
ಕಮಲನಗರ:ಮೇ.30: ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಅಕ್ರಮ ಸಾಗಾಣಿಕೆ ಮತ್ತು ವಿತರಣೆ ವೇಳೆ ಯಾವುದೇ ರೀತಿಯ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕಮಲನಗರ, ಠಾಣಾಕುಶನೂರ ಮತ್ತು ಸಂತಪೂರನಲ್ಲಿ ಮೇ.29ರಂದು 2026-27ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಔರಾದ(ಬಿ) ಕ್ಷೇತ್ರಕ್ಕೆ ಅಗತ್ಯವಿರುವಷ್ಟು ಬಿತ್ತನೆ ಬೀಜ, ರಸಗೊಬ್ಬರ ತರಿಸಲಾಗಿದೆ. ವಿಶೇಷವಾಗಿ ಇಲ್ಲಿ ಹೆಚ್ಚು ಬೆಳೆಸುವ ಸೋಯಾಬೀನ್ ಅಗತ್ಯವಿರುಷ್ಟು ದಾಸ್ತಾನು ಮಾಡಿಕೊಳ್ಳಲಾಗಿದೆ. ಇನ್ನೂ ಬೇಕಿದ್ದರೂ ಅಧಿಕಾರಿಗಳೊಂದಿಗೆ ಮಾತನಾಡಿ ತರಿಸಲು ವ್ಯವಸ್ಥೆ ಮಾಡುತ್ತೇನೆ. ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ ನಿಗದಿತ ದಿನಾಂಕದಿಂದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೀಜ, ರಸಗೊಬ್ಬರ ಪಡೆಯಬಹುದೆಂದು ಹೇಳಿದರು.
ಬಿತ್ತನೆ ಬೀಜ ವಿತರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಗೊಂದಲಗಳು ಉಂಟಾಗಬಾರದು. ಬೀಜ ವಿತರಿಸುವ ದಿನಾಂಕದ ಬಗ್ಗೆ ಮುಂಚಿತವಾಗಿ ಗ್ರಾಮಗಳಲ್ಲಿ ಡಂಗೂರ ಸಾರಿಸಿ ತಿಳಿಸಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ರೈತರೊಂದಿಗೆ ಸೌಜನ್ಯದಿಂದ ವ್ಯವಹರಿಸಬೇಕು. ರೈತರೊಂದಿಗೆ ಜೋರಾಗಿ ಮಾತನಾಡುವುದು, ಕೆಟ್ಟ ಪದಗಳನ್ನು ಬಳಸುವುದು ಅಥವಾ ಹೆಚ್ಚುವರಿ ಹಣ ಪಡೆಯುವುದು ಕಂಡು ಬಂದರೆ ಯಾವುದೇ ಮುಲಾಜಿಲ್ಲದೇ ಶಿಸ್ತು ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
ನಮ್ಮೆಲ್ಲರಿಗೂ ಅನ್ನ ನೀಡಿ ಪೆÇೀಷಿಸುವ ರೈತರ ಬೆಳೆ ಸಮೃದ್ಧವಾಗಿ ಬೆಳೆಯಬೇಕು. ಈ ದಿಶೆಯಲ್ಲಿ ಅವರಿಗೆ ಗುಣಮಟ್ಟದ ಬಿತ್ತನೆ ಬೀಜ ಪೂರೈಸಬೇಕು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಈ ವಿಷಯದಲ್ಲಿ ಅಧಿಕಾರಿಗಳು ಹೆಚ್ಚಿನ ಜಾಗೃತಿ ವಹಿಸಬೇಕು. ಎಲ್ಲಿಯಾದರೂ ಕಳಪೆ ಮಟ್ಟದ ಬಿತ್ತನೆ ಬೀಜ ಪೂರೈಸಿರುವುದು ಕಂಡುಬಂದರೆ ತಕ್ಷಣ ಹಿಂದಿರುಗಿಸಿ ಸರಿಯಾದ ಬೀಜ ತರಿಸಬೇಕು. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು ಎಂದು ಹೇಳಿದರು.
ರೈತರು ಕೂಡ ನಿಗದಿತ ದಿನಾಂಕದಿಂದು ಮಾತ್ರ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪಡೆಯಬೇಕು. ನಿಗದಿತ ಮಿತಿಗಿಂತ ಹೆಚ್ಚು ರಸಗೊಬ್ಬರ ಕೇಳುವುದು, ಅವರ ಅನುಮತಿಯಿಲ್ಲದೇ ಅನ್ಯರ ಪಹಣಿಯಿಂದ ಹೆಚ್ಚುವರಿ ಬೀಜ ಪಡೆಯುವುದು ಮಾಡದೇ ಅಧಿಕಾರಿಗಳಿಗೆ ತಾವೂ ಕೂಡ ಅಗತ್ಯ ಸಹಕಾರ ನೀಡಬೇಕು. ಎಲ್ಲಿಯಾದರೂ ಲೋಪಗಳು ನಡೆಯುವುದು ಗಮನಕ್ಕೆ ಬಂದರೆ ತಕ್ಷಣ ಸಂಬಧಪಟ್ಟ ಅಧಿಕಾರಿಗಳನ್ನು ಅಥವಾ ತಮ್ಮನ್ನು ಸಂಪರ್ಕಿಸಿದರೆ ಸರಿಪಡಿಸಲಾಗುವುದೆಂದು ಹೇಳಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಧೂಳಪ್ಪ, ಮುಖಂಡರಾದ ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ರಂಗರಾವ ಜಾಧವ, ಧನರಾಜ ವಡೆಯಾರ್, ರಾಮಶೆಟ್ಟಿ ಪನ್ನಾಳೆ, ಸಚಿನ ರಾಠೋಡ, ಶಿವರಾಜ ಅಲ್ಮಾಜೆ, ಖಂಡೋಬಾ ಕಂಗಟೆ, ಪ್ರಕಾಶ ಜೀರ್ಗೆ, ಬಂಟಿ ರಾಂಪೂರೆ, ಬಾಲಾಜಿ ಠಾಕೂರ, ಸೋಮನಾಥ ಆಲೂರ, ಮಂಜು ಸ್ವಾಮಿ, ನಾಗಶೆಟ್ಟಿ ಗಾದಗೆ, ಕಿರಣ ಶೆಂಬೆಳ್ಳಿ, ಶಿವಾಂಜಯ ಬಿರಾದಾರ, ರಾಜಪ್ಪ ಸೋರಾಳೆ, ಶಿವಕುಮಾರ ಪಾಂಚಾಳ, ಗಣಪತಿ ದೇಶಪಾಂಡೆ, ಶಿವಾಜಿರಾವ ಕಾಳೆ, ಗುಂಡಪ್ಪ ನಿಡೋದೆ, ಕೇರಬಾ ಪವಾರ, ವಿನಾಯಕ ಜಗದಾಳೆ, ಶಿವಕುಮಾರ ಜೀರ್ಗೆ ಕೃಷಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.

























