Home ಜಿಲ್ಲೆ ಕಲಬುರಗಿ ಸುಭಾಷ ಬಣಗಾರ, ಪೂರ್ವಿ ಸಂಧಿ ಅವರಿಗೆ ಸನ್ಮಾನ

ಸುಭಾಷ ಬಣಗಾರ, ಪೂರ್ವಿ ಸಂಧಿ ಅವರಿಗೆ ಸನ್ಮಾನ

ಬೆಂಗಳೂರು,ಮೇ.10-ಬೆಂಗಳೂರಿನಲ್ಲಿ ನೆಲೆಸಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರುಕ್ಮಾಪುರ ಗ್ರಾಮ ನಿವಾಸಿಗಳ ಸಭೆಯು ಇಲ್ಲಿನ ಗಾಂಧಿನಗರದ ಶ್ರೀ ಸತ್ಯನಾರಾಯಣ ದೇವಸ್ಥಾನದ ಆವರಣದ ಹಾಲ್‍ನಲ್ಲಿ ಶನಿವಾರ ಬೆಳಿಗ್ಗೆ ನಡೆಯಿತು.
ರುಕ್ಮಾಪುರ ಗ್ರಾಮದ ಹಿರಿಯರೂ ಆದ ಬೆಂಗಳೂರು ರುಕ್ಮಾಪುರ ನಿವಾಸಿಗಳ ಸಂಘದ ಕಾರ್ಯಾಧ್ಯಕ್ಷರಾದ ನಿವೃತ್ತ ಎಸ್‍ಪಿ ಚಂದ್ರಕಾಂತ ಭಂಡಾರೆ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮದ ಜನರ ಆರೋಗ್ಯಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಬೇಕು, ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಕೊಟ್ಟೂರು ಬಸವೇಶ್ವರ ದೇವಸ್ಥಾನದವರೆಗೆ ರಸ್ತೆ ಅಭಿವೃದ್ಧಿ ಮಾಡಬೇಕು, ಗ್ರಾಮದ ಹೆಸರು ಖಾನಾಪುರ ಎಸ್.ಎಚ್.ದಿಂದ ರುಕ್ಮಾಪುರ ಎಂದು ಬದಲಾಯಿಸುವುದು, ಗ್ರಾಮಕ್ಕೆ ಪ್ರವೇಶಿಸುವ ಸ್ಥಳದಲ್ಲಿ ಬೋರ್ಡ್ ಹಾಕಿಸುವುದು, ಪ್ರಿ ಮ್ಯಾಟ್ರಿಕ್ ಬಿಸಿಎಂ ಹಾಸ್ಟೆಲ್ ಸ್ಥಾಪನೆ ಮಾಡುವುದು, ಶತಮಾನೋತ್ಸವ ಕಂಡಿರುವ ಸರಕಾರಿ ಶಾಲೆಗೆ ಕಾಂಪೌಂಡ್ ನಿರ್ಮಾಣ, ಹತ್ತನೆ ತರಗತಿವರೆಗೆ ಶಾಲೆಯನ್ನು ಮೇಲ್ದರ್ಜೆಗೆ ಹೆಚ್ಚಿಸುವುದು, ಗ್ರಾಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಆರಂಭಿಸುವುದು, ರಸ್ತೆಗಳ ಅಭಿವೃದ್ಧಿ, ಚರಂಡಿ ನಿರ್ಮಾಣ, ಗ್ರಾಮದ ಐತಿಹಾಸಿಕ ಸ್ಥಳ ನ್ಯೂಬೇರಿ ಸಮಾಧಿ ಅಭಿವೃದ್ಧಿಯ ಬಗ್ಗೆ ಸಂಬಂಧಿಸಿದ ಸಚಿವರು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲು ನಿರ್ಧರಿಸಲಾಯಿತು.
ಅಲ್ಲದೆ ಗ್ರಾಮದಲ್ಲಿರುವ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳನ್ನು ಒಂದಡೆ ಸೇರಿಸಿ ಅವರಿಗಾಗಿ ಓದುವ ಹವ್ಯಾಸ ಹಾಗೂ ಸಾಮಾನ್ಯ ಜ್ಞಾನ ಹೆಚ್ಚಿಸಲು, ವ್ಯಕ್ತಿಕತ್ವ ವಿಕಸನಕ್ಕಾಗಿ ನುರಿತ ಅಧ್ಯಾಪಕರು, ಪ್ರೇರಕರಿಂದ ಶಿಬಿರವನ್ನು ಗ್ರಾಮದಲ್ಲಿ ನಡಸುವುದು, ಗ್ರಾಮದ ಹಿರಿಯ ಪತ್ರಕರ್ತ ಸುಭಾಷ ಬಣಗಾರ ಅವರು ದೇಶದಲ್ಲಿಯೇ ಮೊದಲ ಬಾರಿಗೆ ಆರಂಭಿಸಿದ ಬಯಲು ಗ್ರಂಥಾಲಯವನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಆರಂಭಿಸಿ ಪತ್ರಿಕೆ ಹಾಗೂ ಮ್ಯಾಗ್‍ಝೀನ್‍ಗಳ ಓದಲು ಇದಕ್ಕಾಗಿ ಒಂದು ತರಗತಿ ಮೀಸಲಿಡಲು ಸರಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಯಿತು. ಇದು ಅಲ್ಲದೆ ಬೆಂಗಳೂರಿನಲ್ಲಿ ರುಕ್ಮಾಪುರ ಗ್ರಾಮ ನಿವಾಸಿಗಳ ಸಂಘದಿಂದ ಸೂಕ್ತ ಸ್ಥಳದಲ್ಲಿ ಬಯಲು ಗ್ರಂಥಾಲಯ ಆರಂಭಿಸುವುದು, ಗ್ರಾಮದ ಇತಿಹಾಸ ಹಾಗೂ ಸಾಧಕರ ಕುರಿತು ಮಾದರಿಯ ಕೃತಿ ಹೊರ ತರುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿ, ನಿರ್ಧರಿಸಲಾಯಿತು.
ಗ್ರಾಮದ ಸವಾ9ಂಗೀಣ ಅಭಿವೃದ್ಧಿಗಾಗಿ ಈ ಸಂಘದಿಂದ ಪ್ರಯತ್ನಿಸಬೇಕು ಎಂದು ತೀರ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ, ಬಯಲು ಗ್ರಂಥಾಲಯದ ರೂವಾರಿ ಸುಭಾಷ್ ಬಣಗಾರ ಹಾಗೂ ಐಸಿಎಸ್ ಇ 10ನೇ ತರಗತಿಯಲ್ಲಿ ಶೇ. 98.2 ಅಂಕ ಪಡೆದು ಉತ್ತೀರ್ಣರಾದ ಪೂರ್ವಿ ಸಂಧಿ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ ಅಶೋಕ ಬಣಗಾರ, ನಿವೃತ್ತ ಪ್ರಾಧ್ಯಾಪಕ ಉಮಾಕಾಂತ ಮಿಣಜಿಗಿ, ನಿವೃತ್ತ ಪ್ರಾಂಶುಪಾಲ ರವಿಕುಮಾರ ಮಿಣಜಗಿ, ಸುಭಾಷ ಕವಿಶೆಟ್ಟಿ, ಶಿವಕುಮಾರ ಸಂಧಿ, ಸವಿತಾ ಸಂಧಿ, ನಿರಂಜನ, ಪ್ರಶಾಂತ, ಸುನಿಲ್‍ಕುಮಾರ ಸೇರಿದಂತೆ ಮತ್ತಿತರರು ಇದ್ದರು.