ಕೇಸರಿ ಟವಲ್ ಹಾಕಿಕೊಂಡಿದ್ದಕ್ಕೆ ಹಲ್ಲೆ ಅನ್ಯಕೋಮಿನ ಮೂವರು ಬಂಧನ

ಬೆಂಗಳೂರು,ಆ.೨೬- ಕೇಸರಿ ಟವೆಲ್ ಹಾಕಿಕೊಂಡಿದ್ದಕ್ಕೆ ಸ್ಲಿಂದರ್ ಕುಮಾರ್ ಎಂಬುವರ ಮೇಲೆ ಹಲ್ಲೆ ಮಾಡಿದ್ದ ಮೂವರು ಕಿಡಿಗೇಡಿಗಳನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ನ್ಯೂ ಗುರಪ್ಪನಪಾಳ್ಯದ ತಬ್ರೇಜ್(೩೭) ಬನಶಂಕರಿಯ ಕಾವೇರಿನಗರದ ಇಮ್ರಾನ್ ಖಾನ್(೩೫)ಹಾಗೂ ನಾಗವಾರದ ತಬ್ರೇಜ್ (೩೦)ಬಂಧಿತ ಆರೋಪಿಗಳಾಗಿದ್ದು,ಕೃತ್ಯ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.


ಕಲಾಸಿಪಾಳ್ಯದ ರಾಯಲ್ ಟ್ರಾವೆಲ್ಸ್ ಕಂಪನಿಯಲ್ಲಿ ಆಗಸ್ಟ್ ೨೪ರ ರಾತ್ರಿ ೯:೩೦ರ ವೇಳೆ ಸ್ಲಿಂದರ್ ಕುಮಾರ್ ಮತ್ತು ಹರಿಕೃಷ್ಣ ಕೆಲಸ ಮಾಡುತ್ತಿದ್ದರು.


ಈ ವೇಳೆ ಕೇಸರಿ ಟವೆಲ್ ಹಾಕಿಕೊಂಡಿದ್ದ ಸ್ಲಿಂದರ್ ಕುಮಾರ್ ಕಂಡ ಆರೋಪಿಗಳು ಅಲ್ಲಿಗೆ ಬಂದು ಸ್ವಿಂದರ್ ಕುಮಾರ್ ಅವರನ್ನು ನಿಲ್ಲಿಸಿಕೊಂಡು “ನೀನು ಯಾಕೆ ಕೇಸರಿ ಟಾವೆಲ್ ಹಾಕಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ತಳ್ಳಿದ್ದಾರೆ.


ಇದನ್ನು, ನೋಡಿದ ಹರಿಕೃಷ್ಣ ಅವರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಹೋಗಿದ್ದಾರೆ. ಆಗ, ಆರೋಪಿಗಳು ಇಬ್ಬರಿಗೂ ಅವ್ಯಾಚ್ಯ ಶಬ್ದಗಳಿಂದ ಬೈದು ಹರಿಕೃಷ್ಣ ಅವರ ಶರ್ಟ್ ಅನ್ನು ಹರಿದು ಕೈಯಿಂದ ಹೊಡೆದಿದ್ದಾರೆ. ಬಳಿಕ, ಆರೋಪಿಗಳು “ನಿಮ್ಮ ಕೂಲಿ ಮಾಡುವ ಹುಡುಗ ಯಾಕೆ ಕೇಸರಿ ಟಾವೆಲ್ ಹಾಕಿದ್ದಾನೆ. ಅದನ್ನು ತಗಿಸಿ” ಎಂದು ಏರುದನಿಯಲ್ಲಿ ಹರಿಕೃಷ್ಣ ಅವರಿಗೆ ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮತ್ತು ನಮ್ಮ ಜೊತೆ ಮತ್ತೆ ಗಲಾಟೆ ಮಾಡದಂತೆ ಸೂಕ್ತ ತಿಳುವಳಿಕೆ ನೀಡಬೇಕೆಂದು ಹಲ್ಲೆಗೊಳಗಾದವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.