ಬೆಂಗಳೂರು,ಆ.೧೬- ರಾಜ್ಯದಲ್ಲಿ ಆರ್ ಎಸ್ ಎಸ್ ನಿಷೇಧದ ಕುರಿತು ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ ಖರ್ಗೆಗೆ ಬೆದರಿಕೆ ಕರೆ ಬರುತ್ತಿರುವುದು ಶುದ್ಧ ಸುಳ್ಳು ಎಂದು ವಿಧಾನ ಪರಿಷತ್ ಸದಸ್ಯ ಎಚ್, ವಿಶ್ವನಾಥ್ ಇಂದಿಲ್ಲಿ ವಾಗ್ದಾಳಿ ನಡೆಸಿದ್ಧಾರೆ
ರಾಜ್ಯದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ನಿಷೇಧ ಹೇರುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಬೆದರಿಕೆ ಕರೆ ಬರುತ್ತಿವೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿಕಗೆ ಎಚ್. ವಿಶ್ವನಾಥ್ ತಿರುಗೇಟು ನೀಡಿದ್ದು ಯಾವುದೇ ಬೆದರಿಕೆ ಕರೆ ಬರುತ್ತಿಲ್ಲ ಎಂದಿದ್ಧಾರೆ
ಮೈಸೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ನಿಮ್ಮಪ್ಪ ಮಲ್ಲಿಕಾರ್ಜುನ ಖರ್ಗೆ ಅವರಂತೆ ಒಳ್ಳೆಯ ಕೆಲಸ ಮಾಡು ಎಂದು ಜನ ಗೆಲ್ಲಿಸಿದ್ದಾರೆ. ಆದರೆ ನೀನು ಕೆಲಸಕ್ಕೆ ಬಾರದ ವಿಚಾರಗಳನ್ನು ಮಾತನಾಡಿಕೊಂಡು ರಾಷ್ಟ್ರೀಯ ನಾಯಕ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದೀಯ ಎಂದು ಹರಿಹಾಯ್ದಿದ್ದಾರೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಗನಿಗೆ ಯಾರು ಬೆದರಿಕೆ ಹಾಕುತ್ತಾರೆ ಇದು ಬರಿ ಸುಳ್ಳಿನಿಂದ ಕೂಡಿದೆ. ನಾನು ಸಹ ಸಿದ್ದರಾಮಯ್ಯ ವಿರುದ್ಧ ಎಷ್ಟೋ ಬಾರಿ ಟೀಕೆ ಮಾಡಿದ್ದೇನೆ. ಆದರೆ ಇದುವರೆಗೂ ನನಗೆ ಕರೆ ಮಾಡಿ ಯಾರು ಬೆದರಿಕೆ ಹಾಕಿಲ್ಲ. ಪ್ರಶ್ನೆಯು ಮಾಡಿಲ್ಲ ಎಂದಿದ್ಧಾರೆ




























