ಆಸ್ಪತ್ರೆ ಮೂಲೆಯಲ್ಲಿನ ಔಷಧಿ ತ್ಯಾಜ್ಯ ವೀಕ್ಷಿಸಿದ ಟಿಎಚ್‌ಒಖಾಸಗಿ ಮೆಡಿಕಲ್ ಮಾಲೀಕರಿಗೆ ತಿಳುವಳಿಕೆಗೆ ಸೂಚನೆ

ಹುಳಿಯಾರು, ಜ. ೨೪- ಸರ್ಕಾರಿ ಆಸ್ಪತ್ರೆ, ನರ್ಸಿಂಗ್ ಹೋಂ, ಕ್ಲಿನಿಕ್, ಔಷಧಿ ಅಂಗಡಿ ಸೇರಿದಂತೆ ಯಾವುದೆ ಔಷಧೋಪಚಾರ ಮಾಡುವ ಕೇಂದ್ರಗಳ ಅನಪಯುಕ್ತ ಔಷಧಿಗಳನ್ನು ಎಲ್ಲೆಂದರಲ್ಲಿ ಎಸೆಯುವಂತಿಲ್ಲ ಎನ್ನುವ ನಿಯಮ ಇದ್ದರೂ ಸಹ ಹುಳಿಯಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದ ಚರಂಡಿಯಲ್ಲಿ ನಿತ್ಯವೂ ಔಷಧಯುಕ್ತ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ ಎಂಬ ವರಧಿಯನ್ನಾಧರಿಸಿ ಟಿಎಚ್‌ಒ ಡಾ.ಅಜಯ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.


ಪ್ಲಾಸ್ಟಿಕ್ ಕವರ್‌ನಲ್ಲಿ ಬಳಸಲಾದ ಸಿರೆಂಜ್, ಬ್ಯಾಂಡೇಜ್, ಔಷಧಿ ಬಾಟಲ್, ಮಾತ್ರೆಗಳು, ಅವಧಿ ಮುಗಿದಿರುವ ಔಷಧಿಗಳು ಸೇರಿದಂತೆ ಇನ್ನಿತರ ಅರೆಬರೆ ಬಳಸಲಾದ ಔಷಧಿ ತ್ಯಾಜ್ಯ ವಸ್ತುಗಳು ತುಂಬಿ ಎಸೆಯುತ್ತಿರುವುದನ್ನು ದೃಡಪಡಿಸಿಕೊಂಡರು. ಅಲ್ಲದೆ ಚರಂಡಿ ದಡದಲ್ಲಿ ಔಷಧಿ ತ್ಯಾಜ್ಯವನ್ನು ಬೆಂಕಿ ಹಾಕಿ ಸುಡುತ್ತಿರುವುದನ್ನು ಸಹ ಗಮನಿಸಿ ಇದು ಆಸ್ಪತ್ರೆಯ ಅಥವಾ ಮನೆಯ ಅನುಪಯುಕ್ತ ಔಷಧಿ ತ್ಯಾಜ್ಯವಲ್ಲ. ಇದರ ಜತೆ ಟೀ ಲೋಟ, ಹಣ್ಣಿನ ತ್ಯಾಜ್ಯ, ಕುರುಕಲು ತಿಂಡಿಯ ಕವರ್‌ಗಳೂ ಸಹ ಇರುವುದರಿಂದ ಅಂಗಡಿಯವರಾರೋ ತಂದು ಎಸೆಯುತ್ತಿರಬಹುದೆಂದು ಊಹಿಸಿಕೊಂಡರು.


ತಕ್ಷಣ ಖಾಸಗಿ ಔಷಧಂಗಡಿಗಳ ಹಿರಿಯ ಮಾಲೀಕರಾದ ದೇವರಾಜು ಅವರನ್ನು ಸ್ಥಳಕ್ಕೆ ಕರೆಸಿ ಆಸ್ಪತ್ರೆ ಆವರಣದಲ್ಲಿ ನಿತ್ಯ ಅನುಪಯುಕ್ತ ಔಷಧಿ ತ್ಯಾಜ್ಯ ಎಸೆಯುತ್ತಿದ್ದಾರೆ. ಔಷಧಿ ಅಂಗಡಿಯವರೇ ಎಸೆಯುತ್ತಿದ್ದಾರೆಂದು ಆರೋಪಿಸುತ್ತಿಲ್ಲ. ಆದರೂ ಪಟ್ಟಣದ ಔಷಧಂಗಡಿಯವರಿಗೆ ಈ ಬಗ್ಗೆ ತಿಳುವಳಿಕೆ ಮೂಡಿಸುವಂತೆ ಸೂಚಿಸಿದರು.


ಪಟ್ಟಣ ಪಂಚಾಯ್ತಿಯಿಂದ ನಿತ್ಯ ಕಸದ ವಾಹನ ಬರುತ್ತಿದ್ದು ಅವರಿಗೆ ಅಂಗಡಿಗಳ ತ್ಯಾಜ್ಯ ಕೊಡುವಂತೆ ಕೇಳಿಕೊಂಡರು. ಅಲ್ಲದೆ ಆಸ್ಪತ್ರೆ ಹೊರಾಂಗಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ತ್ಯಾಜ್ಯ ಎಸೆಯುತ್ತಿರುವವರನ್ನು ಪತ್ತೆ ಹಚ್ಚಿ ಕೊಟ್ಟರೆ ಕಾನೂನಿನ ರೀತಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೆ ಹೇಳಿದರು.


ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳಾದ ಮಂಜುನಾಥ್, ಸೀನಿಯರ್ ಹೆಲ್ತ್ ಇನ್ಸ್‌ಪೆಕ್ಟರ್ ಶೇಷಾದ್ರಿ, ಅಕೌಂಟೆಂಟ್ ಶ್ರೀನಿವಾಸ್, ಪಪಂ ಸಿಬ್ಬಂದಿ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.


ಆಸ್ಪತ್ರೆಯ ಆವರಣವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಆಸ್ಪತ್ರೆಯ ಡಿ.ಗ್ರೂಪ್ ಸಿಬ್ಬಂದಿಯ ಕೆಲಸ. ಆದರೆ ಆಸ್ಪತ್ರೆ ಒಳಗೆ ಕ್ಲೀನ್ ಇದ್ದಂತೆ ಹೊರಗಡೆ ಇಲ್ಲ. ಹಾಗಾಗಿ ಪಂಚಾಯ್ತಿ ಪೌರ ಕಾರ್ಮಿಕರಿಂದ ಒಮ್ಮೆ ಇಡೀ ಆವರಣವನ್ನು ಕ್ಲೀನ್ ಮಾಡಿಸಿ ಕೊಡುತ್ತೇನೆ. ನಂತರದ ದಿನಗಳಲ್ಲಿ ಕ್ಲೀನ್ ಮಾಡಿಕೊಂಡು ಸ್ವಚ್ಚವಾಗಿಟ್ಟುಕೊಳ್ಳಿ. ಅಲ್ಲದೆ ಸಿಸಿ ಕ್ಯಾಮೆರಾ ಅಳವಡಿಸಲು ಅಗತ್ಯ ಕೇಬಲ್ ಕೊಡಿಸುತ್ತೇನೆ ಎಂದು ಪ.ಪಂ. ಮುಖ್ಯಾಧಿಕಾರಿ ಮಂಜುನಾಥ್ ಭರವಸೆ ನೀಡಿದರು.