
ಚನ್ನೈ, ಮೇ ೯- ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಹಗ್ಗಜಗ್ಗಾಟ ಮುಂದುವರೆದಿದ್ದು, ರಾಜಕೀಯ ಹೈಡ್ರಾಮಾವೇ ನಡೆದಿದೆ. ಟಿವಿಕೆ ಮುಖ್ಯಸ್ಥ ವಿಜಯ್ ಅವರು ಮುಖ್ಯಮಂತ್ರಿಯಾಗುವ ಹಾದಿ ಇನ್ನು ಸುಗಮವಾಗಿಲ್ಲ.
ನಿನ್ನೆ ರಾಜ್ಯಪಾಲರನ್ನು ಭೇಟಿ ಮಾಡಿ ೧೧೮ ಶಾಸಕರ ಬೆಂಬಲ ಪತ್ರ ನೀಡಿ ಸರ್ಕಾರ ರಚನೆಯ ಹಕ್ಕು ಮಂಡಿಸಿ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದ ಟಿವಿಕೆ ಪಕ್ಷದ ವಿಜಯ್ ರವರಿಗೆ ವಿಕೆಸಿ ಪಕ್ಷ ಆಘಾತ ನೀಡಿ ಟಿವಿಕೆಗೆ ಬೆಂಬಲ ನೀಡುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿರುವುದು ವಿಜಯ್ ರವರ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಅಡ್ಡಿಯಾಗಿದೆ.
ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ೫ ದಿನವಾದರೂ ಸರ್ಕಾರ ರಚನೆ ಕುರಿತಂತೆ ಅನಿಶ್ಚಿತತೆ ಮುಂದುವರೆದಿದ್ದು, ವಿಜಯ್ ಪಟ್ಟಾಭಿಷೇಕಕ್ಕೆ ಅಡೆತಡೆಗಳು ಎದುರಾಗುತ್ತಲೇ ಇದ್ದು, ಟಿವಿಕೆ ಮುಖ್ಯಸ್ಥ ವಿಜಯ್‌ಗೆ ಅಧಿಕಾರ ಹಿಡಿಯುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ತಮಿಳುನಾಡಿನ ಪ್ರಸ್ತುತ ವಿಧಾನಸಭೆಯ ಅವಧಿ ನಾಳೆಗೆ ಅಂತ್ಯಗೊಳ್ಳಲಿದ್ದು, ಅಷ್ಟರೊಳಗೆ ಹೊಸ ಸರ್ಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆಯೂ ಇದೆ.
ಸರ್ಕಾರ ರಚನೆ ಸಂಬಂಧ ನಟ ವಿಜಯ್ ಇದುವರೆಗೂ ರಾಜ್ಯಪಾಲರನ್ನು ಮೂರು ಬಾರಿ ಭೇಟಿಯಾಗಿ ೧೧೮ ಶಾಸಕರ ಬೆಂಬಲ ಹೊಂದಿರುವುದಾಗಿ ಹೇಳಿದ್ದರಾದರೂ ವಿಸಿಕೆ ಪಕ್ಷ ನಟ ವಿಜಯ್‌ಗೆ ಬೆಂಬಲ ನೀಡುವ ವಿಚಾರದಲ್ಲಿ ಯಾವುದೇ ಸ್ಪಷ್ಟ ಘೋಷಣೆ ಮಾಡದಿರುವುದು ವಿಜಯ್ ಪಟ್ಟಾಭಿಷೇಕಕ್ಕೆ ಅಡ್ಡಿಯಾಗಿದೆ.
ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಕಳೆದ ೫ ದಿನಗಳಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಪ್ರಹಸನಗಳೇ ನಡೆದು ಹೋಗಿದ್ದು, ವಿಜಯ್‌ಗೆ ಬೆಂಬಲ ನೀಡುವ ವಿಚಾರದಲ್ಲಿ ವಿಸಿಕೆ, ಇಂಡಿಯನ್ ಮುಸ್ಲಿಂ ಲೀಗ್ ಮತ್ತು ಎಎಂಎಂಕೆ ಯೂಟರ್ನ್ ಹೊಡೆದಿವೆ. ಹಾಗಾಗಿ ವಿಜಯ್ ಪಟ್ಟಾಭಿಷೇಕ ಇಂದು ಸಾಧ್ಯವೇ?, ವಿಜಯ್ ಮುಖ್ಯಮಂತ್ರಿ ಆಗುವ ಹಾದಿ ಸುಗಮವಾಗಲಿದೆಯೇ ಎಂಬ ಕುತೂಹಲಗಳು ಮೂಡಿವೆ.
ನಟ ವಿಜಯ್ ನೇತೃತ್ವದ ಟಿವಿಕೆ ಬಹುಮತ ಗಳಿಸಲು ಸಾಕಷ್ಟು ಕಸರತ್ತು ನಡೆಸಿದೆಯಾದರೂ ವಿಸಿಕೆ, ಮುಸ್ಲಿಂ ಲೀಗ್ ಪಕ್ಷಗಳು ಒಂದು ದೃಢ ನಿರ್ಧಾರ ಕೈಗೊಳ್ಳದಿರುವುದು ವಿಜಯ್ ರವರ ಹಾದಿಗೆ ಮುಳ್ಳಾಗಿ ಪರಿಣಮಿಸಿದೆ.
ನಿನ್ನೆ ತಮ್ಮ ಎಎಂಎಂಕೆ ಪಕ್ಷದ ಶಾಸಕರ ಜತೆ ರಾಜ್ಯಪಾಲರನ್ನು ಭೇಟಿ ಮಾಡಿದ್ದ ಎಎಂಎಂಕೆ ಮುಖ್ಯಸ್ಥ ಟಿ.ಟಿ.ವಿ. ದಿನಕರನ್ ತಮ್ಮ ಪಕ್ಷ ವಿಜಯ್ ರವರಿಗೆ ಬೆಂಬಲ ನೀಡಿಲ್ಲ ಎಂದು ಹೇಳಿದ್ದು, ಈ ಸಂದರ್ಭದಲ್ಲಿ ಎಎಂಎಂಕೆಯಿಂದ ಗೆದ್ದಿರುವ ಏಕೈಕ ಶಾಸಕ ಕಾಮರಾಜ್ ಸಹ ಜತೆಗಿದ್ದರು. ಟಿಟಿವಿ ದಿನಕರನ್ ಎಐಎಡಿಎಂಕೆ ಮುಖ್ಯಸ್ಥ ಪಳನಿಸ್ವಾಮಿಯವರಿಗೆ ಬೆಂಬಲ ಸೂಚಿಸಿದ್ದಾರೆ.
೪೭ ಶಾಸಕರನ್ನು ಹೊಂದಿರುವ ಎಐಎಡಿಎಂಕೆ ಪಕ್ಷ ಡಿಎಂಕೆಯ ಬಾಹ್ಯ ಬೆಂಬಲದಿಂದ ಸರ್ಕಾರ ರಚಿಸುತ್ತವೆ ಎಂಬ ಸುದ್ದಿಗಳು ಹರಿದಾಡುತ್ತಿವೆಯಾದರೂ ಡಿಎಂಕೆ ಎಐಎಡಿಎಂಕೆಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗಾಗಿ ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಅನಿಶ್ಚಿತತೆ ಮುಂದುವರೆದಿದೆ.
ನಿನ್ನೆ ಟಿವಿಕೆಗೆ ಬೆಂಬಲ ಘೋಷಿಸಿ, ನಂತರ ಯೂಟರ್ನ್ ಹೊಡೆದಿರುವ ವಿಸಿಕೆ ಉಪಮುಖ್ಯಮಂತ್ರಿ ಸ್ಥಾನ ಮತ್ತು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ ಎಂದು ಹೇಳಲಾಗಿದೆ.
ವಿಸಿಕೆ ನಾಯಕ ತಿರುಮಾವಲನ್ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಎಡಪಕ್ಷಗಳು ಟಿವಿಕೆಗೆ ಬೆಂಬಲ ಘೋಷಿಸಿದ್ದವು. ಟಿವಿಕೆ ಬಳಿ ಈಗ ಒಟ್ಟು ೧೧೬ ಶಾಸಕರ ಬೆಂಬಲವಿದ್ದು, ಬಹುತಕ್ಕೆ ಇನ್ನು ೨ ಸದಸ್ಯರ ಸ್ಥಾನ ಕಡಿಮೆ ಇದೆ.
ಈ ಸಂಖ್ಯಾ ಬಲವನ್ನು ವಿಜಯ್ ಯಾವ ರೀತಿ ಗಳಿಸುತ್ತಾರೆ, ವಿಜಯ್ ಸರ್ಕಾರ ರಚನೆ ಆಗುತ್ತದೆಯೇ ಎಂಬ ಚರ್ಚೆಗಳು ಬಿರುಸಾಗಿವೆ.
ಇಂದು ಸಂಜೆ ವೇಳೆಗೆ ತಮಿಳುನಾಡಿನಲ್ಲಿ ಯಾವ ಸರ್ಕಾರ ರಚನೆಯಾಗಬಹುದು ಎಂಬ ಸ್ಪಷ್ಟತೆ ಸಿಗುವ ಸಾಧ್ಯತೆಗಳಿವೆ.
ರದ್ದಾದ ಸುದ್ದಿಗೋಷ್ಠಿ
ಸರ್ಕಾರ ರಚನೆಗೆ ಬಹುಮತದ ಸಂಬಂಧ ಮಾಹಿತಿ ನೀಡಲು ಟಿವಿಕೆ ಇಂದು ಬೆಳಿಗ್ಗೆ ೧೧ ಗಂಟೆಗೆ ಸುದ್ದಿಗೋಷ್ಠಿ ನಡೆಸುವುದಾಗಿ ಹೇಳಿತ್ತಾದರೂ ತಮಿಳುನಾಡಿನ ರಾಜಕೀಯದ ನಾಟಕೀಯ ತಿರುವುಗಳ ಹಿನ್ನೆಲೆಯಲ್ಲಿ ಟಿವಿಕೆ ಸುದ್ದಿಗೋಷ್ಠಿಯನ್ನು ರದ್ದುಗೊಳಿಸಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ವಿಸಿಕೆ ನಾಯಕ ತಿರುಮಾವಲನ್ ಪಕ್ಷದ ಗೆಲುವನ್ನು ತಿಳಿಸುವ ನಿಟ್ಟಿನಲ್ಲಿ ಇಂದು ಸಂಜೆ ಸುದ್ಧಿಗೋಷ್ಟಿ ಕರೆದಿದ್ದು ಅಲ್ಲಿ ಅವರು ವಿಸಿಕೆ ಟಿವಿಕೆಗೆ ಬೆಂಬಲ ನೀಡುತ್ತಿದೆಯೋ ಇಲ್ಲವೋ ಸ್ಪಷ್ಟಪಡಿಸುವ ಸಾಧ್ಯತೆಯಿದ್ದು, ಸಂಜೆಯ ವೇಳೆಗೆ ತಮಿಳುನಾಡಿನ ರಾಜಕೀಯ ಚಿತ್ರಣದ ಸ್ಪಷ್ಟತೆ ಲಭ್ಯವಾಗಲಿದೆ.
ಷಣ್ಮುಗಂ ರಾಜೀನಾಮೆ
ಎಐಡಿಎಂಕೆಯ ಪ್ರಭಾವಿ ನಾಯಕ ಸಿ.ವಿ. ಷಣ್ಮುಗಂ ರವರು ತಮ್ಮ ರಾಜ್ಯಸಭಾ ಸ್ಥಾನಕ್ಕೆ ನೀಡಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೈಲಂ ಕ್ಷೇತ್ರದಿಂದ ಷಣ್ಮುಗಂ ಶಾಸಕರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ತಮಿಳುನಾಡಿನಲ್ಲಿ ಕೆಲ ಎಐಡಿಎಂಕೆ ಶಾಸಕರು ಷಣ್ಮುಗಂ ನೇತೃತ್ವದಲ್ಲಿ ಸಭೆ ನಡೆಸಿ ಟಿವಿಕೆಗೆ ಬೆಂಬಲ ನೀಡಬೇಕು ಎಂದು ಎರಪ್ಪಾಡಿ ಪಳನಿಸ್ವಾಮಿ ಯವರ ಮೇಲೆ ಒತ್ತಡ ಹೇರಿದ್ದರು. ಅದಕ್ಕೆ ಎಡಪ್ಪಾಡಿ ಪಳನಿಸ್ವಾಮಿ ಒಪ್ಪಿರಲಿಲ್ಲ.
ಈ ಬೆಳವಣಿಗೆ ನಡುವೆಯೇ ಷಣ್ಮುಗಂ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಎಐಡಿಎಂಕೆ ಡಿಎಂಕೆ ಅಥವಾ ಟಿವಿಕೆ ಜತೆ ಸೇರಿ ಸರ್ಕಾರ ರಚಿಸುವ ಸಾಧ್ಯತೆಯ ವದಂತಿಗಳ ನಡುವೆಯೇ ಷಣ್ಮುಗಂ ರಾಜೀನಾಮೆ ಮಹತ್ವ ಪಡೆದುಕೊಂಡಿದೆ.
ಮೈತ್ರಿ ಅಥವಾ ಹೊಸ ಸರ್ಕಾರ ರಚನೆಯ ಕುರಿತಾದ ಪ್ರಶ್ನೆಗಳಿಗೆ ಷಣ್ಮುಗಂ ಅವರು, ಈ ಬಗ್ಗೆ ನನಗೆ ಏನು ತಿಳಿದಿಲ್ಲ. ನಾನು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಇಷ್ಟು ಮಾತ್ರ ಹೇಳಬಲ್ಲೆ ಎಂದು ಪ್ರತಿಕ್ರಿಯಿಸಿದ್ದಾರೆ.



























