Home ಮುಖಪುಟ ಸುದ್ದಿ ಲೋಕಾ ಬಲೆಗೆ ಉಡುಪಿ ಅಬಕಾರಿ ಡಿಸಿ

ಲೋಕಾ ಬಲೆಗೆ ಉಡುಪಿ ಅಬಕಾರಿ ಡಿಸಿ

೮.೯೬ ಕೋಟಿ ಆಸ್ತಿಪತ್ತೆ
ಉಡುಪಿ,ಮಾ.೧೪-
ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತ (ಡಿಸಿ) ಶ್ರೀನಿವಾಸ್ ಟಿ. ಎಂ. ಅವರಿಗೆ ಸಂಬಂಧಿಸಿದ ೧೫ ವಿವಿಧ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ೮.೬೯ ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆ ಹಚ್ಚಿದ್ದಾರೆ.


ದಾಳಿಯಲ್ಲಿ ಸ್ಥಿರ ಆಸ್ತಿಗಳು ಒಟ್ಟು ೬,೯೦,೬೪,೭೧೬ ರೂ. ಇದರಲ್ಲಿ ವಿವಿಧೆಡೆ ೧೧ ನಿವೇಶನಗಳು ಇವೆ. ೬ ಸುಸಜ್ಜಿತ ವಾಸದ ಮನೆಗಳು ಇದೆ. ೩೧ ಎಕರೆ ಕೃಷಿ ಭೂಮಿ ಪತ್ತೆಯಾಗಿದೆ.


ಚರಾಸ್ತಿಗಳು ಒಟ್ಟು ೨,೬೬,೯೦,೦೦೧ ರೂ. ಇದರಲ್ಲಿ ೩,೯೫,೯೪೧ ಹಣ, ೧.೪೭ ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳು, ೧೭ ಲಕ್ಷ ರೂ. ಬೆಲೆಬಾಳುವ ಕಾರುಗಳು, ೨೫.೭೫ ಲಕ್ಷ ರೂ. ನಗದು ಠೇವಣಿ, ೭೨.೬೮ ಲಕ್ಷ ರೂ. ಮೌಲ್ಯದ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.


ಡಿಸಿ ಶ್ರೀನಿವಾಸ್ ಅವರು ತಮ್ಮ ಆದಾಯಕ್ಕಿಂತಲೂ ನೂರಾರು ಪಟ್ಟು ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಲೋಕಾಯುಕ್ತ ಪೊಲೀಸರು ಈ ದಾಳಿಯನ್ನು ನಡೆಸಿದ್ದಾರೆ. ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ ೧೫ ಕಡೆಗಳಲ್ಲಿ ಏಕಕಾಲಕ್ಕೆ ಎರಡು ದಿನಗಳ ಕಾಲ ಈ ಶೋಧ ಕಾರ್ಯ ನಡೆದಿದೆ. ಲೋಕಾಯುಕ್ತ ಪೊಲೀಸರು ಶ್ರೀನಿವಾಸ್ ಟಿ. ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಈಗಾಗಲೇ ದಾಖಲಿಸಿಕೊಂಡಿದ್ದು,ಕಳೆದ ಮಾರ್ಚ್ ೧೩ರಿಂದ ತನಿಖೆ ಆರಂಭವಾಗಿದೆ.


ಸಾಮಾನ್ಯವಾಗಿ ಲೋಕಾಯುಕ್ತ ದಾಳಿಯಲ್ಲಿ ಇಷ್ಟು ದೊಡ್ಡ ಮಟ್ಟದ ಅಕ್ರಮ ಆಸ್ತಿ ಪತ್ತೆಯಾದಾಗ, ಸಂಬಂಧಪಟ್ಟ ಇಲಾಖೆಯು (ಅಬಕಾರಿ ಇಲಾಖೆ) ಲೋಕಾಯುಕ್ತ ವರದಿಯನ್ನು ಆಧರಿಸಿ ಅಧಿಕಾರಿಯನ್ನು ಅಮಾನತುಮಾಡುವುದು ವಾಡಿಕೆ. ಶ್ರೀನಿವಾಸ್ ಅವರ ವಿರುದ್ಧದ ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಲೋಕಾಯುಕ್ತರು ಸರ್ಕಾರಕ್ಕೆ ನೀಡುವ ಪ್ರಾಥಮಿಕ ವರದಿಯ ಆಧಾರದ ಮೇಲೆ ಮುಂದಿನ ಒಂದೆರಡು ದಿನಗಳಲ್ಲಿ ಅಮಾನತು ಆದೇಶ ಹೊರಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.


ದಾಳಿಯ ವೇಳೆ ಪತ್ತೆಯಾದ ೩೧ ಎಕರೆ ಕೃಷಿ ಜಮೀನು, ೬ ಮನೆಗಳು ಮತ್ತು ೧೧ ನಿವೇಶನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ.


ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.