ನಕ್ಸಲ್ ಜೊತೆ ಗುಂಡಿನ ಕಾಳಗ ಇಬ್ಬರು ಭದ್ರತಾ ಸಿಬ್ಬಂದಿ ಹುತಾತ್ಮ

ರಾಂಚಿ, ಸೆ. ೪: ಜಾರ್ಖಂಡ್ ನ ಪಲಮು ಜಿಲ್ಲೆಯಲ್ಲಿ ಗುರುವಾರ ಸಿಪಿಐ (ಮಾವೋವಾದಿ) ವಿಭಜಿತ ಗುಂಪಾದ ನಿಷೇಧಿತ ಟಿಎಸ್ ಪಿಸಿ ಸದಸ್ಯರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಇಬ್ಬರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಿಎಸ್ ಪಿಸಿ ಕಮಾಂಡರ್ ಶಶಿಕಾಂತ್ ಗಂಜು ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

“ಪೊಲೀಸರು ಮತ್ತು ನಿಷೇಧಿತ ಉಗ್ರಗಾಮಿ ಸಂಘಟನೆ ತ್ರಿತಿಯಾ ಸಮ್ಮೇಳನ್ ಪ್ರಸ್ತುತಿ ಸಮಿತಿ (ಟಿಎಸ್ ಪಿಸಿ) ನಡುವೆ ನಿನ್ನೆ ತಡರಾತ್ರಿ ನಡೆದ ಎನ್ಕೌಂಟರ್ ನಲ್ಲಿ ಇಬ್ಬರು ಪೊಲೀಸ್ ಜವಾನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ. ಪಲಮುವಿನ ಮನತು ಪ್ರದೇಶದಲ್ಲಿ ಟಿಎಸ್ ಪಿಸಿ ಕಮಾಂಡರ್ ಶಶಿಕಾಂತ್ ಗಂಜು ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಆತನ ಸೆರೆಗಾಗಿ ೧೦ ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಲಾಗಿದೆ.

ಕಾರ್ಯಾಚರಣೆಯ ವೇಳೆ ಗುಂಡಿನ ದಾಳಿ ನಡೆಸಿದಾಗ ಇಬ್ಬರು ಪೊಲೀಸರು ಪ್ರಾಣ ಕಳೆದುಕೊಂಡಿದ್ದಾರೆ,” ಎಂದು ಐಜಿ ಕಾರ್ಯಾಚರಣೆ ಮತ್ತು ಜಾರ್ಖಂಡ್ ಪೊಲೀಸ್ ವಕ್ತಾರ ಮೈಕೆಲ್ರಾಜ್ ಎಸ್ ಹೇಳಿದ್ದಾರೆ.

ಕೆಡಾಲ್ ಗ್ರಾಮದಲ್ಲಿ ಟಿಎಸ್ ಪಿಸಿ ಕಮಾಂಡರ್ ಶಶಿಕಾಂತ್ ಗಂಜು ಮತ್ತು ಅವರ ತಂಡ ಇರುವ ಬಗ್ಗೆ ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.