ನಾಳೆ ಚನ್ನಕೇಶವಸ್ವಾಮಿ ರಥೋತ್ಸವ – ದ್ರೌಪದಮ್ಮ ಕರಗ ಮಹೋತ್ಸವ

ವಿಜಯಪುರ: ದೇವಾಲಯಗಳ ನಗರಿ, ಐತಿಹಾಸಿಕ ವಿಜಯಪುರ ಪಟ್ಟಣದಲ್ಲಿ ಈ ಬಾರಿ ಹಬ್ಬದ ವಾತಾವರಣ ಮನೆಮಾಡಿದೆ. ಜಿಲ್ಲೆಯಲ್ಲೇ ಅತಿ ಎತ್ತರದ ರಾಜಗೋಪುರ ಹೊಂದಿರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ಹಾಗೂ ೮೭ನೇ ವರ್ಷದ ಶ್ರೀ ಧರ್ಮರಾಯಸ್ವಾಮಿ-ದ್ರೌಪದಮ್ಮ ಹೂವಿನ ಕರಗ ಮಹೋತ್ಸವವು ಮಾರ್ಚ್ ೩ರಂದು ಏಕಕಾಲಕ್ಕೆ ಅದ್ಧೂರಿಯಾಗಿ ನೆರವೇರಲಿವೆ.


ಪೌರಾಣಿಕ ಹಿನ್ನೆಲೆಯುಳ್ಳ ಈ ಕ್ಷೇತ್ರದಲ್ಲಿ ದ್ವಾಪರ ಯುಗದಲ್ಲಿ ಅರ್ಜುನನು ಮರಕತ ಶಿಲೆಯಿಂದ ಶ್ರೀ ಚನ್ನಕೇಶವಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದನು ಎಂಬ ಪ್ರತೀತಿಯಿದೆ. ಈ ವಿಗ್ರಹವು ಎಡಗೈನಲ್ಲಿ ಚಕ್ರ ಹಿಡಿದು, ನಯನ ಮನೋಹರವಾದ ಸೌಮ್ಯ ರೂಪದಲ್ಲಿರುವುದರಿಂದ ಸ್ವಾಮಿಯನ್ನು ’ಸೌಮ್ಯ ಕೇಶವ’ ಎಂದೂ ಕರೆಯಲಾಗುತ್ತದೆ. ಕ್ರಿ.ಶ. ೧೩೨೮ರಲ್ಲಿ ಮಾಗಡಿ ಕೆಂಪೇಗೌಡರ ಸಹೋದರಿ ವಡಿಗೆಮ್ಮ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದರು. ಕೈವಾರದ ಯೋಗಿ ನಾರೇಯಣ ಯತೀಂದ್ರರು ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದು ಈ ಕ್ಷೇತ್ರದ ಮಹಿಮೆಗೆ ಸಾಕ್ಷಿ.


ಪಾಲ್ಗುಣ ಶುದ್ಧ ಅಷ್ಟಮಿಯಿಂದ ಬಹುಳ ಸಪ್ತಮಿಯವರೆಗೆ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ (ಮಾ. ೩) ಅದ್ದೂರಿ ಬ್ರಹ್ಮರಥೋತ್ಸವ ಜರುಗಲಿದೆ. ಈ ಪ್ರಯುಕ್ತ ಫೆಬ್ರವರಿ ೨೪ರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿವೆ.


ಪ್ರಮುಖ ಸೇವೆಗಳು: ಪ್ರತಿದಿನ ಗರುಡ, ಸಿಂಹ, ಹನುಮಂತ, ಶೇಷ ಹಾಗೂ ಅಶ್ವ ವಾಹನೋತ್ಸವಗಳು ನಡೆಯುತ್ತಿವೆ.


ವಿಶೇಷತೆ: ಈ ಬಾರಿ ಗ್ರಹಣದ ಹಿನ್ನೆಲೆಯಲ್ಲಿ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ರಥೋತ್ಸವ ನೆರವೇರಲಿದೆ. ಅನ್ನ ಸಂತರ್ಪಣೆ ಸಮಿತಿಯಿಂದ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ.
ಪಟ್ಟಣದ ವಹ್ನಿಕುಲ ಜನಾಂಗದವರಿಂದ ಆಯೋಜಿಸಲ್ಪಟ್ಟಿರುವ ಶ್ರೀ ಧರ್ಮರಾಯಸ್ವಾಮಿ ಹಾಗೂ ದ್ರೌಪದಮ್ಮ ದೇವಿಯ ೮೭ನೇ ವರ್ಷದ ಹೂವಿನ ಕರಗ ಮಹೋತ್ಸವವು ಮಾ. ೩ರಂದು ರಾತ್ರಿ ೧೧.೩೦ಕ್ಕೆ ಅದ್ದೂರಿಯಾಗಿ ಹೊರಡಲಿದೆ.


ಕಾರ್ಯಕ್ರಮಗಳ ವಿವರ: ಫೆ. ೨೭ರಂದು ಧ್ವಜಾರೋಹಣ, ೨೮ರಂದು ಕಲ್ಯಾಣೋತ್ಸವ ಹಾಗೂ ಮಾ. ೧ರಂದು ಹಸಿಕರಗ ನಡೆಯಲಿದೆ. ಮಾ. ೪ರಂದು ಅಗ್ನಿಕುಂಡ ಪ್ರವೇಶ ಹಾಗೂ ದೀಪಾರತಿ ನಡೆಯಲಿದ್ದು, ಮಾ. ೫ರಂದು ವಿಶೇಷವಾದ ’ಒನಕೆ ಕರಗ’ ನೃತ್ಯದೊಂದಿಗೆ ಮಹೋತ್ಸವ ಸಂಪನ್ನಗೊಳ್ಳಲಿದೆ.


ಜಾತ್ರಾ ಮಹೋತ್ಸವದ ಅಂಗವಾಗಿ ಇಡೀ ಪಟ್ಟಣ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ರಥೋತ್ಸವ ಹಾಗೂ ಕರಗ ಮಹೋತ್ಸವಕ್ಕೆ ಜಿಲ್ಲೆಯಾದ್ಯಂತ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ವಿವಿಧ ಸಮಿತಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ.