
ಬೆಂಗಳೂರು,ಜೂ.೨೧;ಪಕ್ಷ ಬಿಟ್ಟವರು ತಮ್ಮ ತಪ್ಪು ಅರ್ಥಮಾಡಿಕೊಂಡು ಅದನ್ನು ಸರಿಪಡಿಸಿಕೊಂಡು ಪಕ್ಷಕ್ಕೆ ವಾಪಸ್ ಬರಲು ಅಡ್ಡಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳುವ ಮೂಲಕ ಪಕ್ಷ ಬಿಟ್ಟಿರುವ ನಾಯಕರು ತಪ್ಪು ಸರಿಪಡಿಸಿಕೊಂಡು ಪಕ್ಷಕ್ಕೆ ಮರಳಬಹುದು ಎಂಬ ಆಹ್ವಾನವನ್ನು ನೀಡಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಯಾವ ನಾಯಕರು ತಮ್ಮ ತಪ್ಪನ್ನು ಅರ್ಥ ಮಾಡಿಕೊಂಡು ಪಕ್ಷಕ್ಕೆ ವಾಪಸ್ ಬರಬೇಕು ಅಂದುಕೊಂಡಿದ್ದಾರೋ ಅವರೆಲ್ಲ ಬರಬಹುದು. ಪಕ್ಷದ ನಾಯಕರ ಘರ್ ವಾಪಸ್ಸಿ ಬಗ್ಗೆ ದೆಹಲಿಯಲ್ಲಿ ವರಿಷ್ಠರು ಕುಳಿತು ಚರ್ಚಿಸಿ ತೀರ್ಮಾನ ಮಾಡುತ್ತಾರೆ. ರಾಜ್ಯಮಟ್ಟದಲ್ಲಿ ಈ ಬಗ್ಗೆ ಚರ್ಚೆಗಳು ನಡೆದಿಲ್ಲ ಎಂದರು.
ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಘರ್ ವಾಪಸ್ಸಿ ಬಗ್ಗೆ ತೀರ್ಮಾನವಾಗಿದೆಯೇ ಎಂಬ ಪ್ರಶ್ನೆಗೆ ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಗಳಾಗಿಲ್ಲ. ಇದೆಲ್ಲ ಕೇಂದ್ರ ಮಟ್ಟದಲ್ಲಿ ತೀರ್ಮಾನವಾಗುವ ವಿಚಾರ. ನಮ್ಮ ಹಂತದಲ್ಲಿ ಚರ್ಚೆ ನಡೆದಿಲ್ಲ ಎಂದರು.
ಹೈಕಮಾಂಡ್‌ನ ನಿರ್ಧಾರ
ಬಿಜೆಪಿ ರಾಜ್ಯಾಧ್ಯಕ್ಷರಾಗಿ ತಮ್ಮನ್ನು ಮುಂದುವರೆಸುವ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ನಾನು ಪಕ್ಷ ಕೊಟ್ಟ ಎಲ್ಲ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಿದ್ದೇನೆ. ಪ್ರತಿ ಸಂದರ್ಭದಲ್ಲೂ ಹೈಕಮಾಂಡ್‌ಗೆ ಮಾಹಿತಿ ಕೊಡುತ್ತ ಬಂದಿದ್ದೇನೆ. ಪಕ್ಷದ ತೀರ್ಮಾನ ಏನಿರುತ್ತದೋ ನೋಡೋಣ ಎಂದರು.
ಪಕ್ಷದ ರಾಜ್ಯಾಧ್ಯಕ್ಷರಾಗಿ ಯಾರನ್ನು ಮಾಡಿದರೆ ಒಳ್ಳೆಯದು, ಯಾರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಬಹುದೆನ್ನುವುದನ್ನು ವರಿಷ್ಠರು ತೀರ್ಮಾನಿಸುತ್ತಾರೆ ಎಂದು ವಿಜಯೇಂದ್ರ ಹೇಳಿದರು.
ಒಗ್ಗಟ್ಟಿನಿಂದ ಹೋಗಲು ಸೂಚನೆ
ರಾಜ್ಯಕ್ಕೆ ನಿನ್ನೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಯೊಬ್ಬ ನಾಯಕರು ಅಸಮಾಧಾಣ, ಅತೃಪ್ತಿಯನ್ನು ಪಕ್ಕಕ್ಕಿಟ್ಟು ಹಳೆಯದನ್ನೆಲ್ಲ ಮರೆತು ಒಟ್ಟಾಗಿ ಹೋಗುವಂತೆ ಕಿವಿಮಾತು ಹೇಳಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೂ ಸೂಚನೆ ನೀಡಿದ್ದಾರೆ ಎಂದು ವಿಜಯೆಂದ್ರ ಹೇಳಿದರು.
ಕೇಂದ್ರ ಗೃಹಸಚಿವರಾದ ಅಮಿತ್ ಶಾ ಅವರ ಜತೆ ನಾನು ಮತ್ತು ನಮ್ಮ ಹಲವು ನಾಯಕರು ಸುಮಾರು ೨೦-೨೫ ನಿಮಿಷ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಕಾಂಗ್ರೆಸ್ ಸರ್ಕಾರ ಹೊಡೆದಾಳುವ ನೀತಿ ಅನುಸರಿಸುತ್ತಿದೆ. ಬಡವರಿಗೆ, ರೈತರಿಗೆ ಈ ಸರ್ಕಾರ ಶಾಪವಾಗಿದೆ. ಬರುವ ದಿನಗಳಲ್ಲಿ ನಮ್ಮ ಪಕ್ಷಕ್ಕೆ ಒಳ್ಳೆಯ ಅವಕಾಶ ಇದೆ ಎಂದು ಅಮಿತ್ ಶಾ ಅವರು ಹೇಳಿ ಒಗ್ಗಟ್ಟಿನಿಂದ ರಾಜ್ಯಸರ್ಕಾರದ ವಿರುದ್ಧ ಹೋರಾಟ ನಡೆಸುವಂತೆ ತಿಳಿಸಿದ್ದಾರೆ ಎಂದರು.