ನವದೆಹಲಿ,ಸೆ,೧೭- ಪ್ರಧಾನಿ ನರೇಂದ್ರ ಮೋದಿ ಅವರ ೭೫ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಅಷ್ಟೇ ಅಲ್ಲ, ಉಕ್ರೇನ್ ಬಿಕ್ಕಟ್ಟನ್ನು ಪರಿಹರಿಸಲು ಸಹಾಯ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ವೇಳೆ ಉಭಯ ನಾಯಕರು ದೂರವಾಣಿ ಮೂಲಕ ದೀರ್ಘ ಸಂಭಾಷಣೆ ನಡೆಸಿದರು.
ಸುಂಕದ ಕಾರಣದಿಂದ ಉಂಟಾಗಿರುವ ಉದ್ವಿಗ್ನತೆಯ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವಿನ ಸಂಭಾಷಣೆ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ತಣ್ಣಗಾಗಿರುವ ಸಂಬಂಧಗಳಲ್ಲಿ ಹೊಸ ನಂಬಿಕೆ ಮತ್ತು ಉಷ್ಣತೆಯ ಸಂದೇಶವನ್ನು ಈ ಸಂಭಾಷಣೆ ಎಂದು ಪರಿಗಣಿಸಲಾಗುತ್ತಿದೆ.
ಉಭಯ ನಾಯಕರ ಮಾತುಕತೆ ಬಳಿಕ ಪ್ರತಿಕ್ರಿಯೆ ನೀಡಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಫೋನ್ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದೆ. ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕೊನೆಗೊಳಿಸಲು ಬೆಂಬಲಕ್ಕೆ ಧನ್ಯವಾದಗಳು ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಮೊದಲ ನಾಯಕ ಡೊನಾಲ್ಡ್ ಟ್ರಂಪ್. ಅಮೆರಿಕದ ತಂಡ ವ್ಯಾಪಾರ ಒಪ್ಪಂದಕ್ಕಾಗಿ ಭಾರತದಲ್ಲಿರುವಾಗ ಉಭಯ ನಾಯಕರ ನಡುವಿನ ಫೋನ್ ಸಂಭಾಷಣೆ ಮಹತ್ವ ಪಡೆದುಕೊಂಡಿದೆ.
ಪ್ರಧಾನಿ ಪ್ರತಿಕ್ರಿಯೆ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶುಭಾಶಯ ಕೋರಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.
“ನನ್ನ ಸ್ನೇಹಿತ ಡೊನಾಲ್ಡ್ ಟ್ರಂಪ್‌ಗೆ ಧನ್ಯವಾದಗಳು, ೭೫ನೇ ಹುಟ್ಟುಹಬ್ಬದಂದು ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. ನಿಮ್ಮಂತೆಯೇ, ಭಾರತ-ಅಮೆರಿಕಾ ಸಮಗ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರಕ್ಕಾಗಿ ನಿಮ್ಮ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ ಎಂದಿದ್ದಾರೆ.
ಭಾರತದೊಂದಿಗೆ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಮಾತುಕತೆ ಕುರಿತು ಮಾತುಕತೆ ನಡೆಸಲು ಅಮೆರಿಕದ ಮುಖ್ಯ ವ್ಯಾಪಾರ ಸಮಾಲೋಚಕ ಬ್ರೆಂಡನ್ ಲಿಂಚ್ ಭಾರತಕ್ಕೆ ಭೇಟಿ ನೀಡಿದ್ದಾರೆ.



























