
ತಿಪಟೂರು, ಫೆ. ೯- ಆಗಸ್ಟ್ ೨೦೨೩ ರಲ್ಲಿ ಆರಂಭವಾದ ಗೃಹಲಕ್ಷ್ಮೀ ಯೋಜನೆಯಲ್ಲಿ ೪೯,೪೦೮ ಫಲಾನುಭವಿಗಳಿದ್ದು, ಪ್ರಸ್ತುತ ೫೩,೬೨೫ ಫಲಾನುಭವಿಗಳಿಗೆ ಪ್ರತಿ ತಿಂಗಳು ಸರಾಸರಿ ರೂ ೧೦.೭೩ ಲಕ್ಷ ಮೊತ್ತವನ್ನು ವಿತರಿಸಲಾಗುತ್ತಿದೆ. ಇದುವರೆಗೆ ತಾಲ್ಲೂಕಿಗೆ ಒಟ್ಟು ೨೫೩.೮೪ ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಶಿಶು ಅಭಿವೃದ್ಧಿ ಅಧಿಕಾರಿ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜನವರಿ ಅಂತ್ಯಕ್ಕೆ ಸಂಬಂಧಿಸಿದಂತೆ ನಡೆದ ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗಾಗಲೇ ಗೃಹಲಕ್ಷ್ಮಿ ಯೋಜನೆ ಯಡಿಯಲ್ಲಿ ೭೮೮ ಸದಸ್ಯರು ಮರಣ ಹೊಂದಿರುವ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಪಂಚ ಗ್ಯಾರಂಟಿ ಯೋಜನೆಯಡಿ ಹೋಬಳಿ ಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸಿ, ಬಂದ ಅರ್ಜಿಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ, ೫೮,೨೬೭ ಮಹಿಳಾ ಪ್ರಧಾನ ಮತ್ತು ೨,೫೨೮ ಪುರುಷ ಪ್ರಧಾನ ಪಡಿತರ ಚೀಟಿಗಳು ಸೇರಿ ಒಟ್ಟು ೬೧,೦೧೬ ಪಡಿತರ ಚೀಟಿಗಳಿವೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮಾತನಾಡಿ, ತಾಲ್ಲೂಕಿನ ೩೭೬ ಅಂಗನವಾಡಿಗಳಲ್ಲಿ ಬಾಣಂತಿ ಹಾಗೂ ಗರ್ಭಿಣಿಯರಿಗೆ ನೀಡುವ ಪಡಿತರ ಮಾಹಿತಿಯನ್ನು ಕಡ್ಡಾಯವಾಗಿ ಸೂಚನಾ ಫಲಕದಲ್ಲಿ ನಮೂದಿಸಬೇಕು. ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸಬೇಕು. ಜತೆಗೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಸೂಚಿಸಿದರು.
ಅಧ್ಯಕ್ಷ ಎಂ.ಎನ್. ಕಾಂತರಾಜು ಮಾತನಾಡಿ, ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ಎಲ್ಲ ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ರೀತಿಯ ತಪ್ಪು ಅಂಕಿ-ಅಂಶಗಳನ್ನು ನೀಡದೆ ನಿಖರ ಮಾಹಿತಿಯನ್ನು ನೀಡುವುದು ಅಧಿಕಾರಿಗಳ ಕರ್ತವ್ಯ ಎಂದು ಹೇಳಿದರು.
ಯುವನಿಧಿ ಯೋಜನೆ ಕುರಿತು ಮಾತನಾಡಿ, ಯೋಜನೆಯಡಿಯಲ್ಲಿ ೧,೦೮೦ ಜನ ನೋಂದಣಿಯಾಗಿದ್ದು, ೮೩೫ ನಿರುದ್ಯೋಗಿ ಯುವಕರಿಗೆ ಯೋಜನೆಯ ಸೌಲಭ್ಯ ನೀಡಲಾಗುತ್ತಿದೆ. ಪ್ರತಿ ತಿಂಗಳ ೫ರಿಂದ ೨೫ನೇ ತಾರೀಖಿನವರೆಗೆ ಫಲಾನುಭವಿಗಳು ಸ್ವಯಂ ಘೋಷಣಾ ಪತ್ರ ಸಲ್ಲಿಸಬೇಕು ಎಂದು ತಿಳಿಸಿದರು.
ಜತೆಗೆ ಸರ್ಕಾರದ ವತಿಯಿಂದ ಉದ್ಯೋಗ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಯುವನಿಧಿ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ತಿಪಟೂರು ಘಟಕದಲ್ಲಿ ೯೩ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು ೩೨೬ ಜನ ಕರ್ತವ್ಯನಿರ್ವಹಿಸುತ್ತಿದ್ದಾರೆ. ೮೯ ಚಾಲಕರು, ೧೬ ನಿರ್ವಾಹಕರು, ೧೫೬ ಚಾಲಕ ಕಂ ನಿರ್ವಾಹಕರು, ೩೩ ತಾಂತ್ರಿಕ ಸಿಬ್ಬಂದಿ ಹಾಗೂ ೩೨ ಆಡಳಿತ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಶಕ್ತಿ ಯೋಜನೆಯಡಿ ಜನವರಿ ಅಂತ್ಯಕ್ಕೆ ೭ ಲಕ್ಷಕ್ಕೂ ಹೆಚ್ಚು ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದು, ಒಟ್ಟು ೨ ಕೋಟಿ ೭೦ ಲಕ್ಷಕ್ಕೂ ಹೆಚ್ಚು ಮಹಿಳಾ ಪ್ರಯಾಣಿಕರ ಟಿಕೆಟ್‌ಗಳು ದಾಖಲಾಗಿವೆ ಎಂದು ಕೆಎಸ್‌ಆರ್‍ಟಿಸಿ ಅಧಿಕಾರಿ ಮಾಹಿತಿ ನೀಡಿದರು.
ಆಹಾರ ಇಲಾಖೆ ಅಧಿಕಾರಿ ಮಾತನಾಡಿ, ತಾಲ್ಲೂಕಿನಲ್ಲಿ ೭೭ ನ್ಯಾಯಬೆಲೆ ಅಂಗಡಿಗಳು ಹಾಗೂ ಒಂದು ಆಹಾರ ಧಾನ್ಯ ಸಗಟು ಮಳಿಗೆ ವ್ಯವಸ್ಥೆಯಿದ್ದು, ೩,೪೧೬ ಅಂತ್ಯೋದಯ, ೫೧,೬೧೩ ಬಿಪಿಎಲ್ ಹಾಗೂ ೬,೨೩೪ ಎಪಿಎಲ್ ಪಡಿತರ ಚೀಟಿಗಳು ಜತೆ ಆದಾಯ ತೆರಿಗೆ ಸೇರಿದಂತೆ ವಿವಿಧ ಕಾರಣಗಳಿಂದ ಈಗಾಗಲೇ ೧,೩೦೦ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದರು.
ಯುವ ನಿಧಿ ಯೋಜನೆಯಲ್ಲಿ ೧೦೮೦ ಜನ ನೊಂದಾಣಿಯಾಗಿದ್ದು ೮೫೩ ನಿರುದ್ಯೋಗಿಗಳು ಫಲಾನುಭವಿಗಳಾಗಿದ್ದು ಯೋಜನೆಯ ಮೊತ್ತ ಪಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಉದ್ಯೋಗ ತರಬೇತಿಯನ್ನು ನೀಡಲಾಗುತ್ತಿದ್ದು, ಪ್ರತಿ ತಿಂಗಳು ೦೫ ರಿಂದ ೨೫ ರೊಳಗೆ ನಿರುದ್ಯೋಗ ಭತ್ಯೆ ಪಡೆಯುವ ಫಲಾನುಭವಿಗಳು ಸ್ವಯಂ ಘೋಷಣಾ ಪತ್ರ ನೀಡಬೇಕು ಎಂದರು.
ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಸದಸ್ಯರು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ, ನರೇಗಾ ಯೋಜನೆಯ ಅಧಿಕಾರಿ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.






























