ಟೈರ್ ಸ್ಫೋಟ: ೪ ಗಂಟೆ ವಿಮಾನ ಹಾರಾಟ ಸ್ಥಗಿತ

ಜಬಲ್ಪುರ,ಆ.೫-ಮಧ್ಯಪ್ರದೇಶದ ಜಬಲ್ಪುರದ ದುಮ್ನಾ ವಿಮಾನ ನಿಲ್ದಾಣದಿಂದ ಮುಂಬೈಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಸೋಮವಾರ ಗಂಭೀರ ತಾಂತ್ರಿಕ ಸಮಸ್ಯೆ ಎದುರಾಗಿದೆ. ಟೈರ್ ಸಮಸ್ಯೆಯಿಂದಾಗಿ ವಿಮಾನ ಟೇಕಾಫ್ ಆಗುವ ಮೊದಲು ನಿಲ್ಲಿಸಬೇಕಾಯಿತು. ಪ್ರಯಾಣಿಕರು ನಾಲ್ಕು ಗಂಟೆಗಳ ಕಾಲ ಕಾಯಬೇಕಾಯಿತು ಇದರಿಂದಾಗಿ ಪ್ರಯಾಣಿಕರು ತೀವ್ರ ಅಸಮಾಧಾನಗೊಂಡಂತೆ ಕಾಣುತ್ತಿದ್ದರು ಎನ್ನಲಾಗಿದೆ.
ವಿಮಾನ ನಿಲ್ದಾಣದ ನಿರ್ದೇಶಕ ರಾಜೀವ್ ರತನ್ ಪಾಂಡೆ ಮಾಹಿತಿ ನೀಡಿ, ವಿಮಾನವು ಮುಂಬೈನಿಂದ ಜಬಲ್ಪುರ ತಲುಪಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿದ ನಂತರ ಏಪ್ರನ್ ಕಡೆಗೆ ಕರೆದೊಯ್ಯುತ್ತಿದ್ದಾಗ, ಟೈರ್ ಹಾನಿಯಾಗಿ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಟೈರ್ ಬದಲಾಯಿಸುವ ಪ್ರಕ್ರಿಯೆಯು ಬಹಳ ಸಮಯ ತೆಗೆದುಕೊಂಡಿದೆ, ಇದು ವಿಮಾನ ಹಾರಾಟವನ್ನು ವಿಳಂಬಗೊಳಿಸಿದೆ.
ಟೈರ್ ಸಮಸ್ಯೆಯಿಂದಾಗಿ, ವಿಮಾನವು ಮಧ್ಯಾಹ್ನ ೧೨.೪೦ ಕ್ಕೆ ಟೇಕಾಫ್ ಆಗಲು ಸಾಧ್ಯವಾಗಲಿಲ್ಲ ಮತ್ತು ಕೆಲವು ಪ್ರಯಾಣಿಕರೊಂದಿಗೆ ಸಂಜೆ ೫.೩೦ ರ ಸುಮಾರಿಗೆ ಮುಂಬೈಗೆ ಹೊರಟಿತ್ತು. ಉಳಿದ ಪ್ರಯಾಣಿಕರನ್ನು ದೆಹಲಿ ಮತ್ತು ಬೆಂಗಳೂರು ಮೂಲಕ ಅವರ ಗಮ್ಯಸ್ಥಾನಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಯಿತು. ಈ ಘಟನೆಯ ಬಗ್ಗೆ ಇಂಡಿಗೋದಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.