ಬ್ರಿಮ್ಸ್ ಬೀದರ್‍ನಲ್ಲಿ ಟ್ಯೂಟರ್ ಡಾ. ಜಯಸಿಂಗ್ ವಿರುದ್ಧ ಕಾನೂನು ಬಾಹಿರ ಸೇವೆ ಆರೋಪ

ಬೀದರ್:ಡಿ.17:ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್), ಬೀದರ್‍ನಲ್ಲಿ ಟ್ಯೂಟರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಜಯಸಿಂಗ್ ಅವರು ಸರ್ಕಾರದ ನಿಯಮಾವಳಿಗಳಿಗೆ ವಿರುದ್ಧವಾಗಿ ಸೇವೆ ಸಲ್ಲಿಸುತ್ತಿರುವುದರಿಂದ ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕೆಂದು ನಮ್ಮ ಕರ್ನಾಟಕ ಸೇನೆ ಸಂಘಟನೆಯಿಂದ ಆಗ್ರಹಿಸಲಾಗಿದೆ. ಈ ಕುರಿತು ಬ್ರಿಮ್ಸ್ ನಿರ್ದೇಶಕರ ಮುಖಾಂತರ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗಿದೆ.

ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿಯವರು ನೀಡಿದ ಪ್ರಕಟಣೆಯಲ್ಲಿ, ದಿನಾಂಕ 18-05-2007ರ ಕಚೇರಿ ಜ್ಞಾಪನೆ ಹಾಗೂ 10-12-2014ರಂದು ಬ್ರಿಮ್ಸ್ ನಿರ್ದೇಶಕರು ನೀಡಿದ ಪತ್ರದಂತೆ, ಡಾ. ಜಯಸಿಂಗ್ ಅವರು 2018-19ನೇ ಸಾಲಿನೊಳಗಾಗಿ ಸ್ನಾತಕೋತ್ತರ ಪದವಿ ಪಡೆಯುವುದು ಕಡ್ಡಾಯವಾಗಿತ್ತು. ನಿಗದಿತ ಅವಧಿಯೊಳಗೆ ಸ್ನಾತಕೋತ್ತರ ಪದವಿ ಪಡೆಯದಿದ್ದಲ್ಲಿ ಸೇವೆಯಿಂದ ಬಿಡುಗಡೆಗೊಳಿಸುವ ಷರತ್ತಿನೊಂದಿಗೆ ಎಐಸಿಟಿಇ ವೇತನ ಶ್ರೇಣಿಯಲ್ಲಿ ನೇಮಕಾತಿ ನೀಡಲಾಗಿತ್ತು ಎಂದು ತಿಳಿಸಲಾಗಿದೆ.

ಆದರೆ, ಇಂದಿನವರೆಗೂ ಡಾ. ಜಯಸಿಂಗ್ ಅವರು ಸ್ನಾತಕೋತ್ತರ ಪದವಿ ಪಡೆದಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೆ, 19ನೇ ಆಡಳಿತ ಮಂಡಳಿಯ ನಿರ್ಧಾರದಂತೆ ಆಡಳಿತಾತ್ಮಕ ಕಚೇರಿಯಲ್ಲಿ ಯಾವುದೇ ಕಾರ್ಯ ನಿರ್ವಹಿಸುವಂತಿಲ್ಲ ಎಂಬ ನಿಯಮ ಇದ್ದರೂ, ಅದನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರಲಾಗಿದೆ.

ಸರ್ಕಾರದ ಆದೇಶಗಳನ್ನು ಪಾಲಿಸದೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತಪ್ಪು ಮಾಹಿತಿ ನೀಡಿ ಕರ್ತವ್ಯ ಲೋಪ ಎಸಗುತ್ತಿದ್ದಾರೆ ಎನ್ನಲಾಗಿದ್ದು, ಈ ಕುರಿತು ಬ್ರಿಮ್ಸ್ ನಿರ್ದೇಶಕರು ಇದುವರೆಗೆ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲವೆಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ. ಇದರಿಂದ ಸಂಸ್ಥೆಯ ಆಡಳಿತಾತ್ಮಕ ಕಾರ್ಯವೈಖರಿ ಹದಗೆಟ್ಟಿದೆ ಎಂದು ಆರೋಪಿಸಲಾಗಿದೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಡಾ. ಜಯಸಿಂಗ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಬೇಕೆಂದು ನಮ್ಮ ಕರ್ನಾಟಕ ಸೇನೆ ಒತ್ತಾಯಿಸಿದೆ. ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಬ್ರಿಮ್ಸ್ ಎದುರುಗಡೆ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕೇತನ ಪಾಟೀಲ್, ಶಿವಕುಮಾರ, ಶಾನವಾಜ, ಪ್ರೇಮ ಕೋಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.