ಟೋಕರೆ ಕೋಳಿ ಸಮಾಜ ಸಾಹಿತ್ಯ-ಸಾಂಸ್ಕøತಿಕವಾಗಿ ಶ್ರೀಮಂತ: ಶಾಂತಭೀಷ್ಮ ಚೌಡಯ್ಯಾ ಮಹಾಸ್ವಾಮಿಗಳು

ಬೀದರ್:ಡಿ.17:ಟೋಕರೆ ಕೋಳಿ ಸಮಾಜವು ಸಾಹಿತ್ಯಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ಮತ್ತು ಪುರಾತನ ಸಮಾಜವಾಗಿದ್ದು, ದೇಶಾದ್ಯಂತ ಕೋಳಿ, ಕಬ್ಬಲಿಗ ಸೇರಿದಂತೆ 39ಕ್ಕೂ ಹೆಚ್ಚು ಪರ್ಯಾಯ ಹೆಸರಗಳಿಂದ ಪರಿಚಿತವಾಗಿದೆ ಎಂದು ಶ್ರೀ ಶಾಂತಭೀಷ್ಮ ಚೌಡಯ್ಯಾ ಮಹಾಸ್ವಾಮಿಗಳು ಹೇಳಿದರು.

ಬೀದರ್ ನಗರದ ನೌಬಾದ್‍ನ ಜೆ.ಜೆ. ಟವರ್‍ನಲ್ಲಿ ಜಿಲ್ಲಾ ಟೋಕರೆ ಕೋಳಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಹಮ್ಮಿಕೊಂಡ ಕಾರ್ಯಚಟುವಟಿಕೆಗಳ ಉದ್ಘಾಟನೆಯಲ್ಲಿ ಅವರು ಮಾತನಾಡಿದರು. ಮಹರ್ಷಿ ವಾಲ್ಮೀಕಿ, ಅಂಬಿಗರ ಚೌಡಯ್ಯ ಹಾಗೂ ತಾಯಿ ಭುವನೇಶ್ವರಿಯ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಮಹಾಸ್ವಾಮಿಗಳು, ಈ ಸಮಾಜವು ರಾಮಾಯಣ-ಮಹಾಭಾರತದಂತಹ ಮಹಾಕೃತಿಗಳ ಮೂಲಕ ಜಗತ್ತಿಗೆ ಅಪಾರ ಸಾಹಿತ್ಯಿಕ ಕೊಡುಗೆ ನೀಡಿದೆ ಎಂದರು. ಹಬ್ಬ-ಹರಿದಿನ, ಜಾತ್ರೆ, ಜಯಂತೋತ್ಸವಗಳ ಮೂಲಕ ಸಮಾಜದ ಸಾಂಸ್ಕೃತಿಕ ಪರಂಪರೆ ನಿರಂತರವಾಗಿ ಉಳಿದು ಬಂದಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘದ ಅಧ್ಯಕ್ಷ ಜಗನ್ನಾಥ ಜಮಾದಾರ, ಪರಿಷತ್ ಪ್ರತಿ ತಿಂಗಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಸಂತಸದ ವಿಷಯವಾಗಿದ್ದು, ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕವಡ್ಯಾಳ ವಾಲ್ಮೀಕಿ ರಾಮ ಮಹಾರಾಜರು ಹಾಗೂ ಹುಡುಗಿ ರಾಜಶೇಖರ ಗುರುಜೀ ದಿವ್ಯ ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಟೋಕರೆ ಕೋಳಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಮಾರುತಿ ಮಾಸ್ಟರ್ ವಹಿಸಿದ್ದರು. ವಿವಿಧ ಸಮಾಜ ಸಂಘಟನೆಗಳ ಪದಾಧಿಕಾರಿಗಳು, ಮಹಿಳಾ ಘಟಕದ ಪ್ರತಿನಿಧಿಗಳು ಹಾಗೂ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.