
ಚೇಳೂರು, ಅ. ೧೦- ವಿದ್ಯಾರ್ಥಿಗಳಲ್ಲಿರುವ ಸೃಜನಶೀಲ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಿತ್ರಕಲಾ ಶಿಬಿರಗಳನ್ನು ನಿರಂತರವಾಗಿ ಆಯೋಜಿಸಬೇಕು. ಇಂತಹ ಚಟುವಟಿಕೆಗಳು ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗುತ್ತವೆ ಎಂದು ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ರಂಗದಾಸಪ್ಪ ಎ.ಟಿ. ಹೇಳಿದರು.
ಗುಬ್ಬಿ ತಾಲ್ಲೂಕಿನ ಚೇಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ ಹಾಗೂ ಚಿತ್ರಕಲಾ ಸಂಘ ಹಾಗೂ ಪ್ರೌಢಶಾಲೆ ವತಿಯಿಂದ ‘ವರ್ಣ ಸಂಭ್ರಮ?೨೦೨೬’ ಶೀರ್ಷಿಕೆಯಡಿ ಏರ್ಪಡಿಸಿದ್ದ ಮೂರು ದಿನಗಳ ಚಿತ್ರಕಲಾ ಶಿಬಿರ ಹಾಗೂ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಪಠ್ಯ ಚಟುವಟಿಕೆಗಳ ಜತೆಗೆ ವಿವಿಧ ಕಲಾ ಪ್ರಕಾರಗಳ ಬಗ್ಗೆ ಆಸಕ್ತಿ ಬೆಳೆಸುವುದು ಅಗತ್ಯ. ಚಿತ್ರಕಲೆ ಮಕ್ಕಳ ಕಲ್ಪನಾಶಕ್ತಿ, ಏಕಾಗ್ರತೆ ಹಾಗೂ ಅಭಿವ್ಯಕ್ತಿ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿಯೂ ಅಪಾರ ಪ್ರತಿಭೆ ಅಡಗಿದ್ದು, ಅವರಿಗೆ ಸೂಕ್ತ ತರಬೇತಿ ಹಾಗೂ ವೇದಿಕೆ ದೊರೆತಾಗ ತಮ್ಮ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಲು ಸಾಧ್ಯವಾಗುತ್ತದೆ ಎಂದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಸದಸ್ಯ ಮನು ಚಕ್ರವರ್ತಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಭಿನ್ನ ಪ್ರತಿಭೆ ಮತ್ತು ಸೃಜನಶೀಲತೆ ಅಡಗಿರುತ್ತದೆ. ಆ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವುದು ಅತ್ಯಂತ ಮುಖ್ಯ. ಮಕ್ಕಳಿಗೆ ವಿವಿಧ ಕ್ಷೇತ್ರಗಳ ಸಾಮಾಜಿಕ ವಿಚಾರಗಳನ್ನು ಪರಿಚಯಿಸಿ, ಅವರ ಕಲ್ಪನೆ ಹಾಗೂ ಸೃಜನಶೀಲತೆಯನ್ನು ಅಭಿವ್ಯಕ್ತಪಡಿಸಲು ಅವಕಾಶ ನೀಡಿದಾಗ ಅವರ ಜ್ಞಾನ ವೃದ್ಧಿಯಾಗುವುದರ ಜತೆಗೆ ಸಮಾಜದಲ್ಲಿ ಹೊಸ ಬದಲಾವಣೆ ತರಲು ಸಹಕಾರಿಯಾಗುತ್ತದೆ ಎಂದರು.
ಶಿಬಿರದ ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಗಳಿಗೆ ತೊಗಲುಗೊಂಬೆ ಕಲಾಕೃತಿ ರಚನೆಯ ಪ್ರಾತ್ಯಕ್ಷಿಕೆ ನೀಡಲಾಯಿತು. ಚಿಕ್ಕಮಗಳೂರು ಸರ್ಕಾರಿ ಶಾಲೆಯ ಶಿಕ್ಷಕ ಸತ್ಯಪ್ರಕಾಶ್ ಅವರು ತೊಗಲುಗೊಂಬೆಯ ತಯಾರಿಕೆಯ ವಿಧಾನ ಹಾಗೂ ಅದರ ಇತಿಹಾಸದ ಕುರಿತು ಮಕ್ಕಳಿಗೆ ಮಾಹಿತಿ ನೀಡುವುದರ ಜೊತೆಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು. ವಿದ್ಯಾರ್ಥಿಗಳು ತೊಗಲಿನ ಮೇಲೆ ವಿವಿಧ ಪೌರಾಣಿಕ ದೃಶ್ಯಗಳನ್ನು ಚಿತ್ರಿಸಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು.
ಚಿತ್ರಕಲಾ ಶಿಕ್ಷಕ ಕೆಎಂ ರವೀಶ್ ಮಾತನಾಡಿ, ೧೨ ಶಾಲೆಗಳ ಸುಮಾರು ೮೦ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ, ತಮ್ಮ ಕಲ್ಪನೆ ಹಾಗೂ ಭಾವನೆಗಳನ್ನು ರೇಖೆ ಮತ್ತು ವರ್ಣಗಳ ಮೂಲಕ ಕ್ಯಾನ್ವಾಸ್ ಮೇಲೆ ಮಂಡಿಸುತ್ತಾರೆ. ನಿಸರ್ಗ, ಪರಿಸರ, ವಸ್ತುಚಿತ್ರ, ಜನಜಾಗೃತಿ, ಗ್ರಾಮೀಣ ಜನಜೀವನ, ಜನಪದ ಹಾಗೂ ಪೌರಾಣಿಕ ವಿಷಯಗಳನ್ನು ಆಧರಿಸಿ ವಿದ್ಯಾರ್ಥಿಗಳು ವೈವಿಧ್ಯಮಯ ಕಲಾಕೃತಿಗಳನ್ನು ರಚಿಸುವರು ಎಂದರು. ಕಾರ್ಯಕ್ರಮದಲ್ಲಿ ಚಿತ್ರಕಲಾ ಶಿಕ್ಷಕ ಎಸ್.ವಿ. ಆನಂದ್, ಡಿ. ಜಗದೀಶ್, ರಂಗಸ್ವಾಮಿ, ಕಮಲಾ ಬಿ., ಸವಿತಾ ಎಸ್. ಕಾಂದರೆ, ಸತ್ಯಪ್ರಕಾಶ್, ಮಹೇಶ್, ಗಣೇಶ್ಗುಡಿ, ಹೇಮಾ ಪಿ., ಕುಮಾರಸ್ವಾಮಿ ಟಿ. ಹಾಗೂ ಕಲಾವಿದ ಕೃಷ್ಣಪ್ಪ, ಮುಖ್ಯೋಪಾಧ್ಯಾ ಯರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
























