ತಿಪಟೂರು, ಸೆ. ೧೭- ಕ್ರಷರ್‌ವೊಂದರಲ್ಲಿ ೮೦ ಅಡಿ ಆಳಕ್ಕೆ ಟಿಪ್ಪರ್ ಲಾರಿ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ನೀರಲಗೆರೆ ಗ್ರಾಮದ ಬಳಿ ನಡೆದಿದೆ.
ಮೃತಪಟ್ಟಿರುವ ವ್ಯಕ್ತಿಯನ್ನು ಟಿಪ್ಪರ್ ಲಾರಿ ಚಾಲಕ ಚನ್ನಕೇಶವ (೪೮) ಎಂದು ಗುರುತಿಸಲಾಗಿದೆ. ಈತ ಕಳೆದ ಹಲವು ವರ್ಷಗಳಿಂದ ನೀರಲಗೆರೆ ಗ್ರಾಮದ ಬಳಿ ನಡೆಯುತ್ತಿದ್ದ ಕ್ರಷರ್‌ನಲ್ಲಿ ಟಿಪ್ಪರ್ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಕ್ರಷರ್‌ನಲ್ಲಿ ಕೆಳಗಿನಿಂದ ಮೇಲಕ್ಕೆ ಬ್ಲಾಸ್ಟ್ ಮಾಡಿದ ಕಲ್ಲುಗಳನ್ನು ಕ್ರಷ್ ಮಾಡಲು ಟಿಪ್ಪರ್‌ನಲ್ಲಿ ತುಂಬಿಕೊಂಡು ಹೋಗುತ್ತಿದ್ದಾಗ ೮೦ ಅಡಿ ಆಳಕ್ಕೆ ಟಿಪ್ಪರ್ ಉರುಳಿ ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಸದರಿ ಕ್ರಷರ್ ಕೃಷ್ಣ ಎಂಬ ಪ್ರಭಾವಿ ವ್ಯಕ್ತಿಯೊಬ್ಬರಿಗೆ ಸೇರಿದ್ದು, ಇಲ್ಲಿ ಯಾವುದೇ ತಡೆಗೋಡೆಯಾಗಲೀ, ಕೆಲಸ ಮಾಡುವ ಕಾರ್ಮಿಕರಿಗೆ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಂಡಿಲ್ಲ. ಈ ಕ್ರಷರ್ ಸಂಪೂರ್ಣ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.
ಈ ಕ್ರಷರ್‌ನಲ್ಲಿ ಸಮರ್ಪಕವಾದ ವ್ಯವಸ್ಥೆಗಳಿಲ್ಲ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಗಳನ್ನು ಪಾಲಿಸುತ್ತಿಲ್ಲ. ಕೆಲಸ ಮಾಡುತ್ತಿರುವ ಕಾರ್ಮಿಕರು ರಕ್ಷಣೆಯಿಲ್ಲ, ಸುಮಾರು ೬ ಎಕರೆಯಲ್ಲಿ ಕ್ರಷರ್ ನಡೆಯುತ್ತಿದೆ. ಜತೆಗೆ ಬಂಡೆಯನ್ನು ಬ್ಲಾಸ್ ಮಾಡಲಾಗುತ್ತಿದೆ. ಇದರಿಂದಾಗಿ ಸಮೀಪವಿರುವ ಶಾಂತಿನಿವಾಸ ಗ್ರಾಮದಲ್ಲಿ ಬಂಡೆ ಸ್ಫೋಟದಿಂದಾಗಿ ಮನೆಗಳು ನಡುಗುತ್ತಿವೆ. ಇದನ್ನು ವಿರೋಧಿಸಿ ಗ್ರಾಮಸ್ಥರೆಲ್ಲಾ ಸೇರಿ ಹತ್ತಾರು ಬಾರಿ ಪ್ರತಿಭಟನೆ ಮಾಡಿದರೂ ಏನು ಪ್ರಯೋಜನವಾಗಿಲ್ಲ. ಈ ಕ್ರಷರ್‌ನವೊಂದಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಹೆಸರೇಳಲಿಚ್ಚಿದ ಗ್ರಾ.ಪಂ. ಸದಸ್ಯರೊಬ್ಬರು ಆರೋಪಿಸಿದ್ದಾರೆ.
ಮುಂದಿನ ದಿನಗಳಲ್ಲಿ ಈ ಕ್ರಷರ್ ಸ್ಥಗಿತಕ್ಕೆ ಆಗ್ರಹಿಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಕ್ರಷರ್‌ನಿಂದಾಗಿ ಸುತ್ತಮುತ್ತಲ ಗ್ರಾಮಗಳ ತೋಟಗಳು, ಗ್ರಾಮಗಳಲ್ಲಿನ ಮನೆಗಳು ಹಾಳಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಜತೆಗೆ ಮೃತಪಟ್ಟಿರುವ ಟಿಪ್ಪರ್ ಲಾರಿ ಚಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಸಂಬಂಧ ಮೃತ ಚಾಲಕ ಚನ್ನಕೇಶವರವರ ಪುತ್ರ ತರುಣ್ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗ್ರಾಮಾಂತ ಸರ್ಕಲ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಅಡಿಷನಲ್ ಎಸ್ಪಿ ಪುರುಷೋತ್ತಮ್, ಉಪವಿಭಾಗದ ಎಎಸ್ಪಿ ಯಶುಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.




























