ನಾಳೆ ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದ ೯೦ನೇ ವಾರ್ಷಿಕೋತ್ಸವ

ಭಾಲ್ಕಿ:ಜ.೨೧: ಇಲ್ಲಿಯ ಹಿರೇಮಠ ಸಂಸ್ಥಾನದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಗುರುವಾರ ಸಾಯಂಕಾಲ ೪ ಗಂಟೆಗೆ ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದ ೯೦ನೇ ವಾರ್ಷಿಕೋತ್ಸವ ಸಮಾರಂಭ ಜರುಗಲಿದೆ. ಮಹಾಲಿಂಗ ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ.
ಹಿಂದುಳಿದ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುನಿತಾ ಶಿವಾನಂದ ಪಟವಾದಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ತಾಲೂಕು ಅಧಿಕಾರಿ ವಿಜಯಮಾಲಾ ವಗ್ಗೆ ಅಧ್ಯಕ್ಷತೆ ವಹಿಸಲಿದ್ದಾರೆ. ಬಂಡೆಪ್ಪ ಶರಣರು ಬಸವ ಗುರುವಿನ ಪೂಜೆ ನೆರವೇರಿಸಲಿದ್ದಾರೆ.
ಗೌರವ ಸನ್ಮಾನ :
ಇದೇವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಗುತ್ತಿದೆ. ರವಿಕುಮಾರ ಹಣಮಂತರಾವ ಪಾಟೀಲ್, ಶಿವಶರಣಪ್ಪ ಮಾಧವರಾವ ಮಾಳಗೆ, ಕಂಟೆಪ್ಪ ಮಾರುತಿ ಕೊಳಂಟಗೆ, ಬಸಮ್ಮ ಶಂಕರ, ಜಯಶ್ರೀ ಜಗನ್ನಾಥ, ಶಶಿಕಲಾ ಬಸವರಾಜ, ಚನ್ನಬಸವ ಪಾಟೀಲ್, ಸಂತೋಷ ದೇಸಾಯಿ, ರಾಜಕುಮಾರ ಪಾಟೀಲ್, ಪಂಡರಿನಾಥ ಶೇರಿಕಾರ ಸೇರಿದಂತೆ ಹಿರೇಮಠ ಸಂಸ್ಥಾನದ ಹಳೆಯ ವಿದ್ಯಾರ್ಥಿಗಳಾದ ಬಸವಾನಂದ ಗಡ್ಡೆ, ಮಂಜುನಾಥ ಬಂಬುಳಗೆ, ಗೋಪಾಲರೆಡ್ಡಿ ವಿಠಲರೆಡ್ಡಿ, ಸಿದ್ರಾಮ ಕೋರೆ, ಸತೀಶ ಬಿರಾದಾರ್, ಜ್ಯೋತಿ ದತ್ತುರಾವ, ಆಕಾಶ ಬಿರಾದಾರ್ ಮತ್ತು ಶಿವಾಜಿ ಕವಾಳೆ ಅವರನ್ನು ಸನ್ಮಾನಿಸಲಾಗುತ್ತಿದೆ. ಹಾನಗಲ್ ಕುಮಾರೇಶ್ವರ ವಸತಿ ನಿಲಯದ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿವೆ. ಯರನಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ವೈಜಿನಾಥ ಜೀರಗೆ ಕಾರ್ಯಕ್ರಮದ ಭಕ್ತಿ ದಾಸೋಹ ವಹಿಸಿ ಕೊಂಡಿದ್ದಾರೆ.
ಪ್ರಸಾದ ನಿಲಯ ನಡೆದು ಬಂದ ದಾರಿಪರಮಪೂಜ್ಯ ಶ್ರೀ ಮ.ಘ.ಚ.ಡಾ.ಚನ್ನಬಸವ ಪಟ್ಟದ್ದೇವರು ಶಿವಯೋಗ ಮಂದಿರದಲ್ಲಿ ಅಧ್ಯಯನಗೈದು. ಹಾನಗಲ್ಲ ಕುಮಾರೇಶ್ವರ ಮಹಾಶಿವಯೋಗಿಗಳ ದಿವ್ಯಸನ್ನಿಧಾನದಲ್ಲಿ ೧೯೨೪ ರಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಪಟ್ಟಾಧಿಕಾರ ವಹಿಸಿಕೊಂಡರು. ಪೂಜ್ಯರು ಶಿವಯೋಗ ಮಂದಿರದಿAದ ಬರುವಾಗ ಮಠದ ಗುಲಾಮನಾಗಬೇಡ ನಿಜಾಮ ಪ್ರಾಂತದಲ್ಲಿ ಕನ್ನಡ ಪ್ರಸಾರ ಮಾಡು ಎಂದು ಹಾನಗಲ್ಲ ಶ್ರೀಗಳು ಅಪ್ಪಣೆ ಮಾಡಿದ್ದರು.
ಪೂಜ್ಯ ಶ್ರೀಗಳು ಗುರುವಾಕ್ಯದಂತೆ ೧೯೩೬ ರಲ್ಲಿ ಮೋರ್ಗಿಯಲ್ಲಿ (ತೆಲಂಗಾಣಕ್ಕೆ ಸೇರಿದೆ) ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಶಾಂತಿವರ್ಧಕ ಕನ್ನಡ ಪಾಠಶಾಲೆ ಜೊತೆಗೆ ಪ್ರಸಾದ ನಿಲಯ ಆರಂಭಿಸಿದರು. ಮುಷ್ಠಿಫಂಡದ ಮೂಲಕ ಧಾನ್ಯ ಸಂಗ್ರಹಿಸಿ ಪ್ರಸಾದ ನಿಲಯದಲ್ಲಿ ಮಕ್ಕಳಿಗೆ ವ್ಯವಸ್ಥೆ ಮಾಡಿದರು. ಅಲ್ಲಿ ನೀರಿನ ಅಭಾವ ಉಂಟಾಯಿತು. ಅಲ್ಲಿಂದ ೧೯೪೦ ರಲ್ಲಿ ಔರಾದ ತಾಲೂಕಿನ ಖೇಡ ಹಾಗೂ ಸಂಗಮ ಮಧ್ಯದ ದಿಬ್ಬದ ಮೇಲೆ ಮಾಂಜರಾ ದೇವನದಿ ಸಂಗಮ ಸ್ಥಾನದಲ್ಲಿ ಪಾಠಶಾಲೆ ಪ್ರಸಾದ ನಿಲಯ ಸ್ಥಳಾಂತರ ಮಾಡಲಾಯಿತು. ನಿಜಾಮ ಸರ್ಕಾರದ ಉಪಟಳದಿಂದ ಹೊರಗೆ ಉರ್ದು ಬೋರ್ಡು ಹಾಕಿ ಒಳಗೆ ಕನ್ನಡ ಕಲಿಸಿದರು.
೧೯೪೭ ರಲ್ಲಿ ಭಾರತ ದೇಶ ಸ್ವತಂತ್ರವಾದರೂ ಈ ಭಾಗ ರಜಾಕಾರರ ಹಾವಳಿಯಿಂದ ತತ್ತರಿಸಿ ಹೋಯಿತು. ಪಾಠಶಾಲೆ ಪ್ರಸಾದ ನಿಲಯ ತಾತ್ಕಾಲಿಕವಾಗಿ ಸೋಲಾಪೂರದ ಡಾ.ಜಯದೇವಿತಾಯಿ ಲಿಗಾಡೆ, ಬಾಬಾಸಾಹೇಬ ವಾರದ ಸಹಕಾರದಿಂದ ಕುಂಟೋಜಿ ಮಠದಲ್ಲಿ ನಡೆಸಲಾಯಿತು. ೧೯೪೮ ರ ಸಪ್ಟೆಂಬರ್ ೧೭ ರಂದು ನಿಜಾಮ ಸರ್ಕಾರ ಶರಣಾಗತಿಯಾದ ನಂತರ ಮತ್ತೆ ಸಂಗಮಕ್ಕೆ ಸ್ಥಳಾಂತರಿಸಲಾಯಿತು. ಸಂಗಮದಲ್ಲಿ ಪಾಸಾದ ವಿದ್ಯಾರ್ಥಿಗಳ ಹೆಚ್ಚಿನ ಅಭ್ಯಾಸಕ್ಕಾಗಿ ಲಾತೂರಿನಲ್ಲಿ ಮಾರವಾಡಿ ಹೈಸ್ಕೂಲಿನಲ್ಲಿ ವ್ಯವಸ್ಥೆ ಮಾಡಿದರು. ಲಾತೂರಿನಲ್ಲಿ ಕಂತಿಭಿಕ್ಷೆ ಸಹಾಯದಿಂದ ಕೆಲವು ವರ್ಷ ಅಲ್ಲಿಯೂ ಪ್ರಸಾದ ನಿಲಯ ನಡೆಸಿದರು. ಖ್ಯಾತ ಸಾಹಿತಿ ಶಾಂತರಸರು ಸಂಗಮ-ಲಾತೂರಿನ ಬೋರ್ಡಿಂಗದಲ್ಲಿಯೇ ಓದಿದವರು.
ಸಂಗಮದಲ್ಲಿ ದೊಡ್ಡ ಮಹಾಪೂರ ಬಂದು ದಿಬ್ಬಮುಳುಗಡೆಯಾಗಿ ಶಾಲೆ ಮತ್ತು ಪ್ರಸಾದ ನಿಲಯದೊಳಗೆ ನೀರು ನುಗ್ಗಿತು. ಜಿಲ್ಲಾಧಿಕಾರಿಗಳು ಬಂದು ಬೇರೆ ಕಡೆ ಸ್ಥಳಾಂತರಿಸಲು ವಿನಂತಿಸಿದರು. ೧೯೫೫ ರಲ್ಲಿ ಕಮಲನಗರದಲ್ಲಿ ಸ್ಥಳಾಂತರಿಸಿ ಸ್ಥಳ ಖರೀದಿಸಿ ಕಟ್ಟಡ ಪ್ರಾರಂಭಿಸಿ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರಿAದ ೧೯೫೬ ರಲ್ಲಿ ಉದ್ಘಾಟನೆಯಾಯಿತು. ವ್ಯವಸ್ಥಿತವಾಗಿ ಶಾಲೆ ಮತ್ತು ಪ್ರಸಾದ ನಿಲಯ ಕೆಲವು ವರ್ಷ ನಡೆಯಿತು.
೧೯೬೮ ರಲ್ಲಿ ಭಾಲ್ಕಿಯಲ್ಲಿ ಶ್ರೀ ಚನ್ನಬಸವೇಶ್ವರ ಮಹಾವಿದ್ಯಾಲಯ ಆರಂಭವಾದ ನಂತರ ಭಾಲ್ಕಿಯ ಶ್ರೀಮಠಕ್ಕೆ ಪ್ರಸಾದ ನಿಲಯ ಸ್ಥಳಾಂತರಿಸಲಾಯಿತು. ಇದೇ ಪ್ರಸಾದ ನಿಲಯ ಶ್ರೀಮಠಕ್ಕೆ ಉತ್ತರಾಧಿಕಾರಿ ನೀಡಿತ್ತು. ಅವರೇ ನಾಡೋಜ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು. ಪೂಜ್ಯರ ನೇತೃತ್ವದಲ್ಲಿ ಪ್ರಸಾದ ನಿಲಯ ವಿಸ್ತಾರ ರೂಪ ತಾಳಿ ಸುಮಾರು ನಾಲ್ಕುನೂರು ಮಕ್ಕಳು ಇಂದು ಇದ್ದುಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ. ಪೂಜ್ಯ ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಉತ್ತರಾಧಿಕಾರಿಯಾಗಿ ಬಂದಿರುವ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಕೂಡ ಇದೇ ಪ್ರಸಾದ ನಿಲಯದಲ್ಲಿ ಬೆಳೆದವರಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಸ್ಕಾರ ಸಂಸ್ಕೃತಿ ಕಲಿಸಿಕೊಡುವ ಬಡಮಕ್ಕಳಿಗೆ ಆಶ್ರಯವಾಗಿರುವ ಏಕೈಕ ಪ್ರಸಾದ ನಿಲಯ ಇದಾಗಿದೆ. ಮುಂದೆ ಸಾವಿರ ಮಕ್ಕಳಿಗೆ ವಿಸ್ತರಿಸುವ ಸಂಕಲ್ಪ ಪೂಜ್ಯರದಾಗಿದೆ.