ರೈತರ ಶೋಷಣೆಗಾಗಿ ಟೋಲ್ ನಿರ್ಮಾಣ: ಆರೋಪ

ಚೇಳೂರು, ಅ. ೨೯- ಕಳೆದ ಮೂರು ತಿಂಗಳಿಂದ ನಿರಂತರವಾಗಿ ಪ್ರತಿಭಟನೆ ಮಾಡಿಕೊಂಡು ಬಂದಿದ್ದೇವೆ. ಆದರೂ ಕೂಡಾ ಕೆಟ್ಟ ಚಾಳಿಗೆ ಮುಂದಾಗಿರುವ ಸರ್ಕಾರ ರೈತರನ್ನು ಶೋಷಣೆ ಮಾಡಲು ಮುಂದಾಗಿದೆ. ಬಂಡವಾಳ ಶಾಹಿಗಳ ಜತೆ ಕೈ ಸೇರಿಸಿ ರೈತರ ಸುಲಿಗೆಗೆ ಮುಂದಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಹೇಳಿದರು.


ಗುಬ್ಬಿ ತಾಲ್ಲೂಕಿನ ಜಿ. ಹೊಸಹಳ್ಳಿ ಬಳಿಯ ಅವೈಜ್ಞಾನಿಕ ಟೋಲ್‌ಗೇಟ್ ಬಂದ್ ಮಾಡುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಬಿಟ್ಟಿ ಭಾಗ್ಯಗಳನ್ನು ಕೊಟ್ಟು ಅಲ್ಲಿ ಆಗುವ ಅನಾಹುತಗಳಿಂದ ತಪ್ಪಿಸಿಕೊಳ್ಳಲು ರೈತರ ಮೇಲೆ ದಬ್ಬಾಳಿಕೆ ಮಾಡಿ ರಸ್ತೆಗಳಲ್ಲಿ ಸುಂಕ ವಸೂಲಿ ಮಾಡುವ ಮೂಲಕ ಸರ್ಕಾರ ತಪ್ಪು ಮಾಡುತ್ತಿದ್ದು ಯಾವುದೇ ಕಾರಣಕ್ಕೂ ಇಲ್ಲಿನ ಟೋಲ್ ಪ್ಲಾಜಾ ನಡೆಸಲು ಬಿಡುವುದಿಲ್ಲ ಎಂದರು.


ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಕೆಲ ತಿಂಗಳುಗಳಿಂದಲೂ ಹೋರಾಟ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಗುಬ್ಬಿ ತಾಲ್ಲೂಕಿನ ಶಾಸಕರೇ ರೈತರ ಮುಂದೆ ಸಿಪಿಐಗೆ ಕರೆ ಮಾಡಿ ಯಾಕಪ್ಪ ಇನ್ನು ಟೋಲ್ ಕಿತ್ತು ಹಾಕಿಲ್ವಾ ಎಂದು ಫೋನ್ ಮಾಡುತ್ತಾರೆ. ಕೇವಲ ರೈತರಿಗೆ ಟೋಪಿ ಹಾಕಿ ಸಬೂಬು ಹೇಳಿ ಕಳುಹಿಸುವ ಕೆಲಸ ಶಾಸಕರು ಮಾಡುತ್ತಿದ್ದು ಜನರಿಗೆ ಟೋಪಿ ಹಾಕುವ ಕೆಲಸ ಯಾಕೆ ಮಾಡುತ್ತಾರೆ. ಇವೆಲ್ಲವನ್ನು ಬಿಟ್ಟು ನೀವೇ ಬಂದು ನಿಂತು ಕಿತ್ತು ಹಾಕಿ ಎಂದು ಹೇಳಿ ನಾವೇ ಕಿತ್ತು ಹಾಕುತ್ತೇವೆ. ತಾಲ್ಲೂಕಿನ ರೈತರ ಹಿತ ಕಾಯಬೇಕಾದ ಧರ್ಮ ನಿಮ್ಮದು ಅದನ್ನು ಮೊದಲು ಮಾಡಿ ಎಂದರು.


ಜೆಡಿಎಸ್ ಮುಖಂಡ ಬಿ ಎಸ್. ನಾಗರಾಜು ಮಾತನಾಡಿ, ಸುಂಕ ವಸೂಲಾತಿ ಕೇಂದ್ರ ನಿರ್ಮಿಸಿ ರೈತರ ಜೇಬಿಗೆ ಕತ್ತರಿಯಾಗುವ ಸಂದರ್ಭದಲ್ಲಿ ನಮ್ಮ ಶಾಸಕರು ಎಲ್ಲಿ ಹೋಗಿದ್ದಾರೆ. ಸಣ್ಣಪುಟ್ಟ ಮಣ್ಣಿನ ರೋಡ್‌ಗೆ ಗುದ್ದಲಿ ಪೂಜೆಗಳು ನಡೆದರು ನಿಮ್ಮ ಗಮನಕ್ಕೆ ಬಾರದೆ ನಡೆಯುವುದಿಲ್ಲ. ಹೀಗಿರುವಾಗ ರಸ್ತೆಯಲ್ಲಿ ನಿರ್ಮಿಸಿರುವ ಈ ಟೋಲ್‌ಗೇಟ್ ನಿಮ್ಮ ಗಮನದಲ್ಲಿ ಇಲ್ಲವಾ ಅಥವಾ ನಿದ್ದೆಯಲ್ಲಿ ಜಾರಿದ್ದೀರಾ. ಹೇಮಾವತಿ ಹೋರಾಟಕ್ಕೂ ಬರಲಿಲ್ಲ ಆದರೆ ಇಂಥ ಚಿಕ್ಕ ಟೋಲ್‌ಗೇಟ್ ಬಂದ್ ಮಾಡಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದರೆ ಈ ತಾಲ್ಲೂಕಿನ ರೈತರಿಗೆ ನೀವು ದ್ರೋಹ ಮಾಡಿದಂತೆ ಯಾವುದೇ ಕಾರಣಕ್ಕೂ ಟೊಲ್ ಮಾಡಲು ನಾವು ಬಿಡುವುದಿಲ್ಲ. ಇದೇನು ದೊಡ್ಡ ಬೆಟ್ಟವಲ್ಲ ಎಲ್ಲವನ್ನು ಕಿತ್ತು ಬಿಸಾಕುವ ಕೆಲಸ ಮಾಡಲಾಗುತ್ತದೆ. ಇದಕ್ಕೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ತಿಳಿಸಬೇಕು. ರೈತರಿಗೆ ಕೆಲಸವಿಲ್ಲದೆ ಸುಮ್ಮನೆ ಬಂದು ಇಲ್ಲಿ ಕುಳಿತಿಲ್ಲ. ಅಧಿಕಾರಿಗಳು ನಿರ್ಲಕ್ಷ ಮಾಡಿದರೆ ನಾವೇ ರಸ್ತೆ ಅಗೆದು ಟೋಲ್ ಗೇಟ್ ಕಿತ್ತು ಬಿಸಾಕುತ್ತೇವೆ ಎಂದು ಗುಡುಗಿದರು


ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್‌ಕುಮಾರ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ ಸರ್ಕಾರ ಚಿಕ್ಕ ಚಿಕ್ಕ ರಸ್ತೆಗಳಲ್ಲಿಯೂ ಸುಂಕ ವಸೂಲಿಗೆ ಮುಂದಾಗಿರುವುದು ಸರಿಯಲ್ಲ. ರೈತರ ವಿರುದ್ಧ ಸರ್ಕಾರಗಳು ನಿಂತರೆ ಯಾವುದೇ ಕಾರಣಕ್ಕೂ ಉಳಿಯುವುದಿಲ್ಲ. ಗುತ್ತಿಗೆದಾರರಿಂದ ಹಣ ತಿಂದು ಅನುಮತಿ ನೀಡುವುದು ಸರಿಯಲ್ಲ. ಇಂತಹ ಹೋರಾಟಕ್ಕೆ ಜಾತ್ಯತೀತವಾಗಿ ನಮ್ಮೆಲ್ಲರ ಸಂಪೂರ್ಣ ಬೆಂಬಲ ಇದೆ. ಯಾವುದೇ ಕಾರಣಕ್ಕೂ ಟೋಲ್ ಗೇಟ್ ಮುಂದುವರಿಯಲು ಬಿಡುವುದಿಲ್ಲ ಎಂದರು.


ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಸ್. ಆರ್. ಶ್ರೀನಿವಾಸ್, ಸುಮಾರು ೮ ಬಾರಿ ಟೆಂಡರ್ ಪ್ರಕ್ರಿಯೆ ನಡೆದು ಈಗ ಟೋಲ್ ಕೆಲಸ ಮಾಡಲು ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಏಕಾಏಕಿ ನಾನು ಯಾವುದೇ ಭರವಸೆ ನೀಡುವುದಿಲ್ಲ. ಇಲ್ಲಿ ಏನಲ್ಲಾ ಬೆಳವಣಿಗೆಗಳು ನಡೆದಿವೆ ಎಂಬುದರ ಬಗ್ಗೆ ತಿಳಿದು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಮುಂದೆ ಏನು ಮಾಡಬಹುದು ಎಂಬ ಬಗ್ಗೆ ತೀರ್ಮಾನ ಮಾಡುವುದರ ಜತೆಗೆ ೧೫ ದಿನಗಳ ಕಾಲ ಯಾವುದೇ ಸುಂಕ ವಸೂಲಿಗೆ ಮುಂದಾಗದಂತೆ ಸೂಚಿಸುತ್ತೇನೆ. ಅಲ್ಲಿಯವರೆಗೂ ರೈತರು ಸಮಾಧಾನದಿಂದ ವರ್ತಿಸಿ. ನಿಮ್ಮ ಜತೆ ನಾನಿರುತ್ತೇನೆ ಎಂದು ಭರವಸೆ ನೀಡಿದ ಮೇರೆಗೆ ಪ್ರತಿಭಟನಾಕಾರರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಿದರು. ನಂತರ ತಾಲ್ಲೂಕು ದಂಡಾಧಿಕಾರಿ ಆರತಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.


ಪ್ರತಿಭಟನೆಯಲ್ಲಿ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು, ಸ್ಥಳೀಯರು ಭಾಗವಹಿಸಿದ್ದರು.