
ಕಲಬುರಗಿ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ಪ್ರತಿಪಾದಕ, ಸತ್ಯ, ಸರಳತೆ, ಶಿಸ್ತು ಮತ್ತು ಮಾನವೀಯ ಮೌಲ್ಯಗಳು ಅವರ ಜೀವನದ ಪ್ರಮುಖ ತತ್ವಗಳಾಗಿದ್ದವು ಎಂದು ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವ್ಹಿ. ಶಿವಾನಂದನ್ ಹೇಳಿದರು.
ನಗರದ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ರವಿವಾರ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಹಮ್ಮಿಕೊಂಡ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಗಾಂಧೀಜಿಯವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕನ್ನು ನೀಡಿದರು. ಸತ್ಯಾಗ್ರಹ ಮತ್ತು ಅಹಿಂಸೆ ಅವರ ಹೋರಾಟದ ಪ್ರಮುಖ ಅಸ್ತ್ರಗಳಾಗಿದ್ದವು. ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಮತ್ತು ಭಾರತ ಬಿಟ್ಟು ತೊಲಗಿ ಚಳವಳಿ ಮೂಲಕ ಬ್ರಿಟಿಷರ ಆಳ್ವಿಕೆಯ ವಿರುದ್ಧ ಜನರನ್ನು ಸಂಘಟಿಸಿದರು. ಸಮಾಜದಲ್ಲಿ ಸಮಾನತೆ, ಸ್ವಚ್ಛತೆ, ಸ್ವಾವಲಂಬನೆ, ಗ್ರಾಮೀಣ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯ ನೆಲೆಗೊಳ್ಳಬೇಕು ಎಂಬುದು ಅವರ ಆಶಯವಾಗಿತ್ತು. ಅವರು ಸ್ವದೇಶಿ ಮತ್ತು ಖಾದಿಗೆ ವಿಶೇಷ ಮಹತ್ವ ನೀಡಿದರು. ಪ್ರತಿಯೊಬ್ಬರೂ ತಮ್ಮ ಕೈಗಳಿಂದ ದುಡಿದು ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು. ಗಾಂಧೀಜಿಯವರ ಆದರ್ಶಗಳು, ಅವರ ತೋರಿದ ದಾರಿ ಪ್ರತಿಯೊಬ್ಬರಿಗೂ ಆದರ್ಶವಾಗಬೇಕೆಂದು ಹೇಳಿದರು.
ಅಧ್ಯಕ್ಷತೆವಹಿಸಿದ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಸುರೇಶಕುಮಾರ ನಂದಗಾಂವ ಮಾತಾನಾಡಿ, ಮಹಾತ್ಮ ಗಾಂಧೀಜಿಯವರು ಶರಣಬಸವೇಶ್ವರ ಸಂಸ್ಥಾನ ಭೇಟಿ ನೀಡಿ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಭೇಟಿ ಮಾಡಿ ಆಶೀರ್ವಾದ ಪಡೆದರು. ಅವರ ಜೀವನವೇ ಒಂದು ದೊಡ್ಡ ಸಂದೇಶವಾಗಿದ್ದು, ಅವರ ತತ್ವಗಳು ಪಾಲಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದರು. ಹಿರಿಯ ಪ್ರಾಧ್ಯಾಪಕ ಡಾ.ಶಿವರಾಜ ಶಾಸ್ತ್ರೀ ಮಾತನಾಡಿದರು. ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕಿ ಶ್ರೀಮತಿ ಅನಿತಾ ಕೃಪಾಸಾಗರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕು.ಶರಣಯ್ಯ ನಿರೂಪಿಸಿದರು. ಕು.ಐಶ್ವರ್ಯ ಪರಿಚಯಿಸಿದರು. ಕು.ಸ್ಪಂದನಾ ವಂದಿಸಿದರು. ಐಕ್ಯೂಎಸಿ, ನ್ಯಾಕ್ ಸಂಯೋಜಕರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು ಇದ್ದರು.
























