
ಬೀದರ್,ಜು.೩; ಪ್ರಯಾಣಿಕರಿದ್ದ ಗೂಡ್ಸ್ ವಾಹನವೊಂದು ಏಕಾಏಕಿ ಬಾವಿಗೆ ಬಿದ್ದು ಇಬ್ಬರು ಮೃತಪಟ್ಟು, ೪ ಮಂದಿ ಗಾಯಗೊಂಡಿರುವ ಘಟನೆ ಬೀದರ್‌ನಲ್ಲಿ ನಡೆದಿದೆ.
ಬೀದರ್ ತಾಲ್ಲೂಕಿನ ಘೋಡಂಪಳ್ಳಿ ಗ್ರಾಮದಲ್ಲಿ ಈ ಅಪಘಾತ ನಡೆದಿದ್ದು, ಪ್ರಯಾಣಿಕರಿದ್ದ ಗೂಡ್ಸ್ ವಾಹನ ಏಕಾಏಕಿ ರಸ್ತೆ ಬದಿಯ ಬಾವಿಗೆ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.
ಮೃತಪಟ್ಟವರನ್ನು ಗೂಡ್ಸ್ ವಾಹನ ಚಾಲಕ ಘೋಡಂಪಳ್ಳಿ ಗ್ರಾಮದ ಲಕ್ಷ್ಮಿಕಾಂತ್ ಅಲಿಯಾಸ್ ಕಾಂತು ಮಹಾರಾಜ ತಂದೆ ಶಂಕರರಾವ (೪೫) ಮತ್ತು ರವಿ ತಂದೆ ಮೋನಪ್ಪ (೧೮) ಎಂದು ಗುರುತಿಸಲಾಗಿದ್ದು, ಇವರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಾಯಗೊಂಡಿರುವ ಅರ್ಜುನ್ ತಂದೆ ವೈಜನಾಥ, ಪ್ರಜ್ವಲ್ ತಂದೆ ಶ್ರೀಕಾಂತ, ಪವನ್ ತಂದೆ ತಿಪ್ಪಣ್ಣ, ಮತ್ತು ಸಂಗಮೇಶ್ ತಂದೆ ತುಕಾರಾಮ ಇವರೆಲ್ಲ ಘೋಡಂಪಳ್ಳಿ ಗ್ರಾಮದವರಾಗಿದ್ದು, ಬೀದರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಗೂಡ್ಸ್ ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದೆ. ಆಳದ ಬಾವಿಗೆ ಗೂಡ್ಸ್ ವಾಹನ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಗೂಡ್ಸ್ ವಾಹನದಲ್ಲಿದ್ದ ಪ್ರಯಾಣಿಕರ ರಕ್ಷಣೆಗೆ ಧಾವಿಸಿ ಎಲ್ಲರನ್ನೂ ಬಾವಿಯಿಂದ ಮೇಲೆತ್ತಿದ್ದು, ಅಷ್ಟರಲ್ಲಿ ಇಬ್ಬರ ಜೀವ ಹೋಗಿತ್ತು.

ಈ ಘಟನೆ ಸಂಬಂಧ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಮಗನ ಸಾವಿನ ಸುದ್ದಿ ಕೇಳಿ ತಾಯಿ ಸಾವು
ಬೀದರ್ ಜಿಲ್ಲೆಯ ಘೋಡಂಪಳ್ಳಿ ಗ್ರಾಮ ಸಮೀಪ ಸಂಭವಿಸಿದ ಅಪಘಾತದಲ್ಲಿ ಮಗ ಮೃತಪಟ್ಟ ಸುದ್ದಿ ಕೇಳಿ ಎದೆಯೊಡೆದು ತಾಯಿಯೊಬ್ಬರು ಮೃತಪಟ್ಟಿದ್ದಾರೆ.
ಘೋಡಂಪಳ್ಳಿ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ರವಿ ತಂದೆ ಮೋನಪ್ಪ (೧೮) ಎಂಬ ಯುವಕ ಮೃತಪಟ್ಟಿದ್ದು, ಅಪಘಾತದಲ್ಲಿ ಮಗ ಮೃತಪಟ್ಟ ಸುದ್ದಿ ತಿಳಿದು ತಾಯಿ ಶಾರಾದಾಬಾಯಿ (೭೦) ಎದೆಯೊಡೆದು ಇಂದು ಬೆಳಗಿನಜಾವ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.