ತುಮಕೂರು ವಿವಿ ಜ್ಞಾನಸಿರಿ ಕ್ಯಾಂಪಸ್ ಲೋಕಾರ್ಪಣೆ

ತುಮಕೂರು, ನ. ೭- ಶೈಕ್ಷಣಿಕ ನಗರಿ ಎಂದೇ ಪ್ರಸಿದ್ದವಾಗಿರುವ ಕಲ್ಪತರುನಾಡಿನ ಮುಕುಟಮಣಿ ತುಮಕೂರು ವಿಶ್ವವಿದ್ಯಾನಿಲಯದ ನೂತನ ಜ್ಞಾನಸಿರಿ ಕ್ಯಾಂಪಸ್‌ನ್ನು ರಾಜ್ಯಪಾಲರು ಹಾಗೂ ವಿವಿ ಕುಲಾಧಿಪತಿಗಳಾದ ಥಾವರ್‌ಚಂದ್ ಗೆಹ್ಲೋಟ್ ಲೋಕಾರ್ಪಣೆ ಮಾಡಿದರು.


ತಾಲ್ಲೂಕಿನ ಬಿದರಕಟ್ಟೆಯಲ್ಲಿಂದು ನೂತನವಾಗಿ ನಿರ್ಮಿಸಲಾಗಿರುವ ತುಮಕೂರು ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್ ’ಜ್ಞಾನಸಿರಿ’, ಶೈಕ್ಷಣಿಕ ಭವನ ಹಾಗೂ ಇತರ ಕಟ್ಟಡಗಳನ್ನು ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಉದ್ಘಾಟಿಸಿದರು.


ನಂತರ ಮಾತನಾಡಿದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು, ಹಸಿರು ಪ್ರಕೃತಿ ಮಧ್ಯೆ ತುಮಕೂರು ವಿಶ್ವವಿದ್ಯಾನಿಲಯದ ಜ್ಞಾನಸಿರಿ ಕ್ಯಾಂಪಸ್ ತಲೆಯೆತ್ತಿ ನಿಂತಿದೆ. ವಿದ್ಯಾರ್ಥಿಗಳ ಕಲಿಕೆ ಪೂರಕವಾದ ವಾತಾವರಣ ಇದ್ದು, ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಈಗಾಗಲೇ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಮೂಲಕ ಇತರ ವಿವಿಗಳಿಗೆ ಮಾದರಿಯಾಗಿದೆ. ಅದೇ ರೀತಿ ಶೈಕ್ಷಣಿಕ ಪ್ರಗತಿಯಲ್ಲೂ ಮುಂಚೂಣಿಯಲ್ಲಿದೆ ಎಂದು ಪ್ರಶಂಸಿಸಿದರು.


ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ವಿವಿ ಕುಲಪತಿ ಪ್ರೊ. ವೆಂಕಟೇಶ್ವರಲು, ನೂತನ ಶೈಕ್ಷಣಿಕ ಭವನವು ಅಂದಾಜು ೧೭ ಸಾವಿರ ಚದರ ಮೀಟರ್ ವಿಸ್ತೀರ್ಣದ್ದಾಗಿದ್ದು, ರೂ. ೪೮.೭೪ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ರಾಜ್ಯ ಸರ್ಕಾರದ ಎಸ್‌ಸಿಪಿ- ಟಿಎಸ್‌ಪಿ ಅನುದಾನ ಹಾಗೂ ವಿಶ್ವವಿದ್ಯಾನಿಲಯದ ಆಂತರಿಕ ಸಂಪನ್ಮೂಲದಿಂದ ಕಲಾಭವನ, ರೂ. ೨.೫ ಕೋಟಿ ವೆಚ್ಚದ ಪ್ರಧಾನ ದ್ವಾರ ಹಾಗೂ ಆವರಣಗೋಡೆ ನಿರ್ಮಿಸಲಾಗಿದೆ ಎಂದು ಹೇಳಿದರು.


ಜ್ಞಾನಸಿರಿ ಕ್ಯಾಂಪಸ್‌ನಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಸ್ನಾತಕೋತ್ತರ ಪುರುಷ ಮತ್ತು ಮಹಿಳೆಯರ ಹಾಸ್ಟೆಲ್‌ಗಳು, ಪ.ಜಾ./ಪ.ಪಂ. ಸಂಶೋಧನಾರ್ಥಿಗಳ ಹಾಸ್ಟೆಲ್, ಸ್ನಾತಕೋತ್ತರ ಪುರುಷರ ಹಾಸ್ಟೆಲ್, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಯೋಗಾಲಯ, ಉಪಪ್ರಾದೇಶಿಕ ವಿಜ್ಞಾನಕೇಂದ್ರಗಳು ಈಗಾಗಲೇ ಲೋಕಾರ್ಪಣೆಗೊಂಡಿವೆ. ವಿಪ್ರೋ ಸಂಸ್ಥೆಯ ಅನುದಾನದಿಂದ ಜೀವವೈವಿಧ್ಯ ಉದ್ಯಾನ ನಿರ್ಮಾಣವಾಗುತ್ತಿದೆ. ೬೦೦ ಪ್ರಭೇದಗಳ ನಾಲ್ಕೂವರೆ ಸಾವಿರ ಗಿಡ ಮರಗಳು ಇಲ್ಲಿ ಬೆಳೆಸಲಾಗಿದೆ ಎಂದು ತಿಳಿಸಿದರು.


ಸಮಾರಂಭದ ಅಧ್ಯಕ್ಷತೆಯನ್ನು ಉನ್ನತ ಶಿಕ್ಷಣ ಸಚಿವ ಹಾಗೂ ತುಮಕೂರು ವಿವಿ ಸಹ ಕುಲಾಧಿಪತಿಗಳಾದ ಡಾ. ಕೆ. ಸುಧಾಕರ್ ವಹಿಸಿದ್ದರು. ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್, ಶಾಸಕ ಬಿ. ಸುರೇಶ್‌ಗೌಡ, ವಿವಿ ಕುಲಪತಿ ಪ್ರೊ. ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್ ಜಮ್ ಮತ್ತಿತರರು ಉಪಸ್ಥಿತರಿದ್ದರು.


ಸಿಎಂ ಗೈರು: ವಿದ್ಯಾರ್ಥಿಗಳಲ್ಲಿ ನಿರಾಸೆ
ತುಮಕೂರು ವಿಶ್ವವಿದ್ಯಾನಿಲಯದ ನೂತನ ಜ್ಞಾನಸಿರಿ ಕ್ಯಾಂಪಸ್ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದ ಕಲ್ಪತರುನಾಡಿನ ವಿದ್ಯಾರ್ಥಿಗಳಲ್ಲಿ ಮುಖ್ಯಮಂತ್ರಿಗಳು ಗೈರಾಗಿದ್ದು ತೀವ್ರ ನಿರಾಸೆ ಉಂಟು ಮಾಡಿತ್ತು.


ಬಿದರಕಟ್ಟೆಯಲ್ಲಿ ನಿರ್ಮಾಣವಾಗಿರುವ ತುಮಕೂರು ವಿವಿ ನೂತನ ಜ್ಞಾನಸಿರಿ ಕ್ಯಾಂಪಸ್ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ ಎಂದು ಭದ್ರತಾ ವ್ಯವಸ್ಥೆ ಸೇರಿದಂತೆ ಅಗತ್ಯ ಸಿದ್ದತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿತ್ತು. ತುಮಕೂರು ವಿವಿ ವಿದ್ಯಾರ್ಥಿಗಳು ಸಹ ಮುಖ್ಯಮಂತ್ರಿಗಳು ನಮ್ಮ ಕ್ಯಾಂಪಸ್‌ಗೆ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಕೊನೆ ಕ್ಷಣದಲ್ಲಿ ಕಬ್ಬು ಬೆಳೆಗಾರರ ಸಭೆ ನಿಗದಿ ಸಂಬಂಧ ಮುಖ್ಯಮಂತ್ರಿಗಳು ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಗೈರಾಗಿದ್ದು ವಿದ್ಯಾರ್ಥಿಗಳಲ್ಲಿ ತೀವ್ರ ಬೇಸರ ತರಿಸಿತ್ತು.