
ಬೆಂಗಳೂರು, ಡಿ.೩-ಮಾದಕ ವಸ್ತುಗಳ ವಿರುದ್ಧ ಸಮರ ಸಾರಿರುವ ಸಿಸಿಬಿ ಪೊಲೀಸರು ಮಹಿಳೆ ಸೇರಿ ಇಬ್ಬರು ವಿದೇಶಿ ಡ್ರಗ್ ಫೆಡ್ಲರ್ ಗಳನ್ನು ಬಂಧಿಸಿ ೨೮.೭೫ ಕೋಟಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ತಾಂಜೇನಿಯಾದ ಮಹಿಳೆ ನಾನ್ಸಿ ಒಮೆರೈ ಲಾವ(೨೯) ಹಾಗೂ ನೈಜೀರಿಯಾದ ಇಮಾನುಯಲ್ ಆರೇಂಜ್(೨೮)ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
೧೦ ಕೆಜಿ ಎಂಡಿಎಂಎ ಜಪ್ತಿ:
ಬಂಧಿತರಿಂದ ೨೮.೭೫ ಕೋಟಿ ಮೌಲ್ಯದ
೧೦ ಕೆ.ಜಿ ೩೬೯ ಗ್ರಾಂ ಎಂಡಿಎಂಎ ಕ್ರಿಸ್ಟೆಲ್, ೮ ಕೆ.ಜಿ ಹೈಡ್ರೋಗಾಂಜಾ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸಂಪಿಗೆಹಳ್ಳಿಯ ರಾಚೇನಹಳ್ಳಿಯಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ
ನಾನ್ಸಿ ಒಮೆರೈ ಲಾವ ಹೇರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದು, ಹಣದಾಸೆಗೆ ಡ್ರಗ್ ಮಾರಾಟ ದಂಧೆಯಲ್ಲಿ ತೊಡಗಿದ್ದಳು ಎಂದು ತಿಳಿಸಿದರು.
ಆರೋಪಿ ಮಹಿಳೆಯು ಮನೆಯಲ್ಲಿ ಎಂಡಿಎಂಎ ಡ್ರಗ್ಸ್ ನ್ನು ದಾಸ್ತಾನು ಮಾಡಿಕೊಂಡು ನೂತನ ವರ್ಷಾಚರಣೆ ಸಂದರ್ಭದಲ್ಲಿ ಪರಿಚಯಸ್ಥ ಗಿರಾಕಿಗಳಿಗೆ ಮಾರಾಟ ಮಾಡಲು ಸಂಚು ರೂಪಿಸಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಹೇಳಿದರು.
ಹೇರ್ ಡಿಸೈನ್ ಕೆಲಸ:
ಬಂಧಿತಳಿಂದ ೧೮.೫೦ ಕೋಟಿ ಮೌಲ್ಯದ ೯ ಕೆ.ಜಿ ೨೫೪ ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟೆಲ್ ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಮೊಬೈಲ್ ಫೋನ್ ಮತ್ತಿತರೆ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ.
ವಶಕ್ಕೆ ಪಡೆದ ವಿದೇಶಿ ಮಹಿಳೆಯನ್ನು ವಿಚಾರಣೆಗೊಳಪಡಿಸಲಾಗಿ, ೨೦೨೩ ರಲ್ಲಿ ಪ್ರವಾಸಿ ವೀಸಾ ಪಡೆದು ದೆಹಲಿಗೆ ಬಂದಿದ್ದು, ನಂತರದ ಸಂಪಿಗೆಹಳ್ಳಿಯ ಪಿ ಆಂಡ್ ಟಿ ಲೇಔಟ್‌ನಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು, ಹೇರ್ ಡಿಸೈನ್ ಕೆಲಸ ಮಾಡಿಕೊಂಡಿದ್ದಳು.
ಕೆಲಸದ ಜೊತೆಗೆ ಸ್ಥಳೀಯ ಡ್ರಗ್‌ಪೆಡ್ಲರ್‍ಗಳನ್ನು ಪರಿಚಯ ಮಾಡಿಕೊಂಡು, ದೆಹಲಿ ಮತ್ತಿತರೆ ಕಡೆಗಳಿಂದ ಎಂಡಿಎಂಎ ಕ್ರಿಸ್ಟೆಲ್‌ನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು, ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದು ತನಿಖೆಯನ್ನು ಮುಂದುವರೆಸಲಾಗಿದೆ ಎಂದರು.
ನೈಜೀರಿಯಾದ ಪ್ರಜೆ ಸೆರೆ:

ಸಿದ್ದಾಪುರದ ಲಾಲ್‌ಭಾಗ್ ಸೌತ್‌ಗೇಟ್‌ನ ಬಾಸ್ಕೆಟ್ ಬಾಲ್ ಕೋರ್ಟ್ ಬಳಿ ಪ್ರತಿ ದಿನ ಶಂಕಾಸ್ಪದ ಓಡಾಡಿಕೊಂಡು, ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ ದಾಳಿ ಮಾಡಿ ನೈಜೀರಿಯಾದ ಇಮಾನುಯಲ್ ಆರೇಂಜ್ ನನ್ನು ಬಂಧಿಸಲಾಗಿದೆ.
ಬಂಧಿತನಿಂದ ೨.೨೫ ಕೋಟಿ ಮೌಲ್ಯದ ೧ ಕೆ.ಜಿ ೧೧೫ ಗ್ರಾಂ ಎಂಡಿಎಂಎ ಕ್ರಿಸ್ಟೆಲ್ ಹಾಗೂ ಕೃತ್ಯಕ್ಕೆ ಬಳಸಲಾಗುತ್ತಿದ್ದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯು ೨೦೨೧ ರಲ್ಲಿ ಬ್ಯುಸಿನೆಸ್ ವೀಸಾ ಪಡೆದು ದೆಹಲಿಗೆ ಬಂದು ೨೦೨೨ ರಲ್ಲಿ ಬೆಂಗಳೂರಿಗೆ ಬಂದು ವಾಸವಾಗಿರುತ್ತಾನೆ. ಈತನು ದೆಹಲಿ, ಗೋವಾ ಹಾಗೂ ಸ್ಥಳೀಯ ವಿದೇಶಿ ಡ್ರಗ್‌ಪೆಡ್ಲರ್‍ಗಳಿಂದ ಎಂಡಿಎಂಎ ಕ್ರಿಸ್ಟೆಲ್‌ನ್ನು ಕಡಿಮೆ ಬೆಲೆಗೆ ಖರೀಧಿಸಿ ಬೆಂಗಳೂರಿನಲ್ಲಿ ನೆಲೆಸಿರುವ ಮತ್ತೊರ್ವ ವಿದೇಶಿ ಪ್ರಜೆಯ ಮೂಲಕ ಪರಿಚಯಸ್ಥ ಗಿರಾಕಿಗಳಿಗೆ ಡ್ರಾಪ್‌ಲೊಕೇಷನ್ ಮೂಲಕ ಸರಬರಾಜು ಮಾಡಿ ಅಕ್ರಮ ಹಣದ ಸಂಪಾದನೆಯಲ್ಲಿ ತೊಡಗಿರುತ್ತಾನೆ. ಈತನ ವಿರುದ್ದ ೨೦೨೪ರ ಫೆಬ್ರವರಿ ತಿಂಗಳಿನಲ್ಲಿ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿ ನ್ಯಾಯಾಂಗ ಬಂಧನದಲ್ಲಿದ್ದು, ೨೦೨೫ ಏಪ್ರಿಲ್ ತಿಂಗಳಿನಲ್ಲಿ ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರವೂ ಸಹ ಮತ್ತೆ ಡ್ರಗ್‌ಪೆಡ್ಲಿಂಗ್‌ನಲ್ಲಿ ತೊಡಗಿಸಿಕೊಂಡಿರುತ್ತಾನೆ. ಆರೋಪಿಯನ್ನು ಮಾನ್ಯ ನ್ಯಾಯಾಲಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ
ಹೈಡ್ರೋಗಾಂಜಾ ಜಪ್ತಿ:
ಚಾಮರಾಜಪೇಟೆಯಲ್ಲಿರುವ ಫಾರಿನ್ ಪೋಸ್ಟ್ ಆಫೀಸ್‌ನ ಕೆಲವು ಪಾರ್ಸೆಲ್‌ಗಳಲ್ಲಿ ನಿಷೇದಿತ ಮಾದಕ ವಸ್ತುಗಳಿರುವ ಬಗ್ಗೆ ಕಸ್ಟಮ್ಸ್‌ನ ಅಧಿಕಾರಿಗಳು ನೀಡಿದ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿ ೮ ಕೋಟಿ ಮೌಲ್ಯದ ೮ ಕೆ.ಜಿ ಹೈಡ್ರೋಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ವಿದೇಶಿ ಮೂಲಗಳಿಂದ ಹೈಡ್ರೋಗಾಂಜಾವನ್ನು ಖರೀಧಿಸಿ, ಅವುಗಳನ್ನು ವ್ಯವಸ್ಥಿತವಾಗಿ ಟೀ ಪಟ್ಟಣದಲ್ಲಿ
ಪ್ಯಾಕ್ ಮಾಡಿ, ವಿದೇಶಿ ಅಂಚೆ ಮೂಲಕ ಬೆಂಗಳೂರಿಗೆ ತರಿಸಿಕೊಂಡಿರುತ್ತಾರೆ.
ಈ ಬಗ್ಗೆ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಆರೋಪಿಗಳ ಪತ್ತೆಕಾರ್ಯ ಮುಂದುವರೆದಿದೆ ಎಂದು ಹೇಳಿದರು.
೫೦ ಸಾವಿರ ಬಹುಮಾನ:
ಜಂಟಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ ನೇತೃತ್ವದಲ್ಲಿ ಡಿಸಿಪಿ ರಾಜಾ ಇಮಾಮ್ ಖಾಸೀಂ ನೇತೃತ್ವದ ಎಸಿಪಿ ಹೆಚ್.ಕೆ.ಮಹಾನಂದ್, ಇನ್ಸ್ ಪೆಕ್ಟರ್ ಗಳಾದ ವಿ.ಡಿ.ಶಿವರಾಜು,ಲಕ್ಷ್ಮಿನಾರಾಯಣ್.ಕೆ, ರಕ್ಷಿತ್.ಎಕೆ ಮತ್ತವರ ಸಿಬ್ಬಂದಿ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು,ತಂಡಕ್ಕೆ ೫೦ ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.




























