, ಸಸ್ಯ ಸಂಸ್ಕೃತಿಯ ಸಂಶೋಧನಾತ್ಮಕ ಅಧ್ಯಯನಗಳು ಕಾಲೇಜು ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆಯುತ್ತವೆ. ತೋಟಗಾರಿಕೆ ಇಲಾಖೆ ರೈತರ ಮತ್ತು ಸರ್ಕಾರದ ಯೋಜನೆಗಳ ನಡುವಿನ ಸೋಪಾನವಾಗಿದೆ ಎಂದರು.

ಕುಶಾಲತಾ ಕಂಬಾರ, ರೇಷ್ಮೆ ಇಲಾಖೆಯ ಬಸವರಾಜ ಗದಲೇಗಾಂವ ಸೇರಿದಂತೆ ಹಲವರಿದ್ದರು.
ತಾಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ವೈಜಯಂತಾ ತ್ರಿಮುಖೆ ಅವರು ವಿದ್ಯಾರ್ಥಿಗಳಿಗೆ ಸಸಿ ವಿತರಿಸುವ ಮೂಲಕ ಸಮಾರಂಭ ಉದ್ಘಾಟಿಸಿದರು.

ಬಿ.ಎಸ್ಸಿ ಜೀವವಿಜ್ಞಾನ ವಿಭಾಗದ ವಿದ್ಯಾರ್ಥಿಗಳು
ಸಸಿಕಸಿ, ಜೇನು ಸಾಕಾಣಿಕೆ, ರೇಷ್ಮೆ ಕೃಷಿ, ಎರೆಹುಳು ಬಗೆಗೆ ಕ್ರೇತ್ರಾಧ್ಯಯನ ನಡೆಸಿದರು.

ವಿವೇಕಾನಂದ ಶಿಂಧೆ ಸ್ವಾಗತಿಸಿದರು. ಜೀವ ವಿಜ್ಞಾನ ವಿಭಾಗ ಮುಖ್ಯಸ್ಥ ಅಶೋಕ ರೆಡ್ಡಿ ಗದಲೇಗಾವ ಪ್ರಾಸ್ತಾವಿಕ ಮಾತನಾಡಿದರು. ಸಂಗೀತಾ ಮಹಾಗಾವೆ ನಿರೂಪಿಸಿದರು.
ಪ್ರಿಯಾ ಚೌಹಾಣ್ ವಂದಿಸಿದರು.