ಬೆಂಗಳೂರು, ಅ. ೩- ಮಲೈಮಹದೇಶ್ವರ ವನ್ಯಧಾಮದಲ್ಲಿ ಹೆಣ್ಣು ಹುಲಿಯನ್ನು ಹತ್ಯೆ ಮಾಡಿರುವ ಪ್ರಕರಣ ವರದಿಯಾಗಿದೆ.
ಕಳೆದ ಜೂನ್‌ನಲ್ಲಿ ಮಲೈಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ ಒಂದು ಹೆಣ್ಣು ಹುಲಿ ಹಾಗೂ ೪ ಹುಲಿ ಮರಿಗಳಿಗೆ ವಿಷವಿಟ್ಟು ಕೊಂದ ಘಟನೆ ಮಾಸುವ ಮುನ್ನವೇ ನಿನ್ನೆ ರಾತ್ರಿ ಮಲೈಮಹದೇಶ್ವರ ಬೆಟ್ಟದಲ್ಲಿ ಹೆಣ್ಣು ಹುಲಿಯನ್ನು ಹತ್ಯೆ ಮಾಡಿರುವುದು ವನ್ಯಜೀವಿ ಪ್ರೇಮಿಗಳಲ್ಲಿ ಕಳವಳ ಮೂಡಿಸಿದೆ.
ಮಲೈಮಹದೇಶ್ವರ ವನ್ಯಧಾಮದ ಹನೂರು ಅರಣ್ಯ ಪ್ರದೇಶದಲ್ಲಿ ಹೆಣ್ಣು ಹುಲಿಯ ಅರ್ಧ ಭಾಗದ ಕಳೇಬರ ಪತ್ತೆಯಾಗಿದೆ.
ಪಚ್ಚೆದೊಡ್ಡಿ ಗ್ರಾಮದ ಬಳಿ ನಿನ್ನೆ ಸಂಜೆ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುವಾಗ ಮಣ್ಣಿನಲ್ಲಿ ಹುದುಗಿಸಿಟ್ಟ ಹುಲಿಯ ಅರ್ಧ ಕಳೇಬರ ಪತ್ತೆಯಾಗಿದೆ. ಹುಲಿಯ ತಲೆ, ಭುಜ, ಮುಂದಿನ ಕಾಲುಗಳು ಪತ್ತೆಯಾಗಿದ್ದು, ಉಳಿದ ಭಾಗಗಳು ಪತ್ತೆಯಾಗಿಲ್ಲ. ಹುಲಿಯ ಕಳೇಬರದ ಉಳಿದ ಭಾಗಗಳಿಗೆ ಅರಣ್ಯ ಸಿಬ್ಬಂದಿ ಶೋಧ ನಡೆಸಿದ್ದಾರೆ.
ಈಗ ಸಿಕ್ಕಿರುವ ಕಳೇಬರಹದಲ್ಲಿ ಉಗುರು ಮತ್ತು ಹಲ್ಲುಗಳಿವೆ. ಉಳಿದ ಭಾಗ ಏನಾಯಿತು, ಎಲ್ಲಿದೆ ಎಂಬ ಬಗ್ಗೆ ಶೋಧ ಕಾರ್ಯಾಚರಣೆ ನಡೆದಿದೆ.
ಅರಣ್ಯ ಇಲಾಖೆ ಈ ಸಂಬಂಧ ಕಳ್ಳಬೇಟೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.
ಹುಲಿಯನ್ನು ಹತ್ಯೆ ಮಾಡಿರುವ ಹಂತಕರ ಪತ್ತೆಗೆ ಶ್ವಾನ ದಳದ ನೆರವನ್ನು ಪಡೆಯಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಪತ್ತೆಹಚ್ಚಲಾಗುವುದು ಮಲೈಮಹದೇಶ್ವರ ವನ್ಯಧಾಮದ ಉಪಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ತಿಳಿಸಿದ್ದಾರೆ.
ಕಳೆದ ಜೂನ್‌ನಲ್ಲಿ ಈ ಮಲೈಮಹದೇಶ್ವರ ವನ್ಯಧಾಮದಲ್ಲಿ ಹೆಣ್ಣು ಹುಲಿ ಹಾಗೂ ೪ ಮರಿ ಹುಲಿಗಳಿಗೆ ವಿಷವಿಟ್ಟು ಹತ್ಯೆ ಮಾಡಲಾಗಿದ್ದು, ಇದು ದೊಡ್ಡ ಸುದ್ದಿಗೆ ಗ್ರಾಸವಾಗಿ ಅರಣ್ಯಾಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು.
ತನಿಖೆಗೆ ಖಂಡ್ರೆ ಆದೇಶ
ವನ್ಯಜೀವಿ ಸಪ್ತಾಹದ ಆರಂಭದ ದಿನವೇ ಮಲೆ ಮಹದೇಶ್ವರ ಬೆಟ್ಟ ಕಾನನದ ಹನೂರು ವಲಯದಲ್ಲಿ ಮತ್ತೊಂದು ಹುಲಿ ಹತ್ಯೆ ಆಗಿರುವ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪಿಸಿಸಿಎಫ್ ನೇತೃತ್ವದ ತಂಡದಿಂದ ತನಿಖೆಗೆ ಆದೇಶ ನೀಡಿದ್ದಾರೆ.
ಈ ಸಂಬಂಧ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಲಿಖಿತ ಆದೇಶ ನೀಡಿರುವ ಅವರು, ಮಲೆ ಮಹದೇಶ್ವರ ಬೆಟ್ಟದ ಕಾನನದ ಹನೂರು ವಲಯದ, ಹನೂರು ಗಸ್ತಿನಲ್ಲಿರುವ ಪಚ್ಚೆದೊಡ್ಡಿ ಗ್ರಾಮದ ಬಳಿ ನಿನ್ನೆ ಸತ್ತ ಹುಲಿಯ ಅರ್ಧ ಕಳೇಬರ ಪತ್ತೆಯಾಗಿರುವ ಬಗ್ಗೆ ಪಿಸಿಸಿಎಫ್ ಸ್ಮಿತಾ ಬಿಜ್ಜೂರು ಅವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಲು ಆದೇಶಿಸುವಂತೆ ಸೂಚಿಸಿದ್ದಾರೆ.
ಈ ಕಾನನದಲ್ಲಿ ಕಳೆದ ೩ ವರ್ಷದಲ್ಲಿ ದಾಖಲಾಗಿರುವ ಕಳ್ಳಬೇಟೆ ಪ್ರಕರಣಗಳ ಬಗ್ಗೆಯೂ ಗಮನ ಹರಿಸಿ, ಹಿಂದಿನ ತನಿಖಾ ವರದಿಗಳನ್ನೂ ಪರಾಮರ್ಶಿಸಿ ಮುಂದೆ ಈ ಭಾಗದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮವಹಿಸಲು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಹಾಗೂ ಕಳ್ಳಬೇಟೆಗಾರರ ವಿರುದ್ಧ ಸೂಕ್ತ ಕ್ರಮದ ಶಿಫಾರಸಿನೊಂದಿಗೆ ೮ ದಿನಗಳಲ್ಲಿ ವರದಿ ಸಲ್ಲಿಸಲು ಮತ್ತು ಹುಲಿ ಹಂತಕರನ್ನು ಪತ್ತೆಮಾಡಿ ಅವರಿಗೆ ಕಾನೂನು ರೀತ್ಯ ದಂಡನೆ ಕೊಡಿಸಲು ತುರ್ತು ಕ್ರಮ ವಹಿಸಲು ಆದೇಶ ಹೊರಡಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ಈ ಘಟನೆ ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ಧಾಮದಲ್ಲಿ ನಿರಂತರವಾಗಿ ವನ್ಯಜೀವಿಗಳ ಕಳ್ಳಬೇಟೆ ನಡೆಯುತ್ತಿರುವುದನ್ನು ದೃಢಪಡಿಸುತ್ತಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.


























