
ಬೀದರ್: ಜೂ.28:ನಾಳೆ ಭಾನುವಾರ ಸಂಜೆ 4 ಗಂಟೆಗೆ ನಗರದ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ವತಿಯಿಂದ ಕಾರ್ಗಿಲ್ ಸೆ ಸಿಂಧೂರ ತಕ್ ಕಾರ್ಯಕ್ರಮದಡಿ ಕಾರ್ಗಿಲ್ ಯುದ್ದದಲ್ಲಿ ವೀರ ಮರಣವನ್ನಪ್ಪಿದ ಕ್ಯಾಪ್ಟನ್ ವಿಜಯಂತ ಥಾಪರ್ ಮತ್ತು ಇತರೆ ಹುತಾತ್ಮ ಯೋಧರ ಅಮರ ಕಥೆ ಕುರಿತ ಕಾರ್ಯಕ್ರಮ ಹಾಗೂ ಕಾರ್ಗಿಲ್ ಯುದ್ದದಲ್ಲಿ ಬೀದರ್ ಜಿಲ್ಲೆಯಿಂದ ಹುತಾತ್ಮರಾದ ಯೋಧರ ಕುಟುಂಬಸ್ಥರಿಗೆ ಹಾಗೂ ಹೋರಾಡಿ ಬದುಕುಳಿದ ಜಿಲ್ಲೆಯ ಯೋಧರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಲಲಾಗಿದೆ ಎಂದು ಸಮಿತಿಯ ಕರ್ನಾಟಕ ಪ್ರಾಂತಿಯ ಕಾರ್ಯಾಧ್ಯಕ್ಷ ಡಾ.ಶಿವಕುಮಾರ ಉಪ್ಪೆ ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು.
ವಿಶ್ವ ಕಲ್ಯಾಣಕ್ಕಾಗಿ ಹಾಗೂ ಮನುಕುಲದ ಶ್ರೇಯೋಭಿವೃದ್ಧಿಗಾಗಿ ಭಾರತದ ಸಂಸ್ಕøತಿಯ ಕೊಡುಗೆ ಅಭೂತಪೂರ್ವವಾದುದ್ದಾಗಿದೆ. ಸತ್ಯದ ಮೇಲೆ ನಿರ್ಭರವಾಗಿ ಸ್ಥಾಪಿತವಾದ ಭಾರತೀಯ ಇತಿಹಾಸ ಸಂಕಲನ ಸಮಿತಿಯು ಕಳೆದ ಐದು ದಶಕಗಳಿಂದ ಭಾರತದ ನೈಜ ಇತಿಹಾಸವನ್ನು ತಳಮಟ್ಟದಿಂದ ಪುನರೂಪಿಸಿ, ಸಂಶೋಧಿಸಿ ಭಾರತೀಯರಿಗೆ ಪರಿಚಯಿಸುವ ಕಾರ್ಯವನ್ನು ಇಡೀ ದೇಶದಾದ್ಯಂತ ಅರ್ಪಣಾ ಭಾವದಿಂದ ಕಂಕಣಬದ್ಧತೆಯಿಂದ ಮಾಡುತ್ತಿದೆ. ಎಂದರು.
ಈ ಸಮಿತಿಯು ಭಾರತದ ನೈಜ ಇತಿಹಾಸದ ಕುರಿತು ಜನಜಾಗೃತಿ ಹಾಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಚಾರ ಸಂಕಿರಣಗಳು, ತರಬೇತಿ ಶಿಬಿರಗಳು, ಕಾರ್ಯಾಗಾರಗಳು, ಕಮ್ಮಟಗಳು, ವಿಶೇಷ ಉಪನ್ಯಾಸಗಳಂತಹ ಕಾರ್ಯಕ್ರಮಗಳನ್ನು ನೈಜ ಇತಿಹಾಸ ತಜ್ಞರಿಂದ ನಿರಂತರ ಹಮ್ಮಿಕೊಂಡು ಬರುತ್ತಿದೆ. ರಾಷ್ಟ್ರಕ್ಕಾಗಿ ತ್ಯಾಗ, ಬಲಿದಾನಗೈದ ರಕ್ಷಣಾ ಪಡೆಗಳ ಶೌರ್ಯ ಸಾಹಸಗಳ ವೀರಗಾಥೆ, ಯಶೋಗಾಥೆಗಳನ್ನು ಜನಮಾನಸದಲ್ಲಿ ಹಸಿರಾಗಿಸಲು ಈ ರಾμÁ್ಟ್ರಭಿಮಾನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
1999ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ 22ನೇ ವಯಸ್ಸಿನಲ್ಲಿಯೇ ಯುದ್ಧ ಭೂಮಿಯಲ್ಲಿ ಅಪ್ರತಿಮವಾಗಿ ಹೋರಾಡಿ ಹುತಾತ್ಮರಾದ ಕ್ಯಾಪ್ಟನ್ ವಿಜಯಂತ್ ಥಾಪರ್ ಅವರ ಮಾತಾ ಪಿತರಾದ ತ್ರಿಪ್ತಾ ಥಾಪರ್ ಹಾಗೂ ಕರ್ನಲ್ ಬಿ.ಎನ್. ಥಾಪರ್ ಅವರು ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಜೂನ್ 29 ವೀರಚಕ್ರ ಪುರಸ್ಕೃತ ಕ್ಯಾಪ್ಟನ್ ವಿಜಯಂತ್ ಥಾಪರ್ ಹುತಾತ್ಮರಾದ ದಿವಸ ಕೂಡಾ ಆಗಿದೆ. ಅಲ್ಲದೇ ಇದೇ ಕಾರ್ಯಕ್ರಮದಲ್ಲಿ ನಮ್ಮ ಧರ್ಮ, ಸಂಸ್ಕೃತಿ, ಇತಿಹಾಸ, ಶಿಕ್ಷಣ, ಅಧ್ಯಾತ್ಮದ ಬಗ್ಗೆ ಅಭಿಮಾನ ಮೂಡಿಸುವ, ದೇಶ ಮತ್ತು ಸಂಸ್ಕೃತಿಗಾಗಿ ತಮ್ಮ ಜೀವನ ಸಮರ್ಪಿಸಿಕೊಂಡಿರುವ ಖ್ಯಾತ ವಾಗ್ನಿಗಳು ಹಾಗೂ ರಾಷ್ಟ್ರೀಯವಾದಿ ಚಿಂತಕರಾದ ಗೋಪಾಲ್‍ಜೀಯವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದವರು ತಿಳಿಸಿದರು.
ರಾಷ್ಟ್ರ ರಕ್ಷಣೆಗಾಗಿ ಭಯೋತ್ಪಾದರ ದಮನಕ್ಕಾಗಿ ನಡೆದ ಅಪರೇಶನ್ ಸಿಂಧೂರ್ ಕಾರ್ಯಾಚರಣೆಯ ವಿಜಯೋತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ಭಾರತಕ್ಕಾಗಿ ಹೋರಾಡಿದ ಮತ್ತು ಹುತಾತ್ಮರಾದ ವೀರಯೋಧರಿಗೆ ಮತ್ತು ಅವರ ಪರಿವಾರದವರಿಗೆ ಹೃದಯಾಂತರಾಳದಿಂದ ಗೌರವ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ. ಈ ಅರ್ಥಪೂರ್ಣ ಮತ್ತು ಐತಿಹಾಸಿಕ ದೇಶಾಭಿಮಾನದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಡಾ.ಉಪ್ಪೆ ಕೋರಿದರು.
ಸಮಿತಿಯ ಮಹಾ ಪೋಷಕರಾದ ಡಾ.ಬಸವರಾಜ.ಜಿ ಪಾಟೀಲ ಕಾರ್ಯಕ್ರಮದ ವಿವರಣೆ ನೀಡಿ, ಅಯೋಧ್ಯ ವಿಶ್ವ ಹಿಂದು ಪರಿಷತ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಗೋಪಾಲಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಕ್ಯಾಪ್ಟನ್ ವಿಜಯಂತ್ ಥಾಪರ್ ಅವರ ತಂದೆ, ತಾಯಿಗಳಾದ ತ್ರಿಪ್ತಾ ಥಾಪರ್ ಹಾಗೂ ನಿವೃತ್ತ ಕರ್ನಲ್ ವಿ.ಎನ್ ಥಾಪರ್ ಗೌರವ ಅತಿಥಿಗಳಾಗಿ ಭಾಗವಹಿಸುವರು. ಆರ್.ಎಸ್.ಎಸ್ ಕಲಬುರಗಿಯ ವಿಭಾಗೀಯ ಸಂಘಟಕರಾದ ಹಣಮಂತರಾವ ಪಾಟೀಲ, ತಾನು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಮಿತಿಯ ಪೋಷಕರಾದ ಡಾ.ಸರ್ದಾರ ಬಲಬೀರಸಿಂಗ್, ಸಮಿತಿಯ ರಾಷ್ಟ್ರೀಯ ಕಾರ್ಯದರ್ಶಿ ಪ್ರೊ.ಕೊಟ್ರೇಶ, ರಾಜ್ಯ ಕಾರ್ಯದರ್ಶಿ ಕೃಷ್ಣಮೂರ್ತಿ.ಆರ್ ಗೌರವ ಉಪಸ್ಥಿತರಿರುವರು ಎಂದರು.
ಸಮಿತಿಯ ಕರ್ನಾಟಕ ಉತ್ತರ ಪ್ರಾಂತಿಯ ಸಂಚಾಲಕ ವೀರಶೆಟ್ಟಿ ಮೈಲೂರಕರ್ ಅವರು ಕಾರ್ಗಿಲ್ ಯುದ್ದದಲ್ಲಿ ಬೀದರ್ ಜಿಲ್ಲೆಯಿಂದ ವೀರ ಮರಣವನ್ನಪ್ಪಿದ ಯೋಧರ ಪಟ್ಟಿ ವಿವರಿಸಿದರು. ವರವಟ್ಟಿಯ ಗೋವಿಂದ ಸೆಡೊಳೆ, ತಡಪಳ್ಳಿಯ ವೀರಶೆಟ್ಟಿ, ಭಾಡಗಾಂಗವಿಯ ಹಣಮಂತ ಹಾಗೂ ಜ್ಞಾನೇಶ್ವರ, ಮರ್ಜಾಪರ(ಎಮ್)ನ ಪ್ರಕಾಶ, ಧನಂಜಯ ಕುಲಕರ್ಣಿ, ಶಿವಾಜಿ ಬಿರಾದಾರ, ನೌಬಾದ್‍ನ ಅಶೋಕ ಅಪ್ಪೆ ಅವರ ಕುಟುಂಬಸ್ಥರಿಗೆ ಅವ್ಹಾನಿಸಿ ಗೌರವಿಸಲಾಗುತ್ತಿದೆ ಕಾರ್ಗಿಲ್ ಹಾಗೂ ಸಿಂಧೂರ್ ಯುದ್ದದಲ್ಲಿ ಹೋರಾಡಿದ ಶೆಂಬೆಳ್ಳಿಯ ಬಾಬಶೆಟ್ಟಿ ಎಕಲಾರೆ ಸೇರಿದಂತೆ ಇನ್ನು ಅನೇಕರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಮಾಜಿ ಸೈನಿಕ ಸಂಘದ ಮಾಜಿ ಅಧ್ಯಕ್ಷ ಅಶೋಕಕುಮಾರ ಕರಂಜಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಪ್ರಾಂತಿಯ ಸಂಚಾಲಕ ಸಂಜುಕುಮಾರ ತಾಂದಳೆ ಹಾಗೂ ಪತ್ರಕರ್ತ ಸದಾನಂದ ಜೋಷಿ ಪತ್ರಿಕಾಗೋಷ್ಟಿಯಲ್ಲಿದ್ದರು.