ತುಮಕೂರು, ಸೆ. ೨೨- ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲೇ ಶೈಕ್ಷಣಿಕ ನಗರಿ, ಕಲ್ಪತರುನಾಡಿನಲ್ಲಿ ೧೧ ದಿನಗಳ ಕಾಲ ಹಲವು ವೈಶಿಷ್ಟ್ಯಗಳೊಂದಿಗೆ ಹಮ್ಮಿಕೊಂಡಿರುವ ತುಮಕೂರು ದಸರಾ ಉತ್ಸವಕ್ಕೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ವಿದ್ಯುಕ್ತ ಚಾಲನೆ ದೊರೆಯಿತು.
ಈ ಬಾರಿ ಹಾಟ್ ಏರ್ ಬಲೂನ್, ಹೆಲಿ ರೇಡ್, ಫಲಪುಷ್ಪ ಪ್ರದರ್ಶನ, ವಿಂಟೇಜ್ ಕಾರ್ ಶೋ, ವನ್ಯಜೀವಿ ಛಾಯಾಗ್ರಹಣ, ಪಾರಂಪರಿಕ ಕೃಷಿ ಸಾಧನೆಗಳು, ನವರಾತ್ರಿ ಗೊಂಬೆಗಳ ಪ್ರದರ್ಶನ, ಪಂಜಿನ ಕವಾಯತು, ಸಂಗೀತ ರಸಧಾರೆ, ಝಗಮಗಿಸುವ ವಿದ್ಯುತ್ ದೀಪಾಲಂಕಾರ, ಮಹಿಳಾ ದಸರಾ, ರಂಗ ದಸರಾ ನಾಟಕೋತ್ಸವ, ಆಹಾರ ಮೇಳ, ಮಹಿಳಾ ಕೌಶಲ್ಯ ಮೇಳ ಮತ್ತು ೨೦೦ ಮಹಿಳೆಯರ ಬೈಕ್ ರೈಡ್ ಸೇರಿದಂತೆ ವಿವಿಧ ವೈಶಿಷ್ಟಪೂರ್ಣ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ತುಮಕೂರು ದಸರಾ ನೋಡುಗರ ಕಣ್ಮನ ಸೆಳೆಯುತ್ತಿದ್ದು, ಜಿಲ್ಲೆಯ ಜನರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.
ಜಿಲ್ಲಾಡಳಿತದ ವತಿಯಿಂದ ಎರಡನೇ ಬಾರಿಗೆ ಹಮ್ಮಿಕೊಂಡಿರುವ ತುಮಕೂರು ದಸರಾ ಉತ್ಸವಕ್ಕೆ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಿದ್ದಪಡಿಸಲಾಗಿರುವ ಧಾರ್ಮಿಕ ಮಹಾಮಂಟಪದಲ್ಲಿ ಬೆಳಿಗ್ಗೆಯೇ ನಾದಸ್ವರದೊಂದಿಗೆ ಭೂಮಿ ಪೂಜೆ ಹಾಗೂ ನಾಡ ಧ್ವಜಾರೋಹಣವನ್ನು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಡಾ. ಜಿ. ಪರಮೇಶ್ವರ್ ನೆರವೇರಿಸುವ ಮೂಲಕ ತುಮಕೂರು ದಸರಾ ಉತ್ಸವಕ್ಕೆ ಅದ್ದೂರಿ ಚಾಲನೆ ನೀಡಿದರು.
ಧಾರ್ಮಿಕ ಮಹಾಮಂಟಪದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ಧಾರ್ಮಿಕ ಉತ್ಸವ, ನವರಾತ್ರಿ ಉತ್ಸವದೊಂದಿಗೆ ದುರ್ಗಾಪೂಜೆಯನ್ನು ನೆರವೇರಿಸಿದರು.
ಚಾಮುಂಡೇಶ್ವರಿ ದೇವಿಗೆ ವಿವಿಧ ಮಠಾಧೀಶರು ಹಾಗೂ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಕನ್ನಿಕಾ ಪರಮೇಶ್ವರ್ ಅವರು ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸುವ ಮೂಲಕ ತುಮಕೂರು ದಸರಾ ಆಚರಣೆಯನ್ನು ಆರಂಭಿಸಿದರು.
ನಂತರ ನಡೆದ ಹೋಮದಲ್ಲಿ ಪಾಲ್ಗೊಂಡು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಮುಜರಾಯಿ ದೇವಾಲಯಗಳ ಇಲಾಖೆಯ ಅರ್ಚಕರುಗಳಿಂದ ತಾಯಿ ಚಾಮುಂಡೇಶ್ವರಿ ದೇವಿಗೆ ಶೈಲಪುತ್ರಿ ಅಲಂಕಾರ ಮಾಡಿ ಮುಂಜಾನೆಯಿಂದಲೇ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಬ್ರಾಹ್ಮಿ ಮುಹೂರ್ತದಲ್ಲಿ ಗಂಗಾಪೂಜೆ, ಗೋಪೂಜೆ, ಯಾಗಶಾಲಾ ಪ್ರವೇಶ, ಗಣಪತಿ ಪೂಜೆ, ಪುಣ್ಯಾಹ, ಭೂಮಿಪೂಜೆ, ಪ್ರಧಾನ ಕಳಶಾರಾಧನೆ, ಅಗ್ನಿ ಪ್ರತಿಷ್ಠಾಪನೆ, ಗಣಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಶ್ರೀ ದುರ್ಗಾಹೋಮ ಸೇರಿದಂತೆ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.
ನಂತರ ಸಚಿವ ಡಾ. ಜಿ. ಪರಮೇಶ್ವರ ಅವರು ವಾದ್ಯ ಭಾರಿಸುವ ಮೂಲಕ ದಸರಾ ಉತ್ಸವದ ಎಲ್ಲ ಕಾರ್ಯಕ್ರಮಗಳಿಗೆ ಅಧಿಕೃತವಾಗಿ ಚಾಲನೆ ನೀಡಿದರು.
ದಸರಾ ಉತ್ಸವದ ಮೊದಲ ದಿನವಾದ ಇಂದು ಸರ್ವೋದಯ ಹೈಸ್ಕೂಲ್ ಮೈದಾನದಲ್ಲಿ ಹಾಟ್ ಏರ್ ಬಲೂನ್, ತುಮಕೂರು ವಿಶ್ವವಿದ್ಯಾನಿಲಯ ಹೆಲಿಪ್ಯಾಡ್‌ನಲ್ಲಿ ಹೆಲಿ-ರೈಡ್ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರಾದ ಕೆ.ಎನ್. ರಾಜಣ್ಣ, ಕೆ. ಷಡಕ್ಷರಿ, ಜ್ಯೋತಿಗಣೇಶ್, ಸುರೇಶ್‌ಗೌಡ, ಸುರೇಶ್‌ಬಾಬು, ಡಾ. ರಂಗನಾಥ್, ಹೆಚ್.ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ. ಸಿಇಓ ಜಿ. ಪ್ರಭು, ಎಸ್ಪಿ ಅಶೋಕ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸಂಜೆ ೪.೩೦ ಗಂಟೆಗೆ ಹಾಸ್ಯ ಚಕ್ರವರ್ತಿ ನರಸಿಂಹರಾಜು ಸಾಂಸ್ಕೃತಿಕ ವೈಭವ ವೇದಿಕೆಯಲ್ಲಿ ಜನಪದ ಮತ್ತು ಶಾಸ್ತ್ರೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸಂಜೆ ೬ ಗಂಟೆಗೆ ರಂಗ ದಸರಾ ನಾಟಕೋತ್ಸವ ಪ್ರಾರಂಭವಾಗಲಿದೆ. ನಗರದ ಬಿ.ಜಿ.ಎಸ್. ವೃತ್ತದಲ್ಲಿ ಸಂಜೆ ೬.೩೦ಕ್ಕೆ ದಸರಾ ವಿಶೇಷ ದೀಪಾಲಂಕಾರ ಹಾಗೂ ವಿಶೇಷ ಅಂಬಾರಿ ಸಿಟಿ ಬಸ್ ಪ್ರಯಾಣಕ್ಕೆ ಚಾಲನೆ ದೊರೆಯಲಿದೆ.
ಸೆ. ೨೭ರಂದು ಶಿಕ್ಷಣ ಭೀಷ್ಮ ಡಾ. ಎಚ್.ಎಂ. ಗಂಗಾಧರಯ್ಯ ಫಲಪುಷ್ಪ ಕಲಾ ಮತ್ತು ಜ್ಞಾನ ವೈಭವ ಸಂಕೀರ್ಣದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಊಂಐ, ISಖಔ, ವಿಂಟೇಜ್ ಕಾರ್ ಶೋ, ವನ್ಯಜೀವಿ ಛಾಯಾಗ್ರಹಣ, ಪಾರಂಪರಿಕ ಕೃಷಿ ಸಾಧನೆಗಳು, ನವರಾತ್ರಿ ಗೊಂಬೆಗಳ ಪ್ರದರ್ಶನ ಸೇರಿದಂತೆ ಹಲವು ಆಕರ್ಷಣೆಗಳನ್ನು ಕಾಣಬಹುದಾಗಿದೆ. ಇದೇ ದಿನ ಆಹಾರ ಮೇಳ, ಮಹಿಳಾ ಕೌಶಲ್ಯ ಮೇಳ ಮತ್ತು ೨೦೦ ಮಹಿಳೆಯರ ಬೈಕ್ ರೈಡ್ ಏರ್ಪಡಿಸಲಾಗಿದೆ.


























