ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ತರಬೇತಿ ಕಾರ್ಯಕ್ರಮ

ಕೋಲಾರ,ಜ.೨೨-ಅರೆಕಾಲಿಕ ಕಾನೂನು ಸ್ವಯಂ ಸೇವಕರಿಂದ ಕಾನೂನು ಅರಿವು-ನೆರವನ್ನು ನೀಡಲಾಗುತ್ತಿದೆ. ಸಮಾಜದಲ್ಲಿ ಬದಲಾವಣೆ ತರುವ ಕೆಲಸ ಅರೆಕಾಲಿಕ ಕಾನೂನು ಸ್ವಯಂ ಸೇವಕರದ್ದಾಗಿದೆ. ಪ್ರತಿ ಹಳ್ಳಿಗಳಿಗೆ ಹೋಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸ ಮಾಡಲು ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಮತ್ತು ಅವರಿಗೆ ಕಾನೂನಿನ ಕಾರ್ಯವೈಖರಿ ಬಗ್ಗೆ ತರಬೇತಿ ನೀಡಲಾಗುತ್ತದೆ. ಅರೆಕಾಲಿಕ ಕಾನೂನು ಸ್ವಯಂ ಸೇವಕರ ಸಂಪೂರ್ಣ ಕೆಲಸದಿಂದ ಜನರೆಲ್ಲಾ ಶಾಂತಿಯುತವಾಗಿ ಮತ್ತು ಸೌಹಾರ್ದತೆಯಿಂದ ಬದುಕಲು ಸಹಕಾರಿಯಾಗುತ್ತದೆ ಎಂದು ೧ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಜಯಶ್ರೀ ಅಭಿಪ್ರಾಯ ಪಟ್ಟರು.


ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೋಲಾರ, ವಕೀಲರ ಸಂಘ ಕೋಲಾರ ಹಾಗೂ ಔಟ್ಕಾಡ್ ಇಂಡಿಯಾ, ಲೀಗಲ್-ಎಡ್ ಫೌಂಡೇಶನ್ ಬೆಂಗಳೂರು ಇವರ ಸಹಯೋಗದೊಂದಿಗೆ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಪೋಕ್ಸಿ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರಸಾದ್ ಕೆ.ಬಿ ಮಾತನಾಡಿ, ಸ್ವಾಮಿವಿವೇಕಾನಂದರ ಮಾತುಗಳನ್ನು ನೆನಪಿಸುತ್ತಾ, ಜೀವನದಲ್ಲಿ ಯಾವಾಗಲೂ ಹಿಂದೆ ತಿರುಗಿ ನೋಡದೆ ಮುಂದೆ ನೋಡುತ್ತಾ ಬೆಳವಣಿಗೆಯತ್ತಾ ನಡೆಯಬೇಕು. ೧೯೯೫ ರಲ್ಲಿ ಕಾನೂನು ಸೇವೆಗಳ ಕಾಯಿದೆ ಜಾರಿಗೆ ಬಂದಿದೆ ಇದಕ್ಕೆ ಸರ್ವೊಚ್ಚ ನ್ಯಾಯಾಲಯದ ತೀರ್ಪುಗಳು ಕಾರಣಿಭೂತವಾಗಿವೆ ಎಂದು ಹೇಳಿದರು.


ಉಚಿತ ವಕೀಲರನ್ನು ನೇಮಿಸುವುದು, ಉಚಿತ ಕಾನೂನು ಸಲಹಾ ಕೇಂದ್ರಗಳು, ಉಚಿತ ಕಾನೂನು ಸಲಹಾ ಸಮಿತಿಗಳ ಮೂಲಕ ನ್ಯಾಯ ಒದಗಿಸಲಾಗುತ್ತದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಮುಂದಿದ್ದಾರೆ ಎಂಬ ವಿಚಾರ ಸಂತೋಷದಾಯಕವಾಗಿದೆ ಎಂದರು.


ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಟೇಶ ಆರ್, ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ ಎಲ್ ಮಾತನಾಡಿ, ಸರ್ಕಾರದ ಕೆಲಸ ದೇವರ ಕೆಲಸ, ಅರೆಕಾಲಿಕ ಕಾನೂನು ಸ್ವಯಂ ಸೇವಕರ ಮೂಲಕ ಜನಸಾಮಾನ್ಯರಿಗೆ ಕಾನೂನಿನ ಅರಿವು ನೀಡಲಾಗುತ್ತಿದೆ ಎಂದ ಅವರು, ಕಾನೂನಿನ ಬೆಳವಣಿಗೆ, ಉದ್ದೇಶದ ಬಗ್ಗೆ ತಿಳಿಸಿದರು.


ವಿಭಾ ನಾಡಿಗ, ಶಮಾ ಡಿ, ನಿಹಾರಿಕ ಔಟ್ಲಾಡ್ ಇಂಡಿಯಾ, ಲೀಗಲ್-ಎಡ್ ಫೌಂಡೇಶನ್‌ನ ತರಬೇತುದಾರರಾಗಿದ್ದರು. ಆಟ, ಚಟುವಟಿಕೆಗಳ ಮೂಲಕ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಸಂವಿಧಾನದ ಪೀಠಿಕೆ, ಮೂಲಭೂತ ಹಕ್ಕುಗಳು, ಸಂವಿಧಾನಾತ್ಮಕ ಕಾನೂನಿನಲ್ಲಿ ಪಿಎಲ್‌ವಿಗಳ ಪಾತ್ರ ಏನು ಎಂಬುದನ್ನು ತಿಳಿಸಿದರು.


ಪ್ರಧಾನ ಕಾನೂನು ನೆರವು ಅಭಿರಕ್ಷಕ ಎಸ್ ಮುನಿಸ್ವಾಮಿಗೌಡ, ಎಸ್.ಸಿ. ವೆಂಕಟಾಚಲಪತಿ, ಉಪಪ್ರಧಾನ ಕಾನೂನು ನೆರವು ಅಭಿರಕ್ಷಕ ಸತೀಶ್ ಎಸ್, ಸಹಾಯಕ ಕಾನೂನು ನೆರವು ಅಭಿರಕ್ಷಕರಾದ ಕಲಾವತಿ ಇ, ಸುಜಾತ ವಿ, ಅಶ್ವಿನಿ ಎನ್, ೮೫ ಜನ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗದವರು ಸೇರಿ ೧೦೦ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.