
ವಿಜಯಪುರ.ಜೂ೩:“ಇತಿಹಾಸ ತಿಳಿಯದವರು ಇತಿಹಾಸ ನಿರ್ಮಿಸಲು ಸಾಧ್ಯವಾಗುವುದಿಲ್ಲ. ೮೦ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಾಧನೆಯೇ ಇಂದಿನ ಮಕ್ಕಳಿಗೆ ದಾರಿದೀಪ,” ಎಂದು ವಿಜಯಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ವಿ.ಎಂ. ಕಿಶೋರ್ ಕುಮಾರ್ ತಿಳಿಸಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ೨೦೨೬ರ ಸಾಲಿನ ಶಾಲಾ ಪ್ರಾರಂಭೋತ್ಸವ, ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷರಾದ ಎಂ. ಸತೀಶ್ ಕುಮಾರ್ ಮಾತನಾಡಿ, “ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶಾಲೆಯು ಹಮ್ಮಿಕೊಳ್ಳುವ ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ರಮಗಳಿಗೂ ಸಂಘದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು,” ಎಂದು ಭರವಸೆ ನೀಡಿದರು.ದೇವನಹಳ್ಳಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಲಲಿತಮ್ಮ ಮಾತನಾಡಿ, ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ಇನ್ನಷ್ಟು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕು,” ಎಂದು ಕರೆ ನೀಡಿದರು.ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಇಕ್ಬಾಲ್ ಮಾತನಾಡಿ, “ವಿದ್ಯಾರ್ಥಿಗಳು ಪ್ರತಿದಿನವೂ ವಾರ್ಷಿಕ ಪರೀಕ್ಷೆಗೆ ಸಿದ್ಧರಾಗುವಂತೆ ತಯಾರಿ ನಡೆಸಿಕೊಂಡು ಶಾಲೆಗೆ ಬರಬೇಕು. ಆಗ ಮಾತ್ರ ಶೇಕಡಾ ೧೦೦ ರಷ್ಟು ಫಲಿತಾಂಶದೊಂದಿಗೆ ವೈಯಕ್ತಿಕ ಸಾಧನೆ ಮಾಡಲು ಸಾಧ್ಯ,” ಎಂದರು.
ಶಾಲೆಯ ಉಪ ಪ್ರಾಂಶುಪಾಲೆ ಕೋಮಲ ಹಾಗೂ ಪುರಸಭಾ ಮಾಜಿ ಅಧ್ಯಕ್ಷೆ ಮತ್ತು ಹಾಲಿ ಸದಸ್ಯೆ ವಿಮಲಾ ಬಸವರಾಜ್ ಮಾತನಾಡಿ, “ವಿದ್ಯಾರ್ಥಿಗಳು ನಾಡಿನ ಇತಿಹಾಸ ಅರಿಯಬೇಕು, ಆಟ-ಪಾಠ ಎರಡರಲ್ಲೂ ಭಾಗವಹಿಸಿ, ಉತ್ತಮ ಪುಸ್ತಕಗಳನ್ನು ಓದುವ ಮೂಲಕ ಜ್ಞಾನಾರ್ಜನೆ ಬೆಳೆಸಿಕೊಂಡು ಊರಿಗೆ ಕೀರ್ತಿ ತರಬೇಕು,” ಎಂದು ಪ್ರೋತ್ಸಾಹಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ , ಹಾರ ಹಾಕಿ, ಬ್ಯಾಗ್, ಸ್ಮರಣ ಸಂಚಿಕೆ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ದಂಪತಿಗಳಾದ ಮಲ್ಲಿಕಾರ್ಜುನ್ ಮತ್ತು ನೀಲಾಂಬಿಕ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಲಲಿತಮ್ಮ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಶಾಲಾ ಮಕ್ಕಳಿಗೆ ನೂತನ ಶಾಲಾ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಯಟ್‌ನ ಉಪನ್ಯಾಸಕರಾದ ವಿನುತ, ಸಿಆರ್‌ಪಿ ದಿನೇಶ್,ಹಿರಿಯ ವಿದ್ಯಾರ್ಥಿಗಳ ಸಂಘದ ಖಜಾಂಚಿ ವಿ. ವಿಶ್ವನಾಥ್, ಸದಸ್ಯರುಗಳಾದ ನಾಗರಾಜ್, ಹೊನ್ನೂರಪ್ಪ, ಎಂ. ಅನ್ನಪೂರ್ಣಮ್ಮ, ಎನ್. ರುದ್ರಮೂರ್ತಿ, ಎಸ್‌ಡಿಎಂಸಿ ಸದಸ್ಯರುಗಳಾದ ವೆಂಕಟೇಶ್, ಪದ್ಮ, ಗೋಪಾಲ್, ಪಿ.ಪಿ.ಆರ್. ರಮೇಶ್, ವಿಮಲಾ ಬಸವರಾಜು, ಆರ್.ಎಂ.ಸಿ.ಟಿ. ಮಂಜುನಾಥ್, ಬೆಸ್ಕಾಂ ಎ.ಇ.ಇ. ವಿಶ್ವಾಸ್, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಹಡಪದ, ಕಾಲೇಜಿನ ಪ್ರಾಂಶುಪಾಲ ಬೈರೇಗೌಡ ಹಾಗೂ ಶಿಕ್ಷಕ ನಾರಾಯಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





























