೧೬ ಮಂದಿ ಸೆರೆ
ಬೆಂಗಳೂರು,ಅ.೧೪- ಪೊಲೀಸ್ ಅಧಿಕಾರಿ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬೆದರಿಸಿ ಲಕ್ಷಾಂತರ ರೂ ಹಣ ಪಡೆದು ವಂಚಿಸುತ್ತಿದ್ದ ಗ್ಯಾಂಗ್ ನ ೧೬ ಮಂದಿ ಆರೋಪಿಗಳನ್ನು ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಜರಾತ್ ನ ಮಹದೇವಸಿಂಗ್(೨೬) ಮಹಾರಾಷ್ಟ್ರದ ಫ್ರಾನ್ಸಿಸ್(೨೯)ಮೋಹಿತ್ ಕನಕೈ(೩೨)ಕಾರ್ತಿಕ್ ರಾಜು(೨೫) ಸುನೀಲ್(೩೦)ಅರವಿಂದ್ ಅನ್ನಿ ಪೂಜಾರಿ(೩೧)ರಾಕೇಶ್ ಕುಮಾರ್ ಸಿಂಗ್(೨೯)ಇಂದರ್ ಲಾಮಿಯಾದವ್ (೩೧)ರೋಹನ್(೨೮)ರಾಮಕೃಷ್ಣ ಸೋನಿ(೪೩)ಸೇರಿ ೧೬ ಮಂದಿ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಲ್ಲಿ ೮ ಮಂದಿ ಮಹಾರಾಷ್ಟ್ರ, ಮೇಘಾಲಯದ ೪, ಒರಿಸ್ಸಾ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಗುಜರಾತ್ ಮೂಲದ ನಾಲ್ವರು ಸೇರಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರಿಂದ ೪೧ ಕಂಪ್ಯೂಟರ್, ೪೧ ಮೊನಿಟರ್, ೪೦ ಸಿ.ಪಿ.ಯು, ೪೧ ಮೌಸ್, ೪೧ ಕಿ ಬೋರ್ಡ್, ೪೧ ವಿಜಿಎ ಕೇಬಲ್, ೮೨ ಪವರ್ ಕೇಬಲ್, ೨೧ ಲ್ಯಾನ್ ಕೇಬಲ್ ೨ ಅಟೆಂಡನ್ಸ್ ರೆಜಿಸ್ಟರ್ ಮತ್ತು ೪ ಸ್ಕ್ರೀಪ್ಟ್ ನೊಟ್ ಬುಕ್ ಗಳು ೨೫ ಮೊಬೈಲ್ ಗಳು ಐ.ಡಿ ಕಾರ್ಡ್ ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಹೆಚ್‌ಎಸ್‌ಆರ್ ಲೇಔಟ್ ೨೭ನೇ ಮುಖ್ಯರಸ್ತೆಯಲ್ಲಿ ನಕಲಿ ಬಿಪಿಎಲ್ ಕಂಪನಿ ತೆರೆದು ಮುಗ್ಧ ಜನರಿಗೆ ಕರೆ ಮಾಡಿ ವಂಚಿಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಇನ್ ಸ್ಪೆಕ್ಟರ್ ಹರೀಶ್ ಕುಮಾರ್ ಸುಮೊಟೊ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ೧೬ ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ದಾಳಿ ವೇಳೆ ೪೦ಕ್ಕಿಂತ ಹೆಚ್ಚು ಕಂಪ್ಯೂಟರ್ ಸೇರಿದಂತೆ ಇನ್ನಿತರ ಉಪಕರಣಗಳನನ್ನು ವಶಕ್ಕೆ ಪಡೆದುಕೊಂಡಿದ್ಧಾರೆ. ಪ್ರಕರಣದ ತನಿಖೆಯನ್ನ ಆಗ್ನೇಯ ವಿಭಾಗ ಸೈಬರ್ ಕ್ರೈಂ ಠಾಣೆ ಪೊಲೀಸರು ನಡೆಸುತ್ತಿದ್ಧಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಟ್ಸ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ವಂಚಕರು ಕಳೆದ ಎರಡು ವರ್ಷಗಳ ಹಿಂದೆ ಬಿಪಿಒ ಕಂಪನಿ ತೆರೆದಿದ್ದರು. ಕಟ್ಟಡದ ಎರಡು ಮಹಡಿಗಳಲ್ಲಿ ಒಟ್ಟು ೨೦ ರಿಂದ ೨೫ ಮಂದಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಆನ್‌ಲೈನ್ ನಲ್ಲಿ ಕೆಲಸವೆಂದು ಹೇಳಿ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಂಡು ಸಾರ್ವಜನಿಕರಿಗೆ ಹೇಗೆ ವಂಚಿಸಬೇಕೆಂದು ತರಬೇತಿ ನೀಡುತ್ತಿದ್ದರು. ಬಳಿಕ ಯುಎಸ್‌ಎ ಸೇರಿದಂತೆ ವಿವಿಧ ದೇಶಗಳ ಪ್ರಜೆಗಳಿಗೆ ರಾತ್ರಿ ವೇಳೆ ಪೊಲೀಸರು ಸೇರಿದಂತೆ ವಿವಿಧ ತನಿಖಾ ಏಜೆನ್ಸಿಗಳ ಸೋಗಿನಲ್ಲಿ ಕರೆ ಮಾಡಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬೆದರಿಸಿ ಸಹಾಯ ಮಾಡುವುದಾಗಿ ನಂಬಿಸಿ ವಂಚಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಆನ್ ಲೈನ್ ಮುಖೇನ ಅಪರಿಚಿತ ಜನರ ಮಾಹಿತಿ ಸಂಗ್ರಹಿಸಿ, ಅವರುಗಳನ್ನು ಮೊಬೈಲ್ ನಲ್ಲಿ ಸಂಪರ್ಕಿಸಿ, ಮಾದಕ ವಸ್ತುಗಳ ಕಾಯ್ದೆ ಅಪರಾಧ ಮಾಡಿರುವ ಬಗ್ಗೆ ಮತ್ತು ಮನಿಲ್ಯಾಂಡರಿಂಗ್ ವಂಚನೆ ಮಾಡಿರುವ ಪ್ರಕರಣ ದಾಖಲಾಗಿದೆ ಎಂದು ಹೆದರಿಸುವುದಲ್ಲದೆ ತನಿಖಾ ಸಂಸ್ಥೆ ಅಥವಾ ಪೊಲೀಸ್ ಏಜೆನ್ಸಿ ರವರೆಂದು ಹೇಳಿಕೊಂಡು, ಅಮಾಯಕರಿಗೆ ಹೆದರಿಸಿ ಸಹಾಯ ಮಾಡುವ ನೆಪದಲ್ಲಿ ಆಮಿಷ ಒಡ್ಡಿ, ಆನ್ ಲೈನ್ ಮೂಲಕ ಹಣವನ್ನು ವಂಚನೆ ನಡೆಸುತ್ತಿದ್ದರು ಎಂದು ಹೇಳಿದರು.
ದಾಳಿ ಸಮಯದಲ್ಲಿ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಗಳನ್ನು ಪ್ರಶ್ನಿಸಿದಾಗ ವರ್ಕ್ ಇಂಡಿಯಾ, ಲಿಂಕ್ಡಿನ್ ಮಾದರಿಯ ಸಾಮಾಜಿಕ ಜಾಲತಾಣದಲ್ಲಿ ಬರುವ ಜಾಬ್ ಆಫರಿಂಗ್ ಮತ್ತು ವೆಬ್ ಸೈಟ್ ನಲ್ಲಿ ಕೆಲಸ ಕೊಡಿಸುವ ಸಲುವಾಗಿ ಮಾಹಿತಿಯನ್ನು ಅಪಲೋಡ್ ಮಾಡಿದ್ದು, ನಂತರ ಕಂಪನಿಯ ಮ್ಯಾನೇಜರ್ / ಉಸ್ತುವಾರಿಗಳು ಬೆಂಗಳೂರಿನಲ್ಲಿರುವ ಯುಎಸ್‌ಎ, ಕೆನಡಾ ಮತ್ತು ಇತರೆ ದೇಶಗಳಿಗೆ ಆನ್ ಲೈನ್ ಮಾಹಿತಿ ಸೇವೆ ಒದಗಿಸುವ ಕಾಲ್ ಸೆಂಟರ್ ಗಳಲ್ಲಿ ಕೆಲಸ ಮತ್ತು ವಸತಿ ಸೌಲಭ್ಯ ಒದಗಿಸುವ ಆಮಿಷವೊಡ್ಡಿ ಬೇರೆ ಬೇರೆ ರಾಜ್ಯಗಳಿಂದ ನಗರಕ್ಕೆ ಕರೆಯಿಸಿಕೊಂಡು, ಹೆಚ್.ಎಸ್.ಆರ್ ಲೇಔಟ್ ಮತ್ತು ಬಿ.ಟಿ.ಎಂ. ಲೇಔಟ್‌ನಲ್ಲಿ ವಾಸಕ್ಕಾಗಿ ಮನೆಗಳನ್ನು ಮತ್ತು ಕ್ಯಾಬ್‌ಗಳ ಸೇವೆ ಮತ್ತು ಊಟದ ವ್ಯವಸ್ಥೆಯನ್ನು ಸಹ ಮಾಡಿರುತ್ತಾರೆ. ಮೂರು ವಾರಗಳ ಟೆಲಿಕಾಲರ್ ತರಭೇತಿ ನೀಡಿದ ನಂತರ, ಕಂಪನಿಯವರು ಸೂಚಿಸಿದಂತೆ ಗ್ರಾಹಕರಿಗೆ ಕರೆಮಾಡುವಂತೆ ತಿಳಿಸಿ, ಕಂಪನಿಯವರು ನೀಡಿರುವ ಲೈವ್ ಸರ್ವರ್ ನಲ್ಲಿ ಪೋನ್ ಮುಖೇನ ಸಾರ್ವಜನಿಕರಿಗೆ ಮಾತಾಡಿ ಪ್ರಕರಣದಲ್ಲಿ ಸಿಕ್ಕಿಕೊಂಡಿರುವಂತೆ ಹೆದರಿಸಿ ನಕಲಿ ಪೊಲೀಸ್ ಐ.ಡಿ ಗಳನ್ನು ತೋರಿಸಿ ಬಂಧನದಿಂದ ರಕ್ಷಿಸಲು ಹಣಕ್ಕೆ ಬೇಡಿಕೆ ಇಟ್ಟು ವಂಚನೆ ನಡೆಸಲಾಗುತ್ತಿತ್ತು ಎಂದು ಹೇಳಿದರು.



























