Home ಜಿಲ್ಲೆ ಬೆಂಗಳೂರು ವಿಜಯಪುರದ ಕೆನರಾ ಬ್ಯಾಂಕ್ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ

ವಿಜಯಪುರದ ಕೆನರಾ ಬ್ಯಾಂಕ್ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ

ವಿಜಯಪುರ, ಅ.೩೧- ಪಟ್ಟಣದ ಹೃದಯ ಭಾಗದಲ್ಲಿರುವ ಕೆನರಾ ಬ್ಯಾಂಕ್ ಮುಂಭಾಗದ ರಸ್ತೆ ಹಾಗೂ ರೇಷ್ಮೆಗೂಡು ಮಾರುಕಟ್ಟೆ ರಸ್ತೆಯನ್ನು ದ್ವಿಚಕ್ರ ವಾಹನಗಳ ಅಕ್ರಮ ಪಾರ್ಕಿಂಗ್ ಸ್ಥಳವನ್ನಾಗಿ ಬಳಸಿಕೊಳ್ಳುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ.


ಬ್ಯಾಂಕ್ ಕೆಲಸಕ್ಕೆ ಹಾಗೂ ಮಾರುಕಟ್ಟೆಗೆ ಬರುವ ಜನರು ತಮ್ಮ ದ್ವಿಚಕ್ರ ವಾಹನಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದಾರೆ. ಕೆಲವರು ಏರ್ ಪೋರ್ಟ್ ಗೆ, ಕಂಪನಿಗಳಿಗೆ ಕೆಲಸಗಳಿಗೆ ಹೋಗುವವರೂ ಕೂಡಾ ತಮ್ಮ ದ್ವಿಚಕ್ರ ವಾಹನಗಳನ್ನೂ ಇಲ್ಲೆ ಬಿಟ್ಟು ಹೋಗುತ್ತಾರೆ. ಇದರಿಂದ ವಾಹನ ಸಂಚಾರಕ್ಕೆ ಕೇವಲ ಕಿರಿದಾದ ಜಾಗ ಮಾತ್ರ ಉಳಿಯುತ್ತಿದೆ.


ಈ ರಸ್ತೆಯ ಮೂಲಕ ಸತ್ಯಮ್ಮ ಕಾಲೋನಿಗೆ ತೆರಳುವ ನೂರಾರು ನಾಗರಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವೃದ್ಧರು ಪ್ರತಿನಿತ್ಯ ಪರದಾಡುವಂತಾಗಿದೆ. ಅತ್ಯಂತ ಗಂಭೀರ ವಿಷಯವೆಂದರೆ, ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಕೂಡಾ ಈ ರಸ್ತೆಯ ಮೂಲಕ ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸಾಗಿಸಲು ವಿಳಂಬವಾದರೆ ಪ್ರಾಣಹಾನಿಯೂ ಸಂಭವಿಸಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.


ಈ ಕುರಿತು ಸಾರ್ವಜನಿಕರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ. ಪೊಲೀಸ್ ಇಲಾಖೆ ಈ ರಸ್ತೆಯಲ್ಲಿ ನೋ ಪಾರ್ಕಿಂಗ್ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಅಕ್ರಮ ಪಾರ್ಕಿಂಗ್ ಮಾಡುವ ವಾಹನಗಳ ವಿರುದ್ಧ ದಂಡ ವಿಧಿಸಬೇಕು. ಜೊತೆಗೆ ಪುರಸಭೆಯು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.


ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಸತ್ಯಮ್ಮ ಕಾಲೋನಿ ನಿವಾಸಿಗಳು ಆಗ್ರಹಿಸಿದ್ದಾರೆ.