ಸಂಚಾರ ನಿಯಮ ಉಲ್ಲಂಘನೆ: ೫.೯೮ ಕೋಟಿ ಸಂಗ್ರಹ

ಬೆಂಗಳೂರು,ನ.೨೮-ಸಂಚಾರ ನಿಯಮಗಳ ಉಲ್ಲಂಘನೆಗೆ ಶೇ.೫೦ರಷ್ಟು ರಿಯಾಯಿತಿ ದಂಡ ಪಾವತಿಸಲು ಅವಕಾಶ ನೀಡಿದ ಒಂದೇ ವಾರದಲ್ಲಿ ೫.೯೮ ಕೋಟಿ ರೂ. ದಂಡ ಸಂಗ್ರಹವಾಗಿದೆ.


ಸಾರಿಗೆ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸರ್ಕಾರ ಅನುಮೋದಿಸಿ, ನ.೨೧ರಿಂದ ಡಿ.೧೨ರವರೆಗೂ ದಂಡದ ಕೇವಲ ಶೇ.೫೦ರಷ್ಟನ್ನು ಪಾವತಿಸಲು ರಿಯಾಯಿತಿ ಆದೇಶ ಹೊರಡಿಸಿತ್ತು.


ಅದರಂತೆ ನ.೨೧ರಿಂದ ೨೭ರವರೆಗೆ ಕೇವಲ ಒಂದೇ ವಾರದ ಅವಧಿಯಲ್ಲಿ ೫,೯೮,೨೮,೮೦೦ ರೂ. ದಂಡ ಪಾವತಿಯಾಗಿದ್ದು, ೨,೨೫,೫೧೧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಇತ್ಯರ್ಥಗೊಂಡಿವೆ.


ಈಗಾಗಲೇ ಜನರಿಂದ ಉತ್ತಮ ಸ್ಪಂದನೆ ದೊರಕಿದ್ದು, ಡಿ.೧೨ರವರೆಗೆ ಶೇ ೫೦ ದಂಡ ಪಾವತಿಗೆ ಅವಕಾಶವಿದೆ.
ಆನ್‌ಲೈನ್ ನಲ್ಲಿ ಕೆಎಸ್‌ಪಿ, ಬಿಟಿಪಿ, ಬೆಂಗಳೂರು ಒನ್, ಕರ್ನಾಟಕ ಒನ್, ಟ್ರಾಫಿಕ್ ಪೊಲೀಸರ ಬಳಿಯೂ ತಮ್ಮ ದಂಡದ ರಿಯಾಯಿತಿ ಮೊತ್ತವನ್ನು ಜನ ಪಾವತಿಸಬಹುದು. ಡಿ.೧೨ರ ಬಳಿಕ ಪೂರ್ಣ ಪ್ರಮಾಣದಲ್ಲಿ ದಂಡ ಪಾವತಿಸಬೇಕಾಗುತ್ತದೆ.


ಇದಕ್ಕೂ ಮುನ್ನ ಆ.೨೩ರಿಂದ ಸೆ.೧೨ರವರೆಗೂ ದಂಡದ ಶೇ.೫೦ರಷ್ಟನ್ನು ಪಾವತಿಸಲು ಅವಕಾಶ ನೀಡಿತ್ತು. ಈ ವೇಳೆ ಬೆಂಗಳೂರು ಒಂದರಲ್ಲೇ ೫೫ ಕೋಟಿ ರೂ.ಗೂ ಹೆಚ್ಚು ದಂಡ ಸಂಗ್ರಹವಾಗಿತ್ತು.