Home ಜಿಲ್ಲೆ ಪರಿಸರ ಸಂರಕ್ಷಣೆಗೆ ಸೆ.20ರಿಂದ ಮೂರು ದಿನಗಳ ಪರಿಸರ ಸತ್ಯಾಗ್ರಹ

ಪರಿಸರ ಸಂರಕ್ಷಣೆಗೆ ಸೆ.20ರಿಂದ ಮೂರು ದಿನಗಳ ಪರಿಸರ ಸತ್ಯಾಗ್ರಹ

ಬೀದರ: ಪರಿಸರ ಸಂರಕ್ಷಣೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ ಸರ್ಕಾರ ಸಮಗ್ರ ಮತ್ತು ಶಾಶ್ವತ ನೀತಿ ರೂಪಿಸಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಸೆ.20ರಿಂದ 22ರವರೆಗೆ ಮೂರು ದಿನಗಳ ಕಾಲ ಪರಿಸರ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರ ಹೋರಾಟಗಾರರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ದಸಂಸ ಜಿಲ್ಲಾ ಸಂಚಾಲಕ ತುಕರಾಮ ಲಾಡಕರ ಹಾಗೂ ಪ್ರಮುಖರಾದ ರಾಜು ಗೌಡ, ಮನೋಜ ಮುಡಬಿಕರ, ಪ್ರಭು ಮಾಲೆ ಮತ್ತಿತರರು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ಇಂದು ನಮ್ಮ ನೆಲ, ಜಲ, ಕಾಡು, ಕರಾವಳಿ, ಅಳಿವೆ ಹಾಗೂ ಸಮುದ್ರಗಳು ಸೇರಿದಂತೆ ನೈಸರ್ಗಿಕ ಪರಿಸರ ಅಪಾಯದಲ್ಲಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪಶ್ಚಿಮಘಟ್ಟಗಳ ಮೇಲೆ ಹಲವು ಯೋಜನೆಗಳನ್ನು ಹೇರಲಾಗುತ್ತಿದೆ. ರಾಜ್ಯದ ವಿವಿಧೆಡೆ ಗುಡ್ಡ-ಬೆಟ್ಟಗಳು, ನದಿಗಳು, ಜಲಮೂಲಗಳು ಹಾಗೂ ವನ್ಯಜೀವಿಗಳ ಆವಾಸಸ್ಥಾನಗಳಿಗೆ ಹಾನಿಯಾಗುವ ಯೋಜನೆಗಳು ನಡೆಯುತ್ತಿವೆ. ಪ್ಲಾಸ್ಟಿಕ್ ಮಾಲಿನ್ಯ, ರಾಸಾಯನಿಕ ಕೃಷಿ, ಪರಿಸರ ಕಾನೂನುಗಳ ಸಡಿಲ ಅನುಷ್ಠಾನ ಹಾಗೂ ಅಸಮರ್ಪಕ ನೀತಿಗಳಿಂದ ಮುಂದಿನ ಪೀಳಿಗೆಗೆ ದೊರೆಯಬೇಕಾದ ನೈಸರ್ಗಿಕ ಸಂಪತ್ತು ನಾಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹವಾಮಾನ ಬದಲಾವಣೆಯಿಂದ ಬಿಸಿಗಾಳಿ, ಅತಿವೃಷ್ಟಿ, ಅನಾವೃಷ್ಟಿ, ಕಾಡ್ಗಿಚ್ಚು ಹಾಗೂ ಚಂಡಮಾರುತಗಳ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಕೃಷಿ ಇಳುವರಿ ಕುಸಿಯುವ ಸಾಧ್ಯತೆಯಿದ್ದು, ರೈತರ ಬದುಕಿನ ಮೇಲೂ ದುಷ್ಪರಿಣಾಮ ಬೀರುತ್ತಿದೆ. ನೈಸರ್ಗಿಕ ಸಂಪನ್ಮೂಲಗಳ ನಾಶವು ಮಾನವಕುಲದ ಉಳಿವಿನ ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ.

ಭಾರತ ಸಂವಿಧಾನದ 51ಎ(ಜಿ) ವಿಧಿಯು ಕಾಡು, ನದಿ, ಕೆರೆ ಹಾಗೂ ವನ್ಯಜೀವಿಗಳನ್ನು ಒಳಗೊಂಡ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯವೆಂದು ತಿಳಿಸಿದೆ. ಈ ಕರ್ತವ್ಯವನ್ನು ಮನವರಿಕೆ ಮಾಡಿಕೊಡುವುದು ಹಾಗೂ ಸರ್ಕಾರದ ಗಮನ ಸೆಳೆಯುವುದು ಸತ್ಯಾಗ್ರಹದ ಮುಖ್ಯ ಉದ್ದೇಶವಾಗಿದೆ.

ಇದು ಯಾವುದೇ ಒಂದು ಸಂಘಟನೆಗೆ ಸೀಮಿತವಾದ ಹೋರಾಟವಲ್ಲ. ಪರಿಸರ ಹೋರಾಟಗಾರರು, ಸಾಹಿತಿಗಳು, ವಿಜ್ಞಾನಿಗಳು, ರೈತರು, ಕಾರ್ಮಿಕರು, ಮಹಿಳಾ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿಗಳನ್ನು ಒಳಗೊಂಡ ವಿಶಾಲ ವೇದಿಕೆಯಾಗಿದೆ. ಸತ್ಯಾಗ್ರಹದಲ್ಲಿ ಶಾಂತಿಯುತ ಪ್ರತಿಭಟನೆ ಹಾಗೂ ವಿಚಾರ ಮಂಥನ ನಡೆಯಲಿದೆ.

ಸರ್ಕಾರ ಪರಿಸರ ಸಂರಕ್ಷಣೆಗೆ ಸಮಗ್ರ ನೀತಿ ರೂಪಿಸಿ ಜಾರಿಗೊಳಿಸುವುದು, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಹಾಗೂ ಪರಿಸರ ಕಾನೂನುಗಳ ಕಟ್ಟುನಿಟ್ಟಿನ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.