ಹುಳಿಯಾರು, ಅ. ೬- ಪಟ್ಟಣದ ನಾಡ ಕಚೇರಿ ಮುಂಭಾಗದ ಮುಂಜಾನೆ ಡೈಲಿ ಮಾರ್ಕೇಟ್‌ನಲ್ಲಿ ರೈತರಿಂದ ಸುಂಕ ಸಂಗ್ರಹಿಸುವ ವಿಚಾರವಾಗಿ ರೈತರು ಮತ್ತು ಸುಂಕ ಸಂಗ್ರಹ ಗುತ್ತಿಗೆದಾರರ ನಡುವೆ ಜಟಾಪಟಿ ನಡೆಯಿತು.
ರೈತರೇ ನೇರವಾಗಿ ಬಂದು ತಾವು ಬೆಳೆದ ನುಗ್ಗೆಕಾಯಿ, ಹಿತ್ತಲವರೆ, ಟೊಮೋಟೊ, ಸೊಪ್ಪು, ಬದನೆ, ಹೀರೆಕಾಯಿ, ತೆಂಗಿನ ಕಾಯಿ, ನಾಟಿಕೋಳಿ, ಮೊಟ್ಟೆ ಹೀಗೆ ಅನೇಕ ಕೃಷಿ ಉತ್ಪನ್ನಗಳನ್ನು ತಂದು ಮಾರುತ್ತಿದ್ದಾರೆ. ಅದೂ ಮುಂಜಾನೆ ೬ ರಿಂದ ೧೦ ಗಂಟೆಯವರೆವಿಗೆ ಮಾತ್ರ ವ್ಯಾಪಾರ ಮಾಡಿಕೊಂಡು ಹಿಂದಿರುಗುತ್ತಿದ್ದಾರೆ. ಅನೇಕ ರೈತರು ಇದನ್ನೇ ತಮ್ಮ ದೈನಂದಿನ ಜೀವನಕ್ಕೆ ಆಸರೆ ಮಾಡಿಕೊಂಡಿದ್ದಾರೆ. ಇಂತಹ ರೈತರಿಂದ ಪಟ್ಟಣ ಪಂಚಾಯಿ ಸುಂಕ ವಸೂಲಿ ಮಾಡುತ್ತಿರುವುದು ಸರಿಯಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಆಕ್ಷೇಪಿಸಿದರು.
ಇದಕ್ಕೆ ಸುಂಕ ಸಂಗ್ರಹಗಾರ ಚನ್ನಕೇಶವ ಅವರು ಪಂಚಾಯ್ತಿಯಿಂದ ಹರಾಜು ಕೂಗಿಕೊಂಡಿದ್ದೇವೆ. ಮುಖ್ಯಾಧಿಕಾರಿಗಳೇ ಸುಂಕ ಸಂಗ್ರಹಿಸುವಂತೆ ಲೆಟರ್ ನೀಡಿದ್ದಾರೆ. ನಾವು ಯಾರಿಂದಲೂ ಬಲವಂತದಿಂದ ವಸೂಲಿ ಮಾಡುತ್ತಿಲ್ಲ. ಕೊಟ್ಟರೆ ಇಸ್ಕೋತಿವಿ, ಕೊಡದಿದ್ದರೆ ಸುಮ್ಮನಾಗುತ್ತೇವೆ. ರೈತರ ಸುಂಕ ಬಿಟ್ಟರೆ ದಿನಕ್ಕೆ ೧೦೦ ರೂ.ನಂತೆ ತಿಂಗಳಿಗೆ ೩ ಸಾವಿರ ರೂ. ನಷ್ಟವಾಗುತ್ತದೆ. ಇಲ್ಲಿ ವರ್ತಕರು ಸಹ ವ್ಯಾಪಾರ ಮಾಡುತ್ತಿದ್ದು ಅವರಿಂದಲಾದರೂ ಸುಂಕ ಸಂಗ್ರಹಕ್ಕೆ ಅನುಮತಿ ಕೊಡಿ ಎಂದು ಕೇಳಿಕೊಂಡರು.
ಇದಕ್ಕೆ ರೈತರು ಈ ಜಾಗ ಪಂಚಾಯ್ತಿಗೆ ಸೇರಿದ ಜಾಗವಲ್ಲ. ಅಲ್ಲದೆ ಇಲ್ಲಿ ವ್ಯಾಪಾರ ಮಾಡುವ ರೈತರಿಗೆ ಪಂಚಾಯ್ತಿಯಿಂದ ನೀರು, ನೆರಳು, ಶೌಚಾಲಯ ಕೊಟ್ಟಿಲ್ಲ. ಕನಿಷ್ಟ ಪಕ್ಷ ಕಸ ಸಹ ಗುಡಿಸಲ್ಲ. ರೈತರೇ ಕ್ಲೀನ್ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಹೀಗಿರುವಾಗ ನಿಮಗೇಕೆ ಕೊಡಬೇಕು ಸುಂಕ ಎಂದು ಖಾರವಾಗಿ ಪ್ರಶ್ನಿಸಿದರು. ಗುತ್ತಿಗೆದಾರರು ಸುಂಕ ಸಂಗ್ರಹ ಗುತ್ತಿಗೆ ಹರಾಜು ಪ್ರಕ್ರಿಯೆ ಸಂದರ್ಭದಲ್ಲೇ ನೀವು ಚಕಾರ ಎತ್ತಬೇಕಿತ್ತು. ಈಗ ಸುಂಕ ಕಟ್ಟಲ್ಲ ಎಂದರೆ ನಮಗೆ ನಷ್ಟವಾಗುತ್ತದೆ.
ಪಂಚಾಯ್ತಿಯಿಂದ ನಾವು ಕಟ್ಟಿರುವ ಹಣ ವಾಪಸ್ ಕೊಡಿಸಿ ನಾವು ಸಂಗ್ರಹಿಸುವುದಿಲ್ಲ ಎಂದರು.
ಹೀಗೆ ೧ ಗಂಟೆಗೂ ಹೆಚ್ಚು ಕಾಲ ಇಬ್ಬರ ನಡುವೆ ವಾಗ್ವಾದ ನಡೆಯಿತು. ರೈತರು ಯಾವುದೇ ಕಾರಣಕ್ಕೂ ಸುಂಕ ವಸೂಲಿಗೆ ಬಿಡೋದಿಲ್ಲ ಎಂದು ಪಟ್ಟು ಹಿಡಿದಾಗ ಕೊನೆಗೆ ಅನಿವಾರ್ಯವಾಗಿ ರೈತನ ಮಾತಿನಂತೆ ನಾಡ ಕಚೇರಿ ಬಳಿ ನಡೆಯುವ ನಿತ್ಯ ಸಂತೆಯಲ್ಲಿ ರೈತರಿಂದ ಸುಂಕ ಸಂಗ್ರಹಿಸದಿರಲು ಗುತ್ತಿಗೆದಾರರು ನಿರ್ಧರಿಸಿದರು. ಅಲ್ಲದೆ ಮುಂದಿನ ಹರಾಜು ಸಂದರ್ಭದಲ್ಲಿ ರೈತರು ಬಂದು ಇಲ್ಲಿನ ಸಮಸ್ಯೆಗಳನ್ನು ಪಟ್ಟಣ ಪಂಚಾಯ್ತಿಯ ಗಮನಕ್ಕೆ ತರುವಂತೆ ಕೇಳಿಕೊಂಡರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯಾಧ್ಯಕ್ಷ ಕರಿಯಣ್ಣ, ಟಿ.ಎಸ್.ಪ್ರಶಾಂತ್, ಹನುಮಂತರಾಜ್ ಅರಸ್, ಬಿ.ಲಕ್ಷ್ಮಿ, ಎಸ್.ಜಗದೀಶ್, ನೀರಾಈರಣ್ಣ, ರೇವಣ್ಣ, ಮಂಜುನಾಥ್, ಪುಷ್ಪಬಾಯಿ, ನಿಂಗಪ್ಪ, ಎಂ.ಶ್ರೀನಿವಾಸ್, ನಿಂಗಪ್ಪ, ಕೃಷ್ಣಮೂರ್ತಿ, ಲಿಂಗರಾಜು ಮತ್ತಿತರರು ಉಪಸ್ಥಿತರಿದ್ದರು.



























