Home ಜಿಲ್ಲೆ ಬೆಂಗಳೂರು ೩೬೨ ಕೆಎಎಸ್ ಅಧಿಕಾರಿಗಳಿಗೆ ಕುತ್ತು

೩೬೨ ಕೆಎಎಸ್ ಅಧಿಕಾರಿಗಳಿಗೆ ಕುತ್ತು

ಬೆಂಗಳೂರು, ಅ.೨೯: ದಶಕಕ್ಕೂ ಹೆಚ್ಚು ಕಾಲದಿಂದ ನ್ಯಾಯಾಲಯದ ಅಂಗಳದಲ್ಲಿ ಕಾವೇರಿದ್ದ ೨೦೧೧ರ ಸಾಲಿನ ೩೬೨ ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಅತ್ಯಂತ ಮಹತ್ವದ ತೀರ್ಪು ನೀಡಿದೆ.

ಆಯ್ಕೆ ಪಟ್ಟಿಯನ್ನು ಬಲವಂತವಾಗಿ ಊರ್ಜಿತಗೊಳಿಸಲು ೨೦೨೨ರಲ್ಲಿ ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ರದ್ದುಗೊಳಿಸಿದೆ. ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ನೇತೃತ್ವದ ಪೀಠವು ಈ ಪ್ರಮುಖ ತೀರ್ಪನ್ನು ಪ್ರಕಟಿಸಿದ್ದು, ಪ್ರಸ್ತುತ ಸೇವೆಯಲ್ಲಿರುವ ಹಾಗೂ ನೇಮಕಾತಿ ಆದೇಶದ ನಿರೀಕ್ಷೆಯಲ್ಲಿದ್ದ ೩೬೨ ಕೆಎಎಸ್ ಅಧಿಕಾರಿಗಳ ಭವಿಷ್ಯ ಮತ್ತೆ ಭಾರಿ ಅತಂತ್ರಕ್ಕೆ ಸಿಲುಕಿದೆ.

ಹೈಕೋರ್ಟ್ ಈಗಾಗಲೇ ಅಕ್ರಮಗಳ ಹಿನ್ನೆಲೆಯಲ್ಲಿ ರದ್ದುಗೊಳಿಸಿದ್ದ ೩೬೨ ಹುದ್ದೆಗಳ ಆಯ್ಕೆ ಪಟ್ಟಿಗೆ ಜೀವ ತುಂಬಲು ರಾಜ್ಯ ಸರ್ಕಾರವು ವಿಧಾನಮಂಡಲದಲ್ಲಿ ‘ಕರ್ನಾಟಕ ನಾಗರಿಕ ಸೇವೆಗಳು (ಆಯ್ಕೆಯ ಊರ್ಜಿತಗೊಳಿಸುವಿಕೆ ಮತ್ತು ೨೦೧೧ರ ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿ) ವಿಧೇಯಕ- ೨೦೨೨’ ಅನ್ನು ತಂದು ಶಾಸನ ರೂಪಿಸಿತ್ತು.


ನ್ಯಾಯಾಲಯದ ರದ್ದತಿಯನ್ನು ಮೀರಿ ಕಾಯ್ದೆ ರೂಪಿಸಿ ಆಯ್ಕೆ ಪಟ್ಟಿಯನ್ನು ಊರ್ಜಿತಗೊಳಿಸಲು ಹೊರಟ ಸರ್ಕಾರದ ಈ ಕ್ರಮ ಶಾಸನಬದ್ಧವಲ್ಲ ಮತ್ತು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ತೀರ್ಪಿನಿಂದಾಗಿ ೨೦೧೧ರ ಬ್ಯಾಚ್‌ನ ೩೬೨ ಕೆಎಎಸ್ ಅಧಿಕಾರಿಗಳ ಹುದ್ದೆ ಮತ್ತು ಉದ್ಯೋಗ ಅತಂತ್ರಕ್ಕೆ ಸಿಲುಕಿದೆ.


ನವೆಂಬರ್ ೩ ೨೦೧೧ರಂದು ಕರ್ನಾಟಕ ಲೋಕಸೇವಾ ಆಯೋಗವು ೩೬೨ ಗೆಜೆಟೆಡ್ ಪ್ರೊಬೆಷನರಿ (ಏಂS) ಹುದ್ದೆಗಳ ಭರ್ತಿಗೆ ಅಧಿಕೃತ ಅರ್ಜಿ ಆಹ್ವಾನಿಸಿತು. ೨೦೧೪ ಮಾರ್ಚ್ ಜೂನ್‌ನಲ್ಲಿ ಡಾ. ಎಚ್.ಪಿ.ಎಸ್. ಮೈತ್ರಿಯಾ ಅವರಿಂದ ನೇಮಕಾತಿಯಲ್ಲಿ ಕೋಟಿ ಕೋಟಿ ರೂಪಾಯಿ ಲಂಚ ಮತ್ತು ಅವ್ಯವಹಾರ ನಡೆದಿದೆ ಎಂದು ದೂರು ನೀಡಲಾಗಿತ್ತು. ೨೦೧೪ರ ಜೂನ್ ೨೭ರಂದು ಸರ್ಕಾರದಿಂದ ಸಿಐಡಿ (ಅIಆ) ತನಿಖೆಗೆ ಆದೇಶ ನೀಡಲಾಯಿತು. ೨೦೧೪ ಆಗಸ್ಟ್ ೮ರಂದು ಸಿಐಡಿ ವರದಿ ಆಧಾರದ ಮೇಲೆ ಕಲುಷಿತಗೊಂಡಿದ್ದ ಇಡೀ ೩೬೨ ಹುದ್ದೆಗಳ ಆಯ್ಕೆ ಪಟ್ಟಿಯನ್ನು ಹಿಂಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿತು.


೨೦೧೬ರಲ್ಲಿ ಕೆಎಟಿ (ಏಂಖಿ) ನೇಮಕಾತಿಗೆ ಆದೇಶಿಸಲಾಗಿತ್ತು, ಅದರೂ ೨೦೧೭ ಹಾಗೂ ೨೦೧೮ರ ಜುಲೈ ೧೩ರಂದು ಹೈಕೋರ್ಟ್ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದಲ್ಲಾದ ಅಕ್ರಮವನ್ನು ಎತ್ತಿಹಿಡಿದು ೩೬೨ ಹುದ್ದೆಗಳ ನೇಮಕಾತಿಯನ್ನು ರದ್ದುಗೊಳಿಸಿ ತೀರ್ಪು ನೀಡಿತು. ಹೈಕೋರ್ಟ್ ಆದೇಶವನ್ನು ಬದಿಗೊತ್ತಿ, ೩೬೨ ಏಂS ಅಭ್ಯರ್ಥಿಗಳ ಆಯ್ಕೆಯನ್ನು ಬಲವಂತವಾಗಿ ಸಕ್ರಮಗೊಳಿಸಲು ‘ನೇಮಕಾತಿ ಊರ್ಜಿತಗೊಳಿಸುವಿಕೆ ಕಾಯ್ದೆ-೨೦೨೨’ ಅನ್ನು ಸರ್ಕಾರ ಜಾರಿಗೆ ತಂದಿತು. ಇದೀಗ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಪೀಠವು ಸರ್ಕಾರದ ೨೦೨೨ರ ಕಾಯ್ದೆಯನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿ, ದಶಕದ ಸುದೀರ್ಘ ಕಾನೂನು ಸಮರಕ್ಕೆ ಮುಕ್ತಾಯ ಹಾಡಿದೆ.


೨೦೧೧ರ ಬ್ಯಾಚ್‌ನ ಈ ಅಧಿಕಾರಿಗಳು ಈಗಾಗಲೇ ಹಲವು ಪ್ರಮುಖ ಇಲಾಖೆಗಳಲ್ಲಿ ತಹಸೀಲ್ದಾರ್, ಅಸಿಸ್ಟೆಂಟ್ ಕಮಿಷನರ್, ವಾಣಿಜ್ಯ ತೆರಿಗೆ ಅಧಿಕಾರಿ ಸೇರಿದಂತೆ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ ಈ ಅಧಿಕಾರಿಗಳು ಸೇವೆಯಿಂದ ವಜಾಗೊಳ್ಳುವ ಭೀತಿಗೆ ಸಿಲುಕಿದ್ದಾರೆ.