
ಗದಗ, ಜ30: ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನದ ಪಾಕ್ಷಿಕ ಆಚರಣೆ ಕುರಿತು ಜಿಲ್ಲಾ ಸಮನ್ವಯ ಸಮಿತಿ ಸಭೆಯು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಮಾತನಾಡಿ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನವು ಜನೆವರಿ 30 ರಿಂದ ಫೆಬ್ರುವರಿ 13 ರವರೆಗೆ ಜರುಗಲಿದ್ದು ಅಭಿಯಾನವನ್ನು ವಿವಿಧ ಇಲಾಖೆಗಳ ಸಮನ್ವಯತೆಯೊಂದಿಗೆ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಡಾ.ರಾಜೇಂದ್ರ ಬಸರಿಗಿಡದ ಅವರು ಮಾತನಾಡಿ ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನ ಕಾರ್ಯಕ್ರಮದಡಿ ಜಿಲ್ಲಾದ್ಯಂತ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನವನ್ನು ಜನೆವರಿ 30 ರಿಂದ ಫೆಬ್ರುವರಿ 13 ರವರೆಗೆ ಹಮ್ಮಿಕೊಳ್ಳಲಾಗುತ್ತಿದೆ. ಕುಷ್ಟರೋಗವು ಮೈಕ್ರೋ ಬ್ಯಾಕ್ಟಿರಿಯಂ ಲೆಪ್ರೆ ಎಂಬ ಸೂಕ್ಷ್ಮಾಣುವಿನಿಂದ ಬರುವ ಕಾಯಿಲೆಯಾಗಿದೆ. ಕುಷ್ಟರೋಗವನ್ನು ಎಂ.ಡಿ.ಟಿ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಎಂ.ಡಿ.ಟಿ ಚಿಕಿತ್ಸೆಯು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕುಷ್ಟರೋಗ ಆಸ್ಪತ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸ್ಪರ್ಶ ಕುಷ್ಟರೋಗ ಜಾಗೃತಿ ಅಭಿಯಾನ ಹಾಗೂ ಕುಷ್ಟರೋಗ ನಿರ್ಮೂಲನೆ ಕುರಿತು ಕರಪತ್ರ ಹಾಗೂ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಥೋಡ, ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಮೀನಾಕ್ಷಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ಕೆ.ಭಜಂತ್ರಿ, ಎಪಿಡೋಮಾಲಾಜಿಸ್ಟ್ ಪ್ರವೀಣ ನಿಡಗುಂದಿ, ಡಾ.ಎಚ್.ಎಲ್.ಗಿರಡ್ಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ ಸೇರಿದಂತೆ ಇತರರು ಹಾಜರಿದ್ದರು.























