Home ಜಿಲ್ಲೆ ಹತ್ತು ವರ್ಷ ಕಳೆದರೂ ಸಂಚಾರಿ ಪೊಲೀಸ್ ಠಾಣೆಗೆ ಸಂಚಾರ ಶಿಸ್ತು ಸವಾಲು; ಸಾರ್ವಜನಿಕರ ಅಸಮಾಧಾನ

ಹತ್ತು ವರ್ಷ ಕಳೆದರೂ ಸಂಚಾರಿ ಪೊಲೀಸ್ ಠಾಣೆಗೆ ಸಂಚಾರ ಶಿಸ್ತು ಸವಾಲು; ಸಾರ್ವಜನಿಕರ ಅಸಮಾಧಾನ

ಸಂಜೆವಾಣಿ ವಾರ್ತೆ,
ಯಾದಗಿರಿ:ಆ.೧:ಜಿಲ್ಲೆಯ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ಮಹತ್ವಾಕಾಂಕ್ಷೆಯೊAದಿಗೆ ೨೦೧೬ರ ಜುಲೈ ೩೧ರಂದು ಕಾರ್ಯಾರಂಭ ಮಾಡಿದ ಯಾದಗಿರಿ ಸಂಚಾರಿ ಪೊಲೀಸ್ ಠಾಣೆಗೆ ದಶಕ ಸಮೀಪಿಸುತ್ತಿದ್ದರೂ, ನಗರದಲ್ಲಿ ಸಂಚಾರ ನಿಯಂತ್ರಣ ಮಾತ್ರ ಇನ್ನೂ ಸವಾಲಾಗಿಯೇ ಉಳಿದಿದೆ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವುದು, ಚಾಲನಾ ಪರವಾನಗಿ, ವಿಮೆ ಮತ್ತು ಪರ್ಮಿಟ್ ಇಲ್ಲದೆ ವಾಹನಗಳನ್ನು ಓಡಿಸುವ ಪ್ರಕರಣಗಳು ಕಂಡುಬರುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ. ಕೆಲ ಆಟೋ ಚಾಲಕರು ಸಹ ಸಂಚಾರ ನಿಯಮಗಳನ್ನು ಪಾಲಿಸದೆ ವಾಹನ ಚಲಾಯಿಸುತ್ತಿರುವುದರಿಂದ ವಾಹನ ದಟ್ಟಣೆ ಹೆಚ್ಚುವುದರ ಜೊತೆಗೆ ಅಪಘಾತಗಳ ಅಪಾಯವೂ ಹೆಚ್ಚುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ, ನಿರಂತರ ತಪಾಸಣೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.


“ಯಾದಗಿರಿ ಜಿಲ್ಲಾ ಕೇಂದ್ರವಾಗಿ ೧೬ ವರ್ಷಗಳು ಕಳೆದಿದ್ದರೂ ಸಾರಿಗೆ ಇಲಾಖೆ ಹಾಗೂ ಸಂಚಾರಿ ಪೊಲೀಸ್ ಇಲಾಖೆಯಿಂದ ವಾಹನ ಸವಾರರು ಮತ್ತು ಆಟೋ ಚಾಲಕರಿಗೆ ಸಮರ್ಪಕ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇದರ ಪರಿಣಾಮ ಕೆಲವರು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ನಗರದ ಪ್ರಮುಖ ರಸ್ತೆಗಳು ಹಾಗೂ ಚೌಕಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಹೆಲ್ಮೆಟ್, ಲೈಸೆನ್ಸ್, ಇನ್ಸೂರೆನ್ಸ್, ಪರ್ಮಿಟ್ ಸೇರಿದಂತೆ ಅಗತ್ಯ ದಾಖಲೆಗಳ ಮಹತ್ವದ ಬಗ್ಗೆ ನಿರಂತರ ಜಾಗೃತಿ ಮೂಡಿಸಬೇಕು. ಆಟೋ ಚಾಲಕರಿಗೆ ಸಂಚಾರ ನಿಯಮಗಳು ಹಾಗೂ ಸಿಗ್ನಲ್‌ಗಳ ಕುರಿತು ವಿಶೇಷ ತರಬೇತಿ ನೀಡಿದರೆ ನಿಯಮ ಪಾಲನೆ ಹೆಚ್ಚುತ್ತದೆ. ಎಲ್ಲಾ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿಕೊAಡು ನಿಯಮಾನುಸಾರ ವಾಹನ ಚಲಾಯಿಸಿದರೆ ಅಪಘಾತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.”

  • ಉಮೇಶ್ ಕೆ. ಮುದ್ನಾಳ್, ಸಾಮಾಜಿಕ ಹೋರಾಟಗಾರ