
ವಾಷಿಂಗ್ಟನ್,ಅ೨೪: ಇರಾನ್ ಅಮೆರಿಕದೊಂದಿಗೆ ಶಾಂತಿ ಒಪ್ಪಂದಕ್ಕೆ ಬರದಿದ್ದರೆ ಮತ್ತೊಮ್ಮೆ ಸೇನಾ ದಾಳಿ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ, ಇರಾನ್ ಸಂಘರ್ಷ ಮುಗಿದ ಬಳಿಕ ಕ್ಯೂಬಾ ವಿಚಾರದಲ್ಲಿಯೂ ಅಮೆರಿಕ ಕ್ರಮ ಕೈಗೊಳ್ಳಲಿದೆ ಎಂದು ಬೆದರಿಕೆ ಹಾಕಿದ್ದಾರೆ.
ಫ್ಲೋರಿಡಾದಲ್ಲಿ ಶುಕ್ರವಾರ ನಡೆದ ಮಧ್ಯಂತರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಟ್ರಂಪ್, ಇರಾನ್ ವಿರುದ್ಧ ಮತ್ತೊಂದು ಸುತ್ತಿನ ‘ಎಪಿಕ್ ಫ್ಯೂರಿ’ ಕಾರ್ಯಾಚರಣೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. “ನಾವು ಮತ್ತೊಂದು ಸಣ್ಣ ‘ಎಪಿಕ್ ಫ್ಯೂರಿ’ ಕಾರ್ಯಾಚರಣೆ ನಡೆಸಬಹುದು ಅಥವಾ ಅವರು ಒಪ್ಪಂದಕ್ಕೆ ಬರಬಹುದು” ಎಂದು ಅವರು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ಇರಾನ್ ವಿರುದ್ಧ ಅಮೆರಿಕ ಆರಂಭಿಸಿದ್ದ ಸೇನಾ ಕಾರ್ಯಾಚರಣೆಗೆ ‘ಆಪರೇಷನ್ ಎಪಿಕ್ ಫ್ಯೂರಿ’ ಎಂದು ಹೆಸರಿಡಲಾಗಿತ್ತು. ಇದೀಗ ಮತ್ತೆ ದಾಳಿ ನಡೆಸುವ ಕುರಿತು ಟ್ರಂಪ್ ನೀಡಿರುವ ಹೇಳಿಕೆ, ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಆತಂಕಕ್ಕೆ ಕಾರಣವಾಗಿದೆ.
ಇರಾನ್ ವಿರುದ್ಧ ದಾಳಿಯನ್ನು ಪುನರಾರಂಭಿಸುವ ಸಾಧ್ಯತೆಯಿದೆ ಎಂದು ಅಮೆರಿಕದ ಟರ್ಕಿ ರಾಯಭಾರಿ ಹಾಗೂ ಸಿರಿಯಾ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಟಾಮ್ ಬರಾಕ್ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಮತ್ತೆ ದಾಳಿ ನಡೆಸಿದರೆ ಪ್ರತಿದಾಳಿ ನಡೆಸಲು ಸಿದ್ಧವಿರುವುದಾಗಿ ಇರಾನ್ ಈಗಾಗಲೇ ಎಚ್ಚರಿಸಿದೆ. ಉಭಯ ದೇಶಗಳ ನಡುವಿನ ಸಂಘರ್ಷದ ಅನಿಶ್ಚಿತತೆ ಜಾಗತಿಕ ಪೂರೈಕೆ ಸರಪಳಿ ಹಾಗೂ ಕಚ್ಚಾ ತೈಲ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಆತಂಕವಿದೆ.
ಇರಾನ್ ಸಂಘರ್ಷದ ಬಳಿಕ ಕ್ಯೂಬಾದ ವಿಚಾರದಲ್ಲಿ ಅಮೆರಿಕ ಕ್ರಮ ಕೈಗೊಳ್ಳಲಿದೆ ಎಂದು ಟ್ರಂಪ್ ಹೇಳಿದ್ದಾರೆ. “ಇರಾನ್ನಿಂದ ಹಿಂದಿರುಗುವಾಗ ನಾವು ಕ್ಯೂಬಾವನ್ನು ನೋಡಿಕೊಳ್ಳುತ್ತೇವೆ. ನಮ್ಮ ಹಡಗುಗಳಲ್ಲಿ ಒಂದನ್ನು ಕ್ಯೂಬಾ ಕರಾವಳಿಯಿಂದ ಸುಮಾರು ೫೦ ಗಜಗಳಷ್ಟು ದೂರದಲ್ಲಿ ನಿಲ್ಲಿಸಿ, ಬಳಿಕ ಮಾರ್ಕೊ ರೂಬಿಯೊ ಅವರನ್ನು ಅಲ್ಲಿಗೆ ಕಳುಹಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಕ್ಯೂಬಾದಲ್ಲಿ ಆಡಳಿತ ಬದಲಾವಣೆಯಾಗಬೇಕೆಂದು ಟ್ರಂಪ್ ಹಲವು ಬಾರಿ ಪ್ರತಿಪಾದಿಸಿದ್ದಾರೆ. ಮೇ ತಿಂಗಳಲ್ಲಿಯೂ ಕ್ಯೂಬಾವನ್ನು ಅಮೆರಿಕ ತಕ್ಷಣವೇ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ ಎಂಬರ್ಥದ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕ್ಯೂಬಾದ ವಿದೇಶಾಂಗ ಸಚಿವ ಬ್ರುನೊ ರೊಡ್ರಿಗಸ್, ದೇಶದ ಸಾರ್ವಭೌಮತ್ವವನ್ನು ರಕ್ಷಿಸುವ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಕ್ಯೂಬಾದ ಕರಾವಳಿಯಲ್ಲಿ ಸುಂದರ ಕಡಲತೀರಗಳ ಜೊತೆಗೆ, ಶತ್ರುತ್ವದ ಉದ್ದೇಶದಿಂದ ಹಾಗೂ ಪ್ರಾಬಲ್ಯ ಸಾಧಿಸುವ ಆಸೆಯಿಂದ ಬರುವವರಿಗೆ ಪ್ರತಿಕೂಲವಾದ ಪರಿಸರವೂ ಇದೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಕ್ಯೂಬನ್ನರು ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ಜತೆ ರಹಸ್ಯ ಸಹಭಾಗಿತ್ವ ರೂಪಿಸಿಕೊಳ್ಳುವಂತೆ ಕರೆ ನೀಡಿದ್ದಾರೆ ಎಂಬ ವರದಿಯೂ ಹೊರಬಿದ್ದಿದೆ.
ಇರಾನ್ ಮತ್ತು ಕ್ಯೂಬಾ ಕುರಿತು ಟ್ರಂಪ್ ನೀಡಿರುವ ಹೇಳಿಕೆಗಳು ಅಂತರರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಹೊಸ ಅನಿಶ್ಚಿತತೆಯನ್ನು ಸೃಷ್ಟಿಸಿವೆ.
























