ರೈತರ ಅನುಕೂಲಕ್ಕಾಗಿ ತೊಗರಿ ಸಂಸ್ಕರಣ ಯಂತ್ರ ಆವಿಷ್ಕಾರ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ,ಜ.21-ತೊಗರಿ ಕಣಜ ಎಂದೇ ಹೆಸರಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ತೊಗರಿಯು ವಿಶಿಷ್ಠ ರುಚಿ, ವಿಭಿನ್ನ ಪರಿಮಳ ಮತ್ತು ದೀರ್ಘಕಾಲ ಬಾಳಿಕೆ ಬರುವ ಉತ್ತಮ ಗುಣಮಟ್ಟದ ಕಾರಣದಿಂದಾಗಿ ಉI ಟ್ಯಾಗ್ ಪಡೆದು ಜಾಗತಿಕವಾಗಿ ತನ್ನದೇ ಆದ ಸ್ಥಾನವನ್ನು ಮತ್ತು ಹೆಗ್ಗುರುತನ್ನು ಪಡೆದಿದೆ.
ಇಂತಹ ಅಪರೂಪದ ತೊಗರಿಯನ್ನು ಬೆಳೆಯುವ ರೈತರಿಗೆ ವೈಜ್ಞಾನಿಕವಾಗಿ ಮತ್ತು ಗುಣಮಟ್ಟದ ಸಂಸ್ಕರಣೆ ಮಾಡುವ ಸೌಲಭ್ಯಗಳಿಲ್ಲದೆ, ಪೂರಕವಲ್ಲದ ಯಂತ್ರಗಳನ್ನು ಬಳಸುತ್ತಿದ್ದರು, ಇದರಿಂದಾಗಿ ತಮ್ಮ ಬೆಳೆಗೆ ಉತ್ತಮ ಬೆಲೆ ಪಡೆಯುವಲ್ಲಿ ಹಿನ್ನಡೆ ಅನುಭವಿಸುತ್ತಿದ್ದರು, ಇದನ್ನು ಗಮನಿಸಿ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಡಳಿತವು ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಸಂಶೋಧಕರೊಂದಿಗೆ ಚರ್ಚೆ ನಡೆಸಿ ಗುಣಮಟ್ಟದ ಸಂಸ್ಕರಣೆಗಾಗಿ ವೈಜ್ಞಾನಿಕ ರೀತಿಯ ಯಂತ್ರವನ್ನು ವಿನ್ಯಾಸಗೊಳಿಸಲಾಯಿತು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕೆಕೆಆರ್‍ಡಿಬಿಯ 5.50 ಕೋಟಿ ಮ್ಯಾಕ್ರೋ ಅನುದಾನದಲ್ಲಿ ಮೊದಲ ಹಂತವಾಗಿ 11 ಯಂತ್ರಗಳನ್ನು ತಯಾರಿಸಿ ಲೋಕಾರ್ಪಣೆಗೊಳಿಸಲಾಗಿದೆ,
ಪ್ರತಿ ಗಂಟೆಗೆ 2 ಟನ್ ತೊಗರಿಯನ್ನು ಸಂಸ್ಕರಿಸುವ ಸಾಮಥ್ರ್ಯ ಹೊಂದಿರುವ ಈ ಯಂತ್ರದ ಬಳಕೆಯಿಂದ ರೈತರಿಗೆ ಪ್ರತಿ ಕ್ವಿಂಟಾಲ್ ತೊಗರಿಗೆ 500 ರಿಂದ 1000 ರೂಪಾಯಿಗಳಷ್ಟು ಹೆಚ್ಚಿನ ಧಾರಣೆ ದೊರಕುವ ನಿರೀಕ್ಷೆ ಇದೆ.
ಕಲಬುರಗಿ ಜಿಲ್ಲೆಯ ಕೃಷಿ ಕ್ಷೇತ್ರದ ಉನ್ನತಿಗಾಗಿ ನಮ್ಮ ಸರ್ಕಾರವು ಸಕಲ ನೆರವನ್ನು ಒದಗಿಸಲು ಬದ್ಧವಾಗಿದೆ ಎಂದು ಸಚಿವರು ಬಿಡುಗಡೆಗೊಳಿರುವ ಪತ್ರಿಕಾಹೇಳಿಯಲ್ಲಿ ತಿಳಿಸಿದ್ದಾರೆ.