ಬೈಕ್‌ಗೆ ಲಾರಿ ಡಿಕ್ಕಿ: ಮೂವರ ಸಾವು

ಕುಣಿಗಲ್, ಅ. ೮- ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗಳೂರಿನಿಂದ ಸೋಮವಾರಪೇಟೆಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ-೮೫ ರ ಸುಗ್ಗನಹಳ್ಳಿ ಗ್ರಾಮದ ಬಳಿ ನಡೆದಿದೆ.


ಮೃತರನ್ನು ಉಂಗ್ರ ಗ್ರಾಮದ ಹುಚ್ಚೆಗೌಡ (೬೦), ನಿಂಗಮ್ಮ (೫೫) ಹಾಗೂ ಮೊಮ್ಮಗ ಪ್ರೀತಮ್ (೧೧) ಎಂದು ಗುರುತಿಸಲಾಗಿದೆ.


ಉಂಗ್ರ ಗ್ರಾಮದಿಂದ ಹುಲಿಯೂರುದುರ್ಗದ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಸುಗ್ಗನಹಳ್ಳಿ ಗ್ರಾಮದ ಬಳಿ ನಡೆಯುತ್ತಿದ್ದ ರಸ್ತೆ ಕಾಮಗಾರಿ ಕಾರಣದಿಂದ ಏಕಮುಖ ಸಂಚಾರ ಕಲ್ಪಿಸಲಾಗಿತ್ತು. ಈ ವೇಳೆ ಕಾರನ್ನು ಹಿಂದಿಕ್ಕುವ ಭರದಲ್ಲಿ ಎದುರಿಗೆ ಬರುತ್ತಿದ್ದ ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಹುಚ್ಚೇಗೌಡ ಹಾಗೂ ಪ್ರೀತಮ್ ಸ್ಥಳದಲ್ಲೇ ಸಾವನ್ನಪ್ಪಿದರೆ, ತೀವ್ರವಾಗಿ ಗಾಯಗೊಂಡಿದ್ದ ನಿಂಗಮ್ಮ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.


ಈ ಸಂಬಂಧ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಘಟನೆಯ ಸುದ್ದಿ ತಿಳಿದ ಕೂಡಲೇ ಅಮೃತೂರು ಪಿಎಸ್‌ಐ ಮಾಧ್ಯನಾಯಕ್, ಕುಣಿಗಲ್ ಸಿಪಿಐ ನವೀನ್‌ಗೌಡ ಹಾಗೂ ಹುಲಿಯೂರುದುರ್ಗ ಪಿಎಸ್‌ಐ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.