
ತುಮಕೂರು, ಮೇ ೨೨– ಕಾರ್ಖಾನೆಯೊಂದರ ಸಂಪ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ನಗರ ಹೊರವಲಯದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಸಂಪ್ ಸ್ಪಚ್ಛಗೊಳಿಸುವ ವೇಳೆ ನಾಲ್ವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಸಿರಾ ತಾಲ್ಲೂಕಿನ ಮಾಗೋಡು ಗ್ರಾಮದ ಪ್ರತಾಪ್ (೨೩) ಹಾಗೂ ಕಳ್ಳಂಬೆಳ್ಳ ಹೋಬಳಿ ತರೂರು ಗ್ರಾಮದ ವೆಂಕಟೇಶ್ (೩೨) ಎಂಬುವರೇ ಮೃತಪಟ್ಟಿರುವ ದುರ್ದೈವಿ ಕಾರ್ಮಿಕರು.
ತರೂರಿನ ಮಂಜುನಾಥ್ (೪೨), ಯುವರಾಜ್ (೩೨) ಎಂಬುವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ತರೂರಿನ ಭರತ್‌ಕುಮಾರ್ (೩೬), ಬಿಹಾರದ ರಾಜೇಶ್‌ಕುಮಾರ್ (೨೬) ಅಸ್ವಸ್ಥರಾಗಿದ್ದು, ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾರೆ.
ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ರಾಸಾಯನಿಕ ಪದಾರ್ಥ ತಯಾರಿಸುವ ಲಾರಸ್ ಬಯೋ ಎಂಬ ಕೈಗಾರಿಕೆಯಲ್ಲಿ ಈ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ರಾಸಾಯನಿಕ ಸಂಗ್ರಹಿಸುವ ಸಂಪ್ ಸ್ವಚ್ಛತೆಗಾಗಿ ಆರು ಜನ ಸಂಪ್ ಒಳಗೆ ಇಳಿದಿದ್ದರು. ಈ ವೇಳೆ ಉಸಿರುಗಟ್ಟಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಇಬ್ಬರು ಸಾವನ್ನಪ್ಪಿದ್ದಾರೆ.
ಈ ಸಂಬಂಧ ಕೋರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.